ಬಂಟ್ವಾಳ: ಕಡೆಶಿವಾಲಯ ಗ್ರಾಮದ ದಾಸಕೋಡಿ ಕಲ್ಲಾಜೆ ನಿವಾಸಿ ಯಾಕುಬ್ (55) ಹತ್ಯಾ ಪ್ರಕರಣದ ಶಂಕಿತ ಆರೋಪಿ, ಮಂಗಳೂರು ತಾಲೂಕು ಬೆಳ್ಮ ಗ್ರಾಮದ ದೇರಳಕಟ್ಟೆ ಅಡ್ಕಾರ್ಪಡ್ಪು-ಬದಿಯಾರ್ ನಿವಾಸಿ ಅಬೂಬಕ್ಕರ್ರ ಮಗ ಖಾಸಿಂ(32) ತಲೆ ಮರೆಸಿಕೊಂಡಿದ್ದು ಮಾಹಿತಿ ತಿಳಿದವರು ಬಂಟ್ವಾಳ ವೃತ್ತ ನಿರೀಕ್ಷಕರ ಕಛೇರಿ ಸಂಪರ್ಕಿಸಲು ತಿಳಿಸಿದ್ದಾರೆ.

ನ. 11ರಂದು ತಡರಾತ್ರಿ ಮೂರುಗಂಟೆ ಸುಮಾರಿಗೆ ಮೃತ ಯಾಕುಬ್ ಮನೆಯಲ್ಲಿ ಗಾಢ ನಿದ್ರೆಯಲ್ಲಿದ್ದ ಸಂದರ್ಭ ಅರೆಯುವ ಕಲ್ಲಿನ ಗುಂಡನ್ನು ತಲೆ ಎತ್ತಿಹಾಕಿ ಕೊಲೆ ನಡೆಸಲಾಗಿತ್ತು. ಮೃತರ ಪುತ್ರಿ ಜಮಿಳಾಳನ್ನು ಖಾಸಿಂ ಮದುವೆ ಆಗಿದ್ದು ಅವರಲ್ಲಿ ಉಂಟಾದ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅವಳು ತವರು ಮನೆಗೆ ಬಂದಿದ್ದಳು.
ಗಂಡನ ದೈಹಿಕ ಮತ್ತು ಮಾನಸಿಕ ಹಿಂಸೆಯಿಂದ ಪತ್ನಿಯು ತವರಿಗೆ ಮರಳಿದ್ದು ತಂದೆಯ ಮನೆಯಲ್ಲಿ ವಾಸ್ತವ್ಯ ಹೊಂದಿದ್ದಳು. ಇದರಿಂದ ಸಿಟ್ಟಾಗಿದ್ದ ಆರೋಪಿಯು ಪತ್ನಿಯನ್ನು ಕೊಲ್ಲುವ ಉದ್ದೇಶದಿಂದ ಬಂದಿದ್ದು ಅದೇ ದಿನ ಆಕೆಯು ಹತ್ತಿರದ ಸಂಬಂಧಿಕರ ಮನೆಯಲ್ಲಿ ಮಲಗುವುದಕ್ಕೆ ಹೋಗಿದ್ದರು.
ಮನೆಯ ಹೊರ ವರಾಂಡ ಚಾವಡಿಯಲ್ಲಿ ಮೃತರು ಮಲಗಿದ್ದು ಆರೋಪಿಯು ಅಡುಗೆ ಮನೆಗೆ ಹೊಕ್ಕು ಆರೆಯುವ ಕಲ್ಲಿನ ಗುಂಡನ್ನು ಎತ್ತಿ ತಂದು ತಲೆಗೆ ಹಾಕಿ ಕೊಲೆ ನಡೆಸಿದ್ದಾನೆ ಎಂಬುದಾಗಿ ತನಿಖೆಯ ಸಂದರ್ಭದಲ್ಲಿ ಪೊಲೀಸರು ಶಂಕಿಸಿದ್ದರು. ಆರೋಪಿಯು ತನ್ನ ಪತ್ನಿಯಲ್ಲೂ ಇದೇ ಮಾತನ್ನು ಹೇಳಿದ್ದಾಗಿ ತಿಳಿದು ಬಂದಿತ್ತು. ಕಲ್ಲು ಎತ್ತಿ ಹಾಕಿದ ಸಂದರ್ಭ ಉಂಟಾದ ಶಬ್ದ ಕೇಳಿ ಎದ್ದು ಬಂದಿದ್ದ ಮನೆಮಂದಿ ಒಬ್ಬಾತ ಓಡುತ್ತಿದ್ದು ಆತನಲ್ಲಿ ಆರೋಪಿಯ ಚಹರೆಯನ್ನು ಗಮನಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು
