ಬಂಟ್ವಾಳ : ಕಲೆ ಎಂಬುದು ಕೇವಲ ಮನರಂಜನೆಯ ಸಾಧನವಲ್ಲ, ಅದು ಸಮಾಜದ ಸಂಸ್ಕೃತಿ, ಸಂಪ್ರದಾಯ ಮತ್ತು ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಪವಿತ್ರ ಮಾಧ್ಯಮ. ಕಲಾವಿದರ ಸಾಧನೆಯ ಹಿಂದೆ ಅಪಾರ ಪರಿಶ್ರಮ, ತ್ಯಾಗ ಮತ್ತು ನಿರಂತರ ಅಭ್ಯಾಸ ಇರುತ್ತದೆ. ಕಲಾಸಾಧಕರನ್ನು ಸಮಾಜ ಗುರುತಿಸಿ ಗೌರವಿಸಿದಾಗ ಮತ್ತಷ್ಟು ಸಾಧಿಸುವ ಉತ್ಸಾಹ ಹೆಚ್ಚುತ್ತದೆ. ಕಲೆಯ ತಳಹದಿಯಲ್ಲಿ ಈ ಸಮಾಜ ಮತ್ತಷ್ಟು ಶ್ರೀಮಂತವಾಗುತ್ತದೆ ಎಂದು ಹಿರಿಯ ಯಕ್ಷಗಾನ ಕಲಾವಿದ, ಸಮಾಜಿಕ ಚಿಂತಕ ದಿನೇಶ್ ಶೆಟ್ಟಿ ಕಾವಳಕಟ್ಟೆ ಅಭಿಪ್ರಾಯಪಟ್ಟರು.

ಬಂಟ್ವಾಳ ತಾಲೂಕು ಬಂಟರ ಸಂಘದ ವತಿಯಿಂದ ಬಂಟರ ಸಂಘ ಕಾವಳಕಟ್ಟೆ ವಲಯದ ಅಧ್ಯಕ್ಷ ಮೋಹನ್ ಶೆಟ್ಟಿ ನರ್ವಲ್ಡಡ್ಡ ರವರ ನಿವಾಸದಲ್ಲಿ
ನಡೆದ ತಾಲೂಕು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿದ ಕಾವಳಕಟ್ಟೆ ವಲಯದ ಕಲಾವಿದರನ್ನು ಅಭಿನಂದಿಸಿ ಗೌರವಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಲಾವಿದರನ್ನು ಗೌರವಿಸುವ ಸಮಾಜ ಎಂದಿಗೂ ತನ್ನ ಸಂಸ್ಕೃತಿ ಮತ್ತು ಪರಂಪರೆಯನ್ನು ಕಳೆದುಕೊಳ್ಳುವುದಿಲ್ಲ. ಯುವಜನರು ಕಲೆ ಮತ್ತು ಸಂಸ್ಕೃತಿಯತ್ತ ಸೆಳೆಯುವ ಕೆಲಸವನ್ನು ಸಂಘ-ಸಂಸ್ಥೆಗಳು ಮಾಡಬೇಕಾಗಿದೆ. ಬಂಟರ ಸಂಘ ಕಾವಳಕಟ್ಟೆ ವಲಯವು ಕೈಗೊಂಡಿರುವ ಈ ಕಾರ್ಯ ಇತರ ಸಂಘ-ಸಂಸ್ಥೆಗಳಿಗೂ ಮಾದರಿಯಾಗಿದ್ದು, ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮೋಹನ್ ಶೆಟ್ಟಿ ನರ್ವಲ್ಡಡ್ಡ ಮಾತನಾಡಿ, ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಸಂಘಗಳು ಸಮಾಜಕ್ಕೆ ದಾರಿದೀಪವಾಗುತ್ತವೆ. ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ತಾಲೂಕು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಕಾವಳಕಟ್ಟೆ ವಲಯದ ನೃತ್ಯ ತಂಡವನ್ನು ಅತ್ಯುತ್ತಮ ರೀತಿಯಲ್ಲಿ ಸಂಯೋಜಿಸಿದ ಮಂಗಳೂರಿನ ಸೀಝ್ಲಿಂಗ್ ಡ್ಯಾನ್ಸ್ ಅಕಾಡೆಮಿಯ ಶುಭಕಿರಣ ಮಣಿ ಹಾಗೂ ಅವರ ತಂಡವನ್ನು ವಿಶೇಷವಾಗಿ ಅಭಿನಂದಿಸಲಾಯಿತು. ಬಳಿಕ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಕಲಾವಿದರ ಸಾಧನೆಯನ್ನು ಪ್ರಶಂಸಿಸಿ ಗೌರವಿಸಲಾಯಿತು.
ಸಂಘದ ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ ಸಂಘದ ಲೆಕ್ಕಪತ್ರವನ್ನು ಮಂಡಿಸಿದರು.
ಸಾಂಸ್ಕೃತಿಕ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ಕುಮಾರಿ ನಿಧಿಶಾ ಅನಿಸಿಕೆ ವ್ಯಕ್ತಪಡಿಸಿದರು.
ಕಾವಳಕಟ್ಟೆ ವಲಯದ ಗೌರವಾಧ್ಯಕ್ಷರಾದ ಜಗನ್ನಾಥ ಶೆಟ್ಟಿ ಕೆದ್ದಳಿಕೆ, ಗೌರವ ಸಲಹೆಗಾರರಾದ ಪ್ರಮೋದ್ ಕುಮಾರ್ ರೈ ಕಾಡಬೆಟ್ಟು, ಉಪಾಧ್ಯಕ್ಷರಾದ ಪ್ರದೀಪ್ ಕುಮಾರ್ ಶೆಟ್ಟಿ ಬಿಯಂತಬೆಟ್ಟು, ಕೋಶಾಧಿಕಾರಿಯಾದ ಚಂದ್ರಶೇಖರ ಶೆಟ್ಟಿ ಪಣೆಕಲ, ಯುವ ವಿಭಾಗದ ಅಧ್ಯಕ್ಷರಾದ ಕಿಶೋರ್ ರೈ ಕಾಡಬೆಟ್ಟು ಸಂಘದ ಪದಾಧಿಕಾರಿಗಳು, ಸದಸ್ಯರು ಮತ್ತು ಕಲಾಭಿಮಾನಿಗಳು ಉಪಸ್ಥಿತರಿದ್ದರು.
ಕುಮಾರಿ ಮಾನ್ವಿ ಪ್ರಾರ್ಥಿಸಿದರು. ಪುನೀತ್ ಶೆಟ್ಟಿ ಕೈಮಾರು ಸ್ವಾಗತಿಸಿದರು. ಉದಯ ಕುಮಾರ್ ಶೆಟ್ಟಿ ವಂದಿಸಿದರು.
