ಬಂಟ್ವಾಳ: ಗ್ರಾಮಸ್ಥರ ವಿರೋಧದ ನಡುವೆಯೂ ಸರ್ಕಾರವೇ ಶಾಲೆ ಕಾಲೇಜುಗಳ 100 ಮೀ ಅಂತರದಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಿರುವ ವಿಲಕ್ಷಣ ಘಟನೆಯೊಂದು ಬಂಟ್ವಾಳ ತಾಲೂಕಿನಲ್ಲಿ ಬೆಳಿಕಿಗೆ ಬಂದಿದೆ. ಇಲ್ಲಿನ ಕರಿಯಂಗಳ ಗ್ರಾಮಪಂಚಾಯತ್ ವ್ಯಾಪ್ತಿಯ ಬೆಂಜನಪದವು ಎಂಬಲ್ಲಿ ಸರ್ಕಾರದ ಎಂಎಸ್ಐಎಲ್ ಮದ್ಯ ಮಾರಟದಂಗಡಿ ತೆರಯಲು ಅನುಮತಿ ನೀಡಿರುವುದು ಇದೀಗ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಗ್ರಾಮಸಭೆ ವಿರೋಧ:
ಬೆಂಜನಪದವು ಸರ್ಕಾರಿ ಪದವಿ ಪೂರ್ವ ಹಾಗೂ ಪ್ರೌಢಶಾಲೆಯಿರುವ ಪರಿಸರದಲ್ಲಿ ಎಮ್ಎಸ್ಐಎಲ್ ಮದ್ಯದಂಗಡಿ ತೆರಯಲು ವ್ಯಕ್ತಿಯೊಬ್ಬರಿಗೆ ಪರವಾನಗಿ ನೀಡಲಾಗಿದೆ. ಇಲ್ಲಿ ಮದ್ಯದಂಗಡಿ ಪ್ರಾರಂಭಗೊಳ್ಳಲಿದೆ ಎನ್ನುವ ಮಾಹಿತಿ ದೊರೆಯುತ್ತಿದ್ದಂತೆಯೇ ಸ್ಥಳೀಯರು ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದರು.
ಈ ಅಂಗಡಿಯನ್ನು ದಾಟಿ ವಿದ್ಯಾರ್ಥಿಗಳು ಶಾಲೆ, ಕಾಲೇಜಿಗೆ ಬರಬೇಕಾಗಿರುವುದರಿಂದ ಇಲ್ಲಿ ಯಾವುದೇ ಕಾರಣಕ್ಕೂ ಮದ್ಯ ಮಾರಾಟದಂಗಡಿ ತೆರೆಯಲು ಅವಕಾಶ ನೀಡಬಾರದೆಂದು ಒತ್ತಾಯಿಸಿ ಕಾಲೇಜಿನ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಹಾಗೂ ಅಬಕಾರಿ ಇಲಾಖೆಯ ಡಿಸಿಗೆ ಲಿಖಿತ ಮನವಿ ಸಲ್ಲಿಸಲಾಗಿತ್ತು. ಇದೇ ವಿಷಯಕ್ಕೆ ಸಂಬಂಧಿಸಿ ಕರಿಯಂಗಳ ಗ್ರಾಮಸಭೆ ಹಾಗೂ ಸಾಮಾನ್ಯ ಸಭೆಯಲ್ಲೂ ವಿರೋಧ ವ್ಯಕ್ತ ಪಡಿಸಿ ನಿರ್ಣಯ ಕೈಗೊಂಡು ಸಂಬಂಧ ಪಟ್ಟ ಅಧಿಕಾರಿಗಳಿಗೆ ರವಾನಿಸಲಾಗಿತ್ತು.
ಅಲ್ಲದೆ ಸ್ಥಳೀಯ ಮಸೀದಿ ಆಡಳಿತ ಮಂಡಳಿ ಹಾಗೂ ಸ್ತ್ರೀಶಕ್ತಿ ಗುಂಪಿನ ಮಹಿಳೆಯರು ಮದ್ಯದಂಗಡಿ ತೆರಯಲು ಅನುಮತಿ ನೀಡದಂತೆ ಒತ್ತಾಯಿಸಿ ಪತ್ರ ಬರೆದಿದ್ದರು. ಈ ಪರಿಸರದಲ್ಲಿ ಶಾಲೆ ಕಾಲೇಜು ಮಾತ್ರವಲ್ಲದೆ ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದು ನಿತ್ಯ ಮಹಿಳೆಯರು, ಮಕ್ಕಳು ಸಂಚರಿಸುತ್ತಿದ್ದು ಮದ್ಯದಂಗಡಿ ತೆರಯಲು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು.
ಕೆಲ ತಿಂಗಳ ಕಾಲ ತಣ್ಣಗಿದ್ದ ಮದ್ಯದಂಗಡಿ ತೆರೆಯವ ಪ್ರಕ್ರಿಯೆ ಇದೀಗ ಸದ್ದಿಲ್ಲದೆ ವೇಗ ಪಡೆದುಕೊಂಡಿದೆ. ತೀವ್ರ ವಿರೋಧದ ನಡುವೆಯೂ ಪರವನಗಿ ನೀಡಿರುವ ಅಬಕಾರಿ ಇಲಾಖೆಯ ವಿರುದ್ದವೇ ಗ್ರಾಮಸ್ಥರು ಸಿಡಿದೆದ್ದುದ್ದು ಪ್ರತಿಭಟನೆಗೆ ಮುಂದಾಗಿದ್ದಾರೆ.
