ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಭಾಗದ ಮಹಿಳೆಯರು ಹಾಗೂ ಕುಟುಂಬಗಳನ್ನು ಆರ್ಥಿಕವಾಗಿ ಸಬಲಗೊಳಿಸುವ ಜತೆಗೆ ಸ್ವಾವಲಂಬನೆಯ ಬದುಕಿಗೆ ಪ್ರೇರಣೆ ನೀಡುತ್ತಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.

ಬಂಟ್ವಾಳ ಎಸ್ಡಿಎಂ ಕಲ್ಯಾಣ ಮಂಟಪದಲ್ಲಿ ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಬಂಟ್ವಾಳ ಕಸಬಾ “ಎ” ಮತ್ರು “ಸಿ” ಮಣಿಹಳ್ಳ, ಮೂಡನಡಗೋಡು “ಎ” ಹಾಗೂ ಮೂಡನಡಗೋಡು “ಬಿ” ಒಕ್ಕೂಟಗಳ ಪದಗ್ರಹಣ ಹಾಗೂ ಸಾಧನಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಸಹಾಯ ಸಂಘಗಳ ಮೂಲಕ ಉಳಿತಾಯ, ಸಾಲ ಸೌಲಭ್ಯ, ಉದ್ಯಮಶೀಲತೆ ಹಾಗೂ ಪರಸ್ಪರ ಸಹಕಾರದ ಮನೋಭಾವ ಬೆಳೆಸುತ್ತಿರುವುದು ಗ್ರಾಮೀಣ ಆರ್ಥಿಕ ವ್ಯವಸ್ಥೆಗೆ ಉತ್ತಮ ಕೊಡುಗೆಯಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಂತಹ ಸಂಸ್ಥೆಗಳು ಸರ್ಕಾರದ ಯೋಜನೆಗಳ ಜತೆಗೆ ಜನರನ್ನು ತಲುಪಿ ಅವರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರಲು ನೆರವಾಗುತ್ತಿರುವುದು ಅಭಿನಂದನೀಯವಾಗಿದೆ ಎಂದರು.
ಮಾಜಿ ಸಚಿವ ಬಿ. ರಮಾನಾಥ ರೈ ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನರನ್ನು ಸಂಘಟಿಸಿ ಆರ್ಥಿಕ ಹಾಗೂ ಸಾಮಾಜಿಕವಾಗಿ ಮುಂದೆ ತರುವಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಾತ್ರ ಮಹತ್ವದ್ದಾಗಿದೆ ಎಂದರು.
ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರಲ್ಲಿ ಉಳಿತಾಯದ ಅಭ್ಯಾಸ, ಆರ್ಥಿಕ ಶಿಸ್ತು ಮತ್ತು ಸ್ವಾವಲಂಬನೆಯ ಮನೋಭಾವ ಮೂಡಿದೆ. ಗ್ರಾಮೀಣ ಕುಟುಂಬಗಳ ಆರ್ಥಿಕ ಸ್ಥಿರತೆ ಹೆಚ್ಚಿಸುವುದರ ಜತೆಗೆ ಸಮಾಜಮುಖಿ ಚಟುವಟಿಕೆಗಳಲ್ಲಿಯೂ ಸಂಘಗಳ ಸದಸ್ಯರು ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಗಮನಾರ್ಹ. ಜನರ ಬದುಕಿಗೆ ನೇರವಾಗಿ ಸ್ಪಂದಿಸುವ ಇಂತಹ ಯೋಜನೆಗಳು ಮತ್ತಷ್ಟು ವಿಸ್ತರಿಸಬೇಕು ಎಂದು ಅವರು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ನ ಕರಾವಳಿ ಪ್ರಾದೇಶಿಕ ವಿಭಾಗದ ಉಡುಪಿ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಅವರು ದಾಖಲಾತಿ ಹಸ್ತಾಂತರಿಸಿದರು.
ವಾಮದಪದವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಪಿಲಿಂಗಲ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಬಂಟ್ವಾಳ ತಾಲೂಕು ಅಧ್ಯಕ್ಷೆ ಜಯಂತಿ ವಿ. ಪೂಜಾರಿ, ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ನ ಮಾಜಿ ಅಧ್ಯಕ್ಷ ಸುದರ್ಶನ್ ಜೈನ್ ಪಂಜಿಕಲ್ಲು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಜನಜಾಗೃತಿ ವೇದಿಕೆ ಬಂಟ್ವಾಳ ತಾಲೂಕು ಸದಸ್ಯರಾದ ಸದಾನಂದ ಗೌಡ ನಾವೂರು ಹಾಗೂ ಕೃಷ್ಣಪ್ಪ ಪೂಜಾರಿ ಅಲ್ಲಿಪಾದೆ, ಸೇವಾ ಪ್ರತಿನಿಧಿಗಳಾದ ಭಾಸ್ಕರ, ರೋಹಿಣಿ, ಉಷಾ, ಚಂಪಾ, ಸುನೀತಾ, ಪ್ರಫುಲ್ಲಾ, ವಸಂತಿ ಹಾಗೂ ಮೇಲ್ವಿಚಾರಕ ನಾಗರಾಜ್ ಉಪಸ್ಥಿತರಿದ್ದರು.
ಇದೇ ವೇಳೆ ಐದು ಒಕ್ಕೂಟಗಳ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು.
ಬಂಟ್ವಾಳ ಕಸಬಾ ಎ ಒಕ್ಕೂಟದ ಅಧ್ಯಕ್ಷ ರಮೇಶ್ ಪೂಜಾರಿ ಬರ್ದೆಲ್, ಬಂಟ್ವಾಳ ಕಸಬಾ ಸಿ ಅಧ್ಯಕ್ಷ ಮನೋಹರ ಕುಲಾಲ್, ಮಣಿಹಳ್ಳ ಒಕ್ಕೂಟದ ಅಧ್ಯಕ್ಷ ಪದ್ಮನಾಭ ಗೌಡ, ಮೂಡನಡಗೋಡು ಎ ಅಧ್ಯಕ್ಷ ದಿನೇಶ್ ಪೂಜಾರಿ ಹಾಗೂ ಮೂಡನಡಗೋಡು ಬಿ ಅಧ್ಯಕ್ಷ ಭಾಸ್ಕರ ಕುಲಾಲ್ ಅವರು ಅಧಿಕಾರ ಸ್ವೀಕರಿಸಿದರು.
ಯೋಜನೆಯ ಬಂಟ್ವಾಳ ವಲಯದ ಕಾರ್ಯನಿರ್ವಹಣಾಧಿಕಾರಿ ಜಯಾನಂದ ಸ್ವಾಗತಿಸಿದರು. ಪ್ರಫುಲ್ಲಾ ವರದಿ ವಾಚಿಸಿದರು. ಒಕ್ಕೂಟದ ಸದಸ್ಯ ಉಮಾಶಂಕರ್ ವಂದಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಒಕ್ಕೂಟಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಪ್ರಗತಿಬಂಧು ಸ್ವಸಹಾಯ ಸಂಘಗಳ ಸದಸ್ಯರು ಮತ್ತಿತರರು ಭಾಗವಹಿಸಿದ್ದರು.
