ಬಂಟ್ವಾಳ : ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘವು 2025-2026ನೇ ಸಾಲಿನಲ್ಲಿ 332 ಲಕ್ಷ ರೂ. ವ್ಯವಹಾರ ನಡೆಸಿ 24.30 ಲಕ್ಷ ರೂ. ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ. ರವೀಂದ್ರ ಕಂಬಳಿ ತಿಳಿಸಿದ್ದಾರೆ.ಮಂಗಳವಾರ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸದಸ್ಯರಿಗೆ ಶೇ.15 ಡಿವಿಡೆಂಟ್ ನ್ನು ಪ್ರಕಟಿಸಿದರು.

ಸಂಘದ ಪಾಲು ಬಂಡವಾಳವು 11.91ಲಕ್ಷ ರೂ. ಮೀರಿದ್ದು 1696 ಲಕ್ಷ ರೂ. ಠೇವಣಿ ಹೊಂದಿದೆ. ದುಡಿಯುವ ಬಂಡವಾಳವು 1928ಲಕ್ಷ ರೂ. ಗಳಿದ್ದು, ಯಾವುದೇ ಬ್ಯಾಂಕಿನ ಸಾಲವಿಲ್ಲದೆ ಸಂಘವು ವರ್ಷಂತ್ಯಾಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಸಹಕಾರಿ ಸಂಘದಲ್ಲಿ 1357ಲಕ್ಷ ಠೇವಣಿ ಹೂಡಿದೆ. 643 ಲಕ್ಷ ರೂ. ಹೊರಬಾಕಿ ಸಾಲ ಇರುತ್ತದೆ ಎಂದ ಅವರು ಸಂಘವು ಪ್ರಸಕ್ತ ಸಾಲಿನಲ್ಲಿಯು ಲೆಕ್ಕಪರಿಶೋಧನಾ ವರದಿಯಲ್ಲು ‘ಎ’ ವರ್ಗವನ್ನು ಪಡೆದುಕೊಂಡಿ ರುತ್ತದೆ.ಸಂಘದ ಎಲ್ಲಾ ಶಾಖೆಗಳು ಕೂಡ ಗಣಕೀಕೃತವಾಗಿದ್ದು ಯಶಸ್ಸಿನತ್ತ ಮುನ್ನಡೆಯುತ್ತಿದೆ ಎಂದರು.
1960ರಲ್ಲಿ ಸ್ಥಾಪನೆಯಾದ ಸಂಘದ ಕೇಂದ್ರ ಕಛೇರಿಯು ಬಿ.ಮೂಡ ಗ್ರಾಮದ ಪೊನ್ನೋಡಿಯಲ್ಲಿ ಸ್ವಂತ ನಿವೇಶನದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ 6 ಗೋದಾಮುಗಳನ್ನು ಹೊಂದಿದ್ದು,1 ಗೋದಾಮನ್ನು ಪಡಿತರ ವಿತರಣೆಗೆ ಉಪಯೋಗಿಸಿ, 2 ಗೋದಾಮುಗಳನ್ನು ಬಾಡಿಗೆಗೆ ನೀಡಲಾಗಿದೆ. ತಾಲೂಕಿನ 60% ಪಡಿತರ ಸಾಮಾಗ್ರಿಗಳನ್ನು ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸುತ್ತಿದ್ದು, ಬಂಟ್ವಾಳ ಶಾಖೆಯಲ್ಲಿ ರೈತರ ಅನುಕೂಲಕ್ಕಾಗಿ ಕ್ರಿಮಿನಾಶಕ,ಕೃಷಿ ಉಪಕರಣ ಹಾಗೂ ಇನ್ನಿತರ ಸಾಮಾಗ್ರಿಗಳನ್ನು ಮಾರಾಟ ಮಾಡುವ ವ್ಯವಸ್ಥೆಯು ಇದೆ ಎಂದರು. ಬಂಟ್ವಾಳದಲ್ಲಿ ಬ್ಯಾಂಕಿಂಗ್ ವ್ಯವಹಾರ ಹಾಗೂ ನ್ಯಾಯಬೆಲೆ ಅಂಗಡಿಯ ಮುಖಾಂತರ ಜನರಿಗೆ ಪಡಿತರ ವಿತರಣಾ ವ್ಯವಸ್ಥೆಯನ್ನು ಹೊಂದಿರುತ್ತದೆ ಎಂದರು.
ಬಿ.ಸಿ.ರೋಡ್ ಮತ್ತು ತುಂಬೆಯಲ್ಲಿ ಸಂಘವು ಸ್ವಂತ ಕಟ್ಟಡವನ್ನು ಹೊಂದಿದ್ದು ಈ ಕಟ್ಟಡವನ್ನು ಬಾಡಿಗೆಗೆ ಕೊಡಲಾಗಿದೆ. ಫರಂಗಿಪೇಟೆ ಶಾಖೆ ಯಲ್ಲಿ ಜನರ ಅನುಕೂಲಕ್ಕಾಗಿ ಚಿನ್ನಾಭರಣ, ವಾಹನ, ಮನೆ, ವೈಯಕ್ತಿಕ ಸಾಲದೊಂದಿಗೆ ಇ-ಸ್ಟ್ಯಾಂಪಿಂಗ್ ವ್ಯವಹಾರವನ್ನು ಕೂಡ ಮಾಡಲಾಗುತ್ತಿದೆಯಲ್ಲದೆ ನ್ಯಾಯಬೆಲೆ ಅಂಗಡಿಯ ಮೂಲಕ ಜನರಿಗೆ ಪಡಿತರ ವಿತರಣಾ ವ್ಯವಸ್ಥೆಯು ಇರುತ್ತದೆ ಎಂದು ಅಧ್ಯಕ್ಷ ರವೀಂದ್ರ ಕಂಬಳಿ ತಿಳಿಸಿದರು.
ಸಂಘದ ಸದಸ್ಯರು,ಸಿಬ್ಬಂದಿಗಳೆಲ್ಲರ ಒಗ್ಗಟ್ಟಿನ ಫಲವಾಗಿ ಜಿಲ್ಲಾ ಮಟ್ಟದಲ್ಲಿ ಉತ್ತಮ ಸಾಧನೆ ದಾಖಲಿಸಿದೆ. ಸಹಕಾರ ಚಟುವಟಿಕೆಗಳ ಜತೆಗೆ ವಿವಿಧ ಸಮಾಜಮುಖಿ ಕಾರ್ಯಗಳನ್ನು ಸಂಘವು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದು ಹೇಳಿದರು.
ಇದೇ ವೇಳೆ ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಹಿರಿಯ ಸಹಕಾರಿಗಳಾದ ಜಯರಾಮ ಶೆಟ್ಟಿ, ಬಿ.ಟಿ. ನಾರಾಯಣ ಭಟ್, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಅವರು ಮಹಸಭೆಯನ್ನು ಉದ್ಘಾಟಿಸಿ ದೀಪ ಬೆಳಗಿಸಿ ಚಾಲನೆ ನೀಡಿದರು.
ಸಂಘದ ಉಪಾಧ್ಯಕ್ಷ ಮೋಹನ ಆಚಾರ್ಯ, ನಿರ್ದೇಶಕರುಗಳಾದ ಜ್ಞಾನೇಶ್ವರ ಪ್ರಭು, ವೆಂಕಟೇಶ್ ನಾವುಡ, ಜಯರಾಮ ಕೆ.,ಡಿ. ತನಿಯಪ್ಪ ಗೌಡ, ದಿನೇಶ್ ಪೂಜಾರಿ,ನಾರಾಯಣ ಪೂಜಾರಿ,ಉದಯಕುಮಾರ್ ಎ., ಸಂತೋಷ್ ಕುಮಾರ್ ಶೆಟ್ಟಿ, ಶೀಲಾ, ಸವಿತಾ ಎಫ್. ಡಿ. ಸೋಜ, ಕೃಷ್ಣಮೂರ್ತಿ ಬಿ. ಕೆ.,ರಾಮ ನಾಯ್ಕ ವೇದಿಕೆಯಲ್ಲಿದ್ದರು.
ಸಂಘದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಯು. ಧರ್ಮಪಾಲ ಭಂಡಾರಿ ಅವರು ವಾರ್ಷಿಕ ವರದಿ,ಲೆಕ್ಕಪತ್ರವನ್ನು ಸಭೆಗೆ ಮಂಡಿಸಿದರು.ಇದಕ್ಕೆ ಸಭೆಯಲ್ಲಿ ಅಂಗೀಕಾರ ಪಡೆಯಲಾಯಿತು.
ನಿರ್ದೇಶಕ ಪ್ರಮೋದ್ ಕುಮಾರ್ ರೈ ವಂದಿಸಿದರು.
