ಬಂಟ್ವಾಳ: ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ  ಕಂದಾಯ ಇಲಾಖೆಗೆ ಸಂಬಂಧಿಸಿದ ಹೆಚ್ಚುವರಿ ಕೆಲಸದ ಹೊರೆ ಹೊರಿಸಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ಗ್ರಾ.ಪಂ.ನೌಕರರ ಶ್ರೇಯೋಭಿವೃದ್ದಿ ಸಂಘದ ( ಆರ್.ಡಿ.ಪಿ.ಆರ್.) ಬಂಟ್ವಾಳ ತಾಲೂಕು ಘಟಕದ ವತಿಯಿಂದ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಸೋಮವಾರ ಬಂಟ್ವಾಳ ತಾಲೂಕು ಪಂಚಾಯತ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಗ್ರಾಮ ಪಂಚಾಯತ್ ಸಿಬ್ಬಂದಿಗಳು ಈಗಾಗಲೇ ಪಂಚಾಯತ್ ಚುನಾವಣೆಗೆ ಸಂಬಂಧಿಸಿದ ತುರ್ತು ಕಾರ್ಯ, ಎಸ್‌ಐಆರ್ ಪ್ರಕ್ರಿಯೆ, ಬಿಎಲ್‌ಒ ಕರ್ತವ್ಯ, ಜನಗಣತಿ, ಡಿಸಿಎಚ್‌ಬಿ ಸೇರಿದಂತೆ ವಿವಿಧ ಇಲಾಖೆಗಳ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು,ಈ ನಡುವೆ ಹೆಚ್ಚುವರಿಯಾಗಿ ಜಾತಿ, ಆದಾಯ ಹಾಗೂ ಶಾಶ್ವತ ನಿವಾಸ ಪ್ರಮಾಣಪತ್ರಗಳನ್ನು ಮನೆ ಮನೆಗೆ ವಿತರಿಸುವ ಕಾರ್ಯಕ್ಕು ಗ್ರಾಮ ಪಂಚಾಯತ್ ಸಿಬ್ಬಂದಿಗಳನ್ನೇ ನಿಯೋಜಿಸಿ ಸರಕಾರ ಆದೇಶಿಸಿದ್ದು,ಇದನ್ನು  ಹಿಂಪಡೆಯುವಂತೆ ಪ್ರತಿಭಟನಾಕಾರ ಗ್ರಾ.ಪಂ.ಸಿಬ್ಬಂದಿಗಳು ಆಗ್ರಹಿಸಿದರು.

ಅದೇರೀತಿ ವಿಬಿಜಿ, ರಾಮ್‌ಜಿ ಮಾನವ ದಿನಗಳ ಗುರಿ, ಮನೆ ತೆರಿಗೆ ಸಂಗ್ರಹ, ನೀರಿನ ತೆರಿಗೆ ಮೀಟರ್‌ ರೀಡಿಂಗ್, ಸಾಮಾಜಿಕ ಲೆಕ್ಕಪರಿಶೋಧನೆ, ಸ್ಥಳೀಯ ಲೆಕ್ಕಪರಿಶೋಧನೆ, ಅದಾಲತ್ ಸಭೆಗಳು, 11-ಬಿ ಖಾತೆ ಅಭಿಯಾನ, ಗ್ರಾಮಸಭೆ, ವಿಶೇಷ ಗ್ರಾಮಸಭೆ ಹಾಗೂ ಪ್ರತಿ ತಿಂಗಳ ಸ್ವಚ್ಛತಾ ಕಾರ್ಯಕ್ರಮ ಸೇರಿದಂತೆ ಹಲವು ಜವಾಬ್ದಾರಿಗಳನ್ನು ಕೂಡ ಗ್ರಾ.ಪಂ. ಸಿಬ್ಬಂದಿಗಳು ನಿರ್ವಹಿಸುತ್ತಿದ್ದು,ಕಂದಾಯ ಇಲಾಖೆಗೆ ಸಂಬಂಧಿಸಿದ
ಜಾತಿ, ಆದಾಯ ಹಾಗೂ ಶಾಶ್ವತ ನಿವಾಸ ಪ್ರಮಾಣಪತ್ರ ವಿತರಣೆಯ ಹೊಣೆಯನ್ನು ತಮಗೆ  ಹೆಚ್ಚುವರಿಯಾಗಿ ಹೊರಿಸಿದ್ದು ಸರಿಯಲ್ಲ, ಈ ಕರ್ತವ್ಯಕ್ಕೆ ಯಾವುದೇ ಗೌರವಧನ ಅಥವಾ ಭತ್ಯೆ ನೀಡುವ ಕುರಿತು ಆದೇಶದಲ್ಲಿ ಉಲ್ಲೇಖವಿಲ್ಲ. ಹಾಹಾಗಿ ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಲಾಗಿದೆ.
ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ  ಅನ್ಯ ಇಲಾಖೆಗಳ ಯಾವುದೇ ಕೆಲಸವನ್ನು ವಹಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾ ನಿರತ ಗ್ರಾ.ಪಂ.ಸಿಬ್ಬಂದಿಗಳಿ ಒತ್ತಾಯಿಸಿದರು.
ಬಳಿಕ ತಾ.ಪಂ.ನಆಡಳಿತ ವಿಭಾಗದ ಅಸಿಸ್ಟೆಂಟ್ ಡೈರೆಕ್ಟರ್ ವಿಜಯ ಶಂಕರ್ ಅಳ್ವ ಅವರ ಮೂಲಕ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ  ಸಂಘದ ಪದಾಧಿಕಾರಿಗಳು, ಪ್ರಮುಖರು ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *