ಬಂಟ್ವಾಳ: ಬಿ.ಸಿ.ರೋಡ್ ನ ಬಸ್ ನಿಲ್ದಾಣದ ಪಕ್ಕದಲ್ಲಿ ಆಟೋ ರಿಕ್ಷಾಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಆಟೋ ರಿಕ್ಷಾ ಚಾಲಕರು ಹಾಗೂ ಮಾಲಕರ ಸಂಘದ ನಿಯೋಗವು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರನ್ನು ಸೋಮವಾರ ಬಿ.ಸಿ.ರೋಡಿನಲ್ಲಿರುವ ಅವರ ಕಚೇರಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿತು.

ಪ್ರಸ್ತುತ ಬಿ.ಸಿ.ರೋಡ್ ಬಸ್ ನಿಲ್ದಾಣದ ಬಳಿ ಎರಡು ಆಟೋ ರಿಕ್ಷಾ ಪಾರ್ಕಿಂಗ್ ಸ್ಥಳಗಳಿದ್ದು, ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ವ್ಯವಸ್ಥೆ ಸಾಕಾಗುತ್ತಿಲ್ಲ ಎಂದು ಆಟೋ ಚಾಲಕರ ನಿಯೋಗ ಶಾಸಕರ ಗಮನಕ್ಕೆ ತಂದರು. ಬಸ್ ನಿಲ್ದಾಣಕ್ಕಾಗಮಿಸುವ ಸಾರ್ವಜನಿಕರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಹಾಗೂ ಮಹಿಳೆಯರು ತಕ್ಷಣ ಆಟೋ ಸೇವೆ ಪಡೆಯಲು ತೊಂದರೆ ಅನುಭವಿಸುತ್ತಿದ್ದಾರೆ ಎಂದು ವಿವರಿಸಿದರು.

ಹೆಚ್ಚುತ್ತಿರುವ ವಾಹನ ದಟ್ಟಣೆ ಹಾಗೂ ಪ್ರಯಾಣಿಕರ ಬೇಡಿಕೆಯನ್ನು ಪರಿಗಣಿಸಿ, ಈಗಿರುವ ಎರಡು ಪಾರ್ಕಿಂಗ್ ಸ್ಥಳಗಳ ಜೊತೆಗೆ ಇನ್ನೆರಡು ಆಟೋ ರಿಕ್ಷಾ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಿ ಮಂಜೂರು ಮಾಡಬೇಕು ಎಂದು ಆಟೋಚಾಲಕರ ಸಂಘದ ಅಧ್ಯಕ್ಷ ವಿಶ್ವನಾಥ ಚಂಡ್ತಿಮಾರ್ ನೇತೃತ್ವದ ನಿಯೋಗ ಇದರಿಂದಾಗಿ ಸಂಚಾರ ವ್ಯವಸ್ಥೆ ಸುಗಮಗೊಳ್ಳುವುದರ ಜೊತೆಗೆ ಸಾರ್ವಜನಿಕರಿಗೆ ಉತ್ತಮ ಸೇವೆ ದೊರೆಯಲಿದೆ ಮತ್ತು ಚಾಲಕರ ಜೀವನೋಪಾಯಕ್ಕೂ ಅನುಕೂಲವಾಗಲಿದೆ ಎಂದು ಶಾಸಕರಿಗೆ ಮನವರಿಕೆ ಮಾಡಿತು.
ಮನವಿಗೆ ಸ್ಪಂದಿಸಿದ ಶಾಸಕ ರಾಜೇಶ್ ನಾಯ್ಕ್ ಅವರು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಾರಿಗೆ ಇಲಾಖೆಯೊಂದಿಗೆ ಶೀಘ್ರವೇ ಚರ್ಚಿಸಿ ಸಾರ್ವಜನಿಕರಿಗೂ, ಆಟೋ ಚಾಲಕರಿಗೂ ಅನುಕೂಲವಾಗುವ ರೀತಿಯಲ್ಲಿ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು, ಅಗತ್ಯವಿದ್ದಲ್ಲಿ ಸ್ಥಳ ಪರಿಶೀಲನೆ ನಡೆಸಿ ಹೆಚ್ಚುವರಿ ಆಟೋ ಪಾರ್ಕಿಂಗ್ ಸ್ಥಳಗಳನ್ನು ಮಂಜೂರು ಮಾಡುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ನಿಯೋಗದಲ್ಲಿ ಆಟೋ ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘದ ಪದಾಧಿಕಾರಿಗಳು, ಹಿರಿಯ ಚಾಲಕರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದು,ಶಾಸಕರಿಗೆ ಪೂರಕ ಮಾಹಿತಿ ನೀಡಿದರು.
ಪ್ರತಿಭಟನೆ ನಡೆಸಿದ್ದರು:-
ರಾ.ಹೆ.ಯ ಬಿ.ಸಿ.ರೋಡಿನ ಖಾಸಗಿ ಬಸ್ ನಿಲ್ದಾಣ ಬಳಿ ಇತ್ತೀಚೆಗೆ ಪುರಸಭೆ ತೆರವುಗೊಳಿಸಿದ್ದ ಬಸ್ ಶಲ್ಟರ್ ಸ್ಥಳದಲ್ಲಿ ಸಂಚಾರಿ ಪೊಲೀಸರು ಆಟೋ ರಿಕ್ಷಾ ನಿಲುಗಡೆಗೆ ಅವಕಾಶ ಕೊಡದ ಹಿನ್ನಲೆಯಲ್ಲಿ ರಿಕ್ಷಾ ಚಾಲಕರು ಕಳೆದ ಗುರುವಾರ ಹಠಾತ್ ಪ್ರತಿಭಟನೆ ನಡೆಸಿದ್ದರು.
ಬಸ್ ನಿಲ್ದಾಣದ ಪಕ್ಕದ ವಾಣಿಜ್ಯ ಸಂಕೀರ್ಣ ವೊಂದರ ಮುಂಭಾಗವಿದ್ದ ಬಸ್ ಶೆಲ್ಟರನ್ನು ಪುರಸಭೆ ಇತ್ತೀಚೆಗೆ ತೆರವುಗೊಳಿಸಿದ್ದು,ಈ ಮೊದಲು ರಸ್ತೆಯಲ್ಲಿ ನಿಲುಗಡೆಯಾಗುತ್ತಿದ್ದ ಆಟೋರಿಕ್ಷಾ ಇದೀಗ ಶಲ್ಟರ್ ತೆರವಾದ ಸ್ಥಳದಲ್ಲಿ ನಿಲುಗಡೆಯಾಗುತ್ತಿದೆ.
ಬಂಟ್ವಾಳ ಮತ್ತು ಪಾಣೆಮಂಗಳೂರು ಕಡೆಗೆ ಜನರನ್ನು ಸಾಗಿಸುವ ತಲಾ ಎರಡು ಸರ್ವಿಸ್ ರಿಕ್ಷಾಗಳು ಈ ಪ್ರದೇಶದಲ್ಲಿ ನಿಲುಗಡೆಯಾಗುತ್ತಿದ್ದು, ತೆರವಾದ ಬಸ್ ಶೆಲ್ಟರ್ ಸ್ಥಳದಲ್ಲಿ ಈ ಮೊದಲಿನಂತೆ ರಿಕ್ಷಾಗಳ ನಿಲುಗಡೆಗೆ ಆವಕಾಶ ಕಲ್ಪಿಸಬೇಕೆಂದು ಆಗ್ರಹಿಸಿ ರಿಕ್ಷಾ ಚಾಲಕರು ಬಿ.ಸಿ.ರೋಡಿನ ಫ್ಲೈ ಓವರ್ ನ ತಳಭಾಗದಲ್ಲಿ ಪ್ರತಿಭಟನೆ ನಡೆಸಿದರು.ಈ ಸಂದರ್ಭ ಸಂಚಾರಿ ಪೊಲೀಸರು ಹಾಗೂ ಆಟೋ ಚಾಲಕರ ನಡುವೆ ವಾಗ್ವಾದವು ನಡೆದಿತ್ತು.
