ಬಂಟ್ವಾಳ:  ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ಶ್ರೀ ಕ್ಷೇತ್ರ ಕಾರಿಂಜದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳ ಜತೆಗೆ ಸಾರ್ವಜನಿಕರು, ಸ್ಥಳೀಯ ಸಂಸ್ಥೆಗಳು ಮತ್ತು ವಿವಿಧ ಸಂಘ-ಸಂಸ್ಥೆಗಳ ಸಹಕಾರವೂ ಅಗತ್ಯವಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ| ಬ್ರಿಜೇಶ್ ಚೌಟ ಹೇಳಿದರು.
ಭಾನುವಾರ ತಾಲೂಕಿನ ಕಾವಳಪಡೂರು ಗ್ರಾಮ ಪಂಚಾಯತ್ ನೇತೃತ್ವದಲ್ಲಿ, ಪ್ಯಾರಡೀಪ್ ಫಾಸ್ಫೇಟ್ಸ್ ಲಿಮಿಟೆಡ್ (ಪಿಪಿಎಲ್), ಪಣಂಬೂರು, ಮಂಗಳೂರು ಸಂಸ್ಥೆಯ ಸಿಎಸ್‌ಆರ್ ಯೋಜನೆಯ ಮೂಲಕ ಹಾಗೂ ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರ ಸಹಕಾರದಿಂದ ಶ್ರೀ ಕ್ಷೇತ್ರ ಕಾರಿಂಜದ ರಥಬೀದಿಯಲ್ಲಿ ನಿರ್ಮಿಸಲಾದ ಸಾರ್ವಜನಿಕ ಶೌಚಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಶ್ರೀ ಕ್ಷೇತ್ರ ಕಾರಿಂಜವು ಧಾರ್ಮಿಕ ಮಾತ್ರವಲ್ಲದೆ ಐತಿಹಾಸಿಕ ಹಾಗೂ ಪ್ರಕೃತಿ ಸೌಂದರ್ಯದ ದೃಷ್ಟಿಯಿಂದಲೂ ವಿಶೇಷ ಸ್ಥಾನ ಹೊಂದಿದೆ. ಕ್ಷೇತ್ರಕ್ಕಾಗಮಿಸುವ ಭಕ್ತರು ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವುದು ಮುಖ್ಯವಾಗಿದ್ದು, ಕ್ಷೇತ್ರದ ಅಭಿವೃದ್ಧಿ ಹಾಗೂ ಸ್ವಚ್ಛತೆ ವಿಚಾರದಲ್ಲಿ ಸ್ಥಳೀಯಾಡಳಿತ, ದೇವಾಲಯದ ಆಡಳಿತ ಮಂಡಳಿ ಮತ್ತು ಸಾರ್ವಜನಿಕರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.


ಸಿಎಸ್‌ಆರ್ ಯೋಜನೆಯ ಮೂಲಕ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ನೆರವು ನೀಡಿದ ಪ್ಯಾರಡೀಪ್ ಫಾಸ್ಫೇಟ್ಸ್ ಲಿಮಿಟೆಡ್ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದ ಅವರು, ಕೈಗಾರಿಕಾ ಸಂಸ್ಥೆಗಳು ತಮ್ಮ ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ ಸ್ಥಳೀಯ ಸಮುದಾಯದ ಅಗತ್ಯಗಳಿಗೆ ಸ್ಪಂದಿಸುವುದು ಮಾದರಿಯಾಗಿದೆ ಎಂದರು.
ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಆದ್ಯತೆ: ಶಾಸಕ  ನಾಯ್ಕ್


ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ, ಬಂಟ್ವಾಳ ಕ್ಷೇತ್ರದಲ್ಲಿ ಧಾರ್ಮಿಕ ಹಾಗೂ ಐತಿಹಾಸಿಕ ಮಹತ್ವ ಹೊಂದಿರುವ ದೇವಾಲಯಗಳ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡಲಾಗುತ್ತಿದೆ. ದೇವಾಲಯಗಳು ಕೇವಲ ಪೂಜಾ ಕೇಂದ್ರಗಳಲ್ಲ; ಅವು ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಧಾರ್ಮಿಕ ನಂಬಿಕೆಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಪ್ರಮುಖ ಕೇಂದ್ರಗಳಾಗಿವೆ ಎಂದು ಹೇಳಿದರು.
ಕ್ಷೇತ್ರಕ್ಕಾಗಮಿಸುವ ಭಕ್ತರಿಗೆ ಉತ್ತಮ ಮೂಲಸೌಕರ್ಯ ಕಲ್ಪಿಸುವುದು ಕ್ಷೇತ್ರದ ಅಭಿವೃದ್ಧಿಯ ಪ್ರಮುಖ ಭಾಗವಾಗಿದೆ. ಸಾರ್ವಜನಿಕ ಶೌಚಾಲಯದಂತಹ ಸೌಲಭ್ಯಗಳು ಕೂಡ ಭಕ್ತರು ಮತ್ತು ಪ್ರವಾಸಿಗರ ದೃಷ್ಟಿಯಿಂದ  ಅತ್ಯಂತ ಮಹತ್ವದ್ದಾಗಿವೆ. ಮುಂದಿನ ದಿನಗಳಲ್ಲಿಯೂ ಕ್ಷೇತ್ರದ  ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡಲಾಗುವುದು ಎಂದು ಅವರು ತಿಳಿಸಿದರು.


ಪ್ಯಾರಡೀಪ್ ಫಾಸ್ಫೇಟ್ಸ್ ಲಿಮಿಟೆಡ್ (ಪಿಪಿಎಲ್) ಸಂಸ್ಥೆಯು ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ  ಯೋಜನೆಯಡಿ ವಿವಿಧ ಜನಪರ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳಿಗೆ ನೆರವು ನೀಡುತ್ತಿದ್ದು, ಶ್ರೀ ಕ್ಷೇತ್ರ ಕಾರಿಂಜದಲ್ಲಿ  ಸಾರ್ವಜನಿಕರ ಅನುಕೂಲಕ್ಕಾಗಿ ಶೌಚಾಲಯ ನಿರ್ಮಾಣಕ್ಕೆ ಸಂಸ್ಥೆ ಕೊಡುಗೆ ನೀಡಿದೆ.
ಕೈಗಾರಿಕಾ ಸಂಸ್ಥೆಗಳು ತಮ್ಮ ವ್ಯವಹಾರದ ಜತೆಗೆ ಸಮಾಜದ ಅಗತ್ಯಗಳಿಗೆ ಸ್ಪಂದಿಸುವ ಮೂಲಕ ಸ್ಥಳೀಯಾಭಿವೃದ್ಧಿಯಲ್ಲಿಯು ಪಾಲುದಾರ ರಾಗುತ್ತಿರುವುದು ಶ್ಲಾಘನೀಯವಾಗಿದೆ ಎಂದರು.


 ಪಿಪಿಎಲ್ ಪಣಂಬೂರಿನ ಎಂಸಿಎಂ ಷಣ್ಮುಗಂ, ಕಾವಳಪಡೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಚನ್ ಕುಮಾರ್, ಶ್ರೀ ಕ್ಷೇತ್ರ ಕಾರಿಂಜದ ಮಾಜಿ ಆಡಳಿತ ಮೊಕ್ತೇಸರ ಪಿ. ಜಿನರಾಜ ಆರಿಗ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವೀರೇಂದ್ರ ಅಮೀನ್, ಕಾವಳಪಡೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಕಾವಳಪಡೂರು ಗ್ರಾ. ಪಂ. ನಿಕಟಪೂರ್ವ ಅಧ್ಯಕ್ಷ ಲಕ್ಷ್ಮಿನಾರಾಯಣ ಶರ್ಮ, ಕಾವಳಮುಡೂರು ಗ್ರಾ.ಪಂ.ನ ಅಧ್ಯಕ್ಷ ಅಜಿತ್ ಶೆಟ್ಟಿ ಕಾರಿಂಜ, ಕುಲಾಲ ಸಮಾಜ ಸೇವಾ ಸಂಘ (ರಿ.) ವಗ್ಗದ ಅಧ್ಯಕ್ಷ ಪುರುಷೋತ್ತಮ ಕುಲಾಲ್ ಹೆರೊಟ್ಟು, ಬಿಜೆಪಿ ಬಂಟ್ವಾಳ ಮಂಡಲದ ಕಾರ್ಯದರ್ಶಿಸುದರ್ಶನ್ ಬಜ,ಉದ್ಯಮಿಗಳಾದ ಶ್ರುತಾಂಜನ್ ಜೈನ್ ಅಲಂಪುರಿ ಗುತ್ತು,ಕಾವಳಮೂಡೂರು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷೆ ಜಯಲಕ್ಷ್ಮಿ ದೇವಾಡಿಗ, ದೇವಳದ ವ್ಯವಸ್ಥಾಪನ  ಸಮಿತಿಯ ಸದಸ್ಯರಾದ ಪ್ರೇಮನಾಥ  ಪೂಜಾರಿ, ಉದಯ್ ಕುಮಾರ್, ಜನಾರ್ದನ ಭಟ್ ,ಸ್ಥಳೀಯ ಪ್ರಮುಖರಾದ ಸತೀಶ್ ಶೆಟ್ಟಿ ಮಧ್ವ, ಜಯಪ್ರಸನ್ನ  ನಿಡ್ವಾಳ್, ಚಂದಪ್ಪ ಮೂಲ್ಯ ಕಾಡಬೆಟ್ಟು
ಮಾಜಿ ಪಂಚಾಯತ್ ಸದಸ್ಯರಾದ ಮೋಹನ್ ಆಚಾರ್ಯ ಕೊಡಂಬೆಟ್ಟು, ಉಮೇಶ್ ಅಜ್ಜಿಬಾಕಿಮಾರು,ಅನುಪ್ ರಾಜ್ ಮಯ್ಯ, ಶರ್ಮಿತ್ ಜೈನ್,  ಶಿವರಾಮ ಕುಲಾಲ್, ಪುರುಷೋತ್ತಮ ಕುಲಾಲ್ ಮೊದಲಾದವರು
ಉಪಸ್ಥಿತರಿದ್ದರು. 

By Suddi9

Leave a Reply

Your email address will not be published. Required fields are marked *