ಬಂಟ್ವಾಳ:ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಟಾನ (ರಿ)ಮೆಲ್ಕಾರ್ ಇದರ ಆಶ್ರಯದಲ್ಲಿ ಹಿರಿಯರ ಚಿಂತನಾ ಸಮಾವೇಶವು ಪಾಣೆಮಂಗಳೂರು ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನದಲ್ಲಿ ಅಗಸ್ಟ್ ೯ ರಂದು ನಡೆಯಲಿದೆ ಎಂದು ಪ್ರತಿಷ್ಟಾನ ಅಧ್ಯಕ್ಷ ಕೈಯೂರು ನಾರಾಯಣ ಭಟ್ ತಿಳಿಸಿದ್ದಾರೆ.
ಬುಧವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಸಮಾವೇಶಕ್ಕೆ ಮುನ್ನ ಪೂರ್ವಾಹ್ನ ೭.೩೦ರಿಂದ ಗಣಹೋಮ, ರುದ್ರಪಠಣ ನಡೆಯಲಿದೆ.ಬಳಿಕ ಪ್ರಸಿದ್ಧ ಗಮಕಿ ಮಂಜುಳಾ ಸುಬ್ರಮಣ್ಯ ಭಟ್ ಮಂಚಿ ಗಮಕ ವಾಚನ ಮಾಡಲಿದ್ದು ಈಶ್ವರ ಭಟ್ ಗುಂಡ್ಯಡ್ಕ ವ್ಯಾಖ್ಯಾನ ಮಾಡುವರು ಎಂದು ತಿಳಿಸಿದರು.

ತದ ನಂತರ ನಡೆಯುವ ಹಿರಿಯರ ಚಿಂತನಾ ಸಮಾವೇಶವನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಘುನಾಥ ಸೋಮಯಾಜಿ ಅವರು ಉದ್ಘಾಟಿಸಲಿದ್ದು,ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಸ್ವಾಮಿ ಚೈತನ್ಯಾನಂದಜೀ ಅವರು ಆಶೀರ್ವಚನ ನೀಡಲಿದ್ದಾರೆ. ಈ ಸಂದರ್ಭ ಮೇರಮಜಲು ಶ್ರೀಮಾತಾ ಲಕ್ಷಣಿ ಶಾಂತಿಧಾಮ( ವೃದ್ಧಾಶ್ರಮ)ದ ಸಂಚಾಲಕ ಹರೀಶ್ ಪೆರ್ಗಡೆ,ನಿವೃತ್ತ ಮುಖ್ಯೋಪಾದ್ಯಾಯರಾದ ನಾರಾಯಣ ನಾಯಕ್ ಕರ್ಪೆ ಮತ್ತು ಹಿರಿಯ ಸಾಮಾಜಿಕ ಕಾರ್ಯಕರ್ತರಾದ ಸಂಜೀವ ನಾಯಕ್ ಕಲ್ಲೆಗ ಇವರನ್ನು ಸನ್ಮಾನಿಸಲಾಗುವುದು ಎಂದರು.
ಬಳಿಕ ವಿಶ್ರಾಂತ ಕುಲಪತಿ ಡಾ. ಚಿನ್ನಪ್ಪ ಗೌಡ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಚಿಂತನ-ಮಂಥನ ವಿಚಾರಗೋಷ್ಠಿಯಲ್ಲಿ “ಕೌಟುಂಬಿಕ ವ್ತವಸ್ಥೆ- ಮಾನಸಿಕ ಆರೋಗ್ಯ ದ ಕುರಿತು ಡಾ.ರಮೀಳಾ ಶೇಖರ್ ಹಾಗೂ ನಿಶಾಮುಕ್ತ ಜಾಗೃತಿ ಎಂಬ ವಿಷಯದ ಕುರಿತು ಚೆನ್ನಯ್ಯ ಸ್ವಾಮಿ ಅವರು ವಿಚಾರ ಮಂಡಿಸಲಿದ್ದಾರೆ.ಕೊನೆಗೆ ಮಂಗಳೂರು ಕೇಶವ ಸ್ಮೃತಿ ಸಂವರ್ಧನ ಸಮಿತಿಯ ಕಾರ್ಯದರ್ಶಿ ಗಜಾನನ ಪೈ ತೋನ್ಸೆ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.
ಕಳೆದ ಆರು ವರ್ಷಗಳಿಂದ ಮೆಲ್ಕಾರ್ ನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಹಿರಿಯರ ಸೇವಾ ಪ್ರತಿಷ್ಠಾನ ದ.ಕ. ಮತ್ತು ಕಾಸರಗೋಡು ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿದೆ.50 ವರ್ಷಮೇಲ್ಪಟ್ಟವರು ಪ್ರತಿಷ್ಠಾನಕ್ಕೆ ಸೇರಲು ಅವಕಾಶವಿದೆ.ಎರಡು ಜಿಲ್ಲೆ,ತಾಲೂಕುಗಳು ಸೇರಿದಂತೆ ಒಟ್ಟು 380 ಪದಾಧಿಕಾರಿಗಳನ್ನು ಹೊಂದಿದೆ.ವಿವಿಧ ಹುದ್ದೆಯಲ್ಲಿದ್ದು,ಪ್ರಸ್ತುತ ನಿವೃತ್ತರಾದ ಹಲವಾರು ಹಿರಿಯರು ಪ್ರತಿಷ್ಠಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು,ಅವರ ಅನುಭವವನ್ನು ಪಡೆದು ಕಿರಿಯರಿಗೆ ಮಾರ್ಗದರ್ಶನ ಸಹಿತ ಹಲವಾರು ಸಮಾಜಮುಖಿ ಚಟುವಟಿಕೆ, ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಹಿರಿಯ ನಾಗರಿಕರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು, ಸಮಾಜದ ಪ್ರಸ್ತುತ ಬೆಳವಣಿಗೆಗಳ ಕುರಿತು ಚರ್ಚಿಸಲು ಹಾಗೂ ಆರೋಗ್ಯಕರ ಮತ್ತು ಸಕ್ರಿಯ ಜೀವನಶೈಲಿಯ ಬಗ್ಗೆ ಅರಿವು ಮೂಡಿಸಲು ಈ ಸಮಾವೇಶ ಉತ್ತಮ ವೇದಿಕೆಯಾಗಲಿದೆ ಎಂದು ತಿಳಿಸಿದರು.
