ಬಂಟ್ವಾಳ:ಪ್ರಸ್ತುತ ವರ್ಷ ಕರಾವಳಿ ಜಿಲ್ಲೆಗಳು ಸೇರಿದಂತೆ ರಾಜ್ಯದಾದ್ಯಂತ  ಮಳೆಯ ಪ್ರಮಾಣ ಬಹುತೇಕ ಕಡಿಮೆಯಾಗಿದ್ದು ಭತ್ತ ಬೇಸಾಯಗಾರರು ಬೇಸಾಯಕ್ಕೆ ನೀರಿಲ್ಲದೆ ಆಕಾಶದತ್ತ ಮುಖ ಮಾಡಿದ್ದು, ಮಳೆಯ ಕೊರತೆಯ ಹಿನ್ನೆಲೆಯಲ್ಲಿ ಪ್ರಸ್ತುತ ರಾಜ್ಯದ ವಿವಿಧ ಕಡೆಗಳಲ್ಲಿ ಗಂಭೀರ ಸಮಸ್ಯೆ ಉದ್ಭವಿಸಿರುವ ಹಿನ್ನಲೆಯಲ್ಲಿ ಪ್ರಾಥಮಿಕ ಸಹಕಾರ ಸಂಘಗಳಿಂದ ರೈತರು ಪಡೆದಿರುವ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡುವಂತೆ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಲಿಖಿತ ಮನವಿ ಮೂಲಕ ಆಗ್ರಹಿಸಿದ್ದಾರೆ.


ಮಳೆಯಾಶ್ರಿತ ಬೆಟ್ಟು ಗದ್ದೆಗಳಲ್ಲಿ ಇನ್ನೂ ಕೂಡ ಬಿತ್ತನೆ ಕಾರ್ಯ ಆರಂಭವೇ ಆಗಿಲ್ಲ, ಬೆರಳೆಣಿಕೆಯ ರೈತರು ತಮ್ಮ ಕೊಳವೆಬಾವಿ ಅಥವಾ ಕೆರೆಗಳಿಂದ ಪಂಪಿನ ಮೂಲಕ ನೀರು ಹಾಕಿ ಬಿತ್ತನೆ ಮಾಡಿದರೂ, ಪ್ರಸ್ತುತ  ಕೆರೆಗಳಲ್ಲಿ ನೀರು ಬತ್ತಿಹೋಗಿರುವ ಪರಿಣಾಮ ಮಳೆಯ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ ಭತ್ತದ ಗದ್ದೆಗಳು ನೀರಿಲ್ಲದೇ ಒಣಗುತ್ತಿವೆ ಎಂದು ಪ್ರಭು ಮನವಿಯಲ್ಲಿ ತಿಳಿಸಿದ್ದಾರೆ.
ಹಲವಾರು ರೈತರು ಮಳೆಯನ್ನು ನಂಬಿಕೊಂಡು ಬೇಸಾಯ ಮಾಡಿದ್ದು,ಇದೀಗ ಮಳೆಯ ಕೊರತೆಯಿಂದ ಕಂಗಲಾಗಿದ್ದಾರೆ. ಮಳೆಯ ಕೊರತೆ ಹೀಗೆಯೇ ಮುಂದುವರಿದರೆ ಬೇಸಿಗೆಯಲ್ಲಿ ಕುಡಿಯುವ ನೀರಿಗೂ ಬರಗಾಲ ಬಂದರೂ‌ ಅಚ್ಚರಿ ಪಡಬೇಕಾಗಿಲ್ಲ, ಈ  ಹಿನ್ನಲೆಯಲ್ಲಿ ಸರಕಾರ ಸಂಬಂಧ ಪಟ್ಟ ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆಯಿಂದ ವರದಿ ತರಿಸಿಕೊಂಡು ರೈತರಿಗೆ ಪ್ರತಿ ಎಕರೆಗೆ 50 ಸಾವಿರ ಪರಿಹಾರ ನೀಡಬೇಕು ಹಾಗೂ  ಪ್ರಾಥಮಿಕ ಸಹಕಾರ ಸಂಘಗಳಿಂದ ರೈತರು ಪಡೆದಿರುವ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಮನವಿ ಮೂಲಕ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದಾರೆ. 

By Suddi9

Leave a Reply

Your email address will not be published. Required fields are marked *