ಬಂಟ್ವಾಳ:ಜಿಲ್ಲೆಯ ಜೀವನದಿ ನೇತ್ರಾವತಿ ಒಡಲಿಗೆ ಬಂಟ್ವಾಳ ಪುರಸಭಾ ವ್ಯಾಪ್ಯಿಯ ವಿವಿದೆಡೆ ನೇರವಾಗಿ ಕೊಳಚೆನೀರು,ತ್ಯಾಜ್ಯ ವಸ್ತು ಸೇರುವುದು ಹಾಗೂ ರಾ.ಹೆ.ಯ ಬದಿಯಲ್ಲೆ ಕಸದರಾಶಿ ಎಸೆದು ನಗರದ ಸೌಂದರ್ಯ ಕೆಡಿಸುವುದರ ಜತೆಗೆ ಜನರ ಮೇಲು ದುಷ್ಪರಿಣಾಮ ಬೀಳುತ್ತಿರುವ ಹಿನ್ನಲೆಯಲ್ಲಿ ಮಾಧ್ಯಮಗಳ ನಿರಂತರ ವರದಿ ಹಾಗೂ ಸಾರ್ವಜನಿಕರಿಂದಲೂ‌ ಬಂದಿರುವ ದೂರಿನಿಂದಾಗಿ ಅಧಿಕಾರಿಗಳ ಕಾರ್ಯವೈಖರಿಗೆ ಗರಂ ಆಗಿರುವ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಸಂಬಂಧಿಸಿದ ಅಧಿಕಾರಿಗಳನ್ನು ನೇರ ತರಾಟೆಗೆ ತೆಗೆದುಕೊಂಡಿದ್ದಲ್ಲದೆ ಸೂಕ್ತ ಕ್ರಮಕ್ಕು  ತಾಕೀತು ಮಾಡಿದ್ದಾರೆ‌.

 


ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಅವರಿಗೆ ನೇರವಾಗಿ ಕರೆ ಮಾಡಿ ಪ್ರಶ್ನಿಸಿದ ಶಾಸಕರು,ಪಾಣೆಮಂಗಳೂರು ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ತ್ಯಾಜ್ಯ ರಾಶಿಯಾಗಿರುವುದು ಕ್ಷೇತ್ರದ ಘನತೆಗೆ ಧಕ್ಕೆ ತರುತ್ತದೆ. ಇದು ಸಾರ್ವಜನಿಕ ಆರೋಗ್ಯ ಮತ್ತು ಪರಿಸರದ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಕೂಡಲೇ ಎಲ್ಲ ತ್ಯಾಜ್ಯವನ್ನು ತೆರವುಗೊಳಿಸಿ, ಇಂತಹ ಪರಿಸ್ಥಿತಿ ಮರುಕಳಿಸದಂತೆ ಶಾಶ್ವತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಸಿಸಿ ಕ್ಯಾಮರಾ ಅಳವಡಿಸಿ:
ರಸ್ತೆ ಬದಿಯಲ್ಲಿ ಕಸ ಎಸೆಯುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ ಶಾಸಕರು, ತ್ಯಾಜ್ಯ ಎಸೆಯುವ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವಂತೆ ಆದೇಶಿಸಿದರು. ಕ್ಯಾಮೆರಾ ಅಳವಡಿಕೆಗೆ ಅಗತ್ಯವಿರುವ ವೆಚ್ಚವನ್ನು ಶಾಸಕರ ಅನುದಾನದಿಂದಲೇ ಭರಿಸಲಾಗುವುದು ಎಂದು ಭರವಸೆ ನೀಡಿದರು.
ಕ್ಯಾಮೆರಾ ಅಳವಡಿಸಿದ ನಂತರವೂ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕಸ ರಾಶಿಯಾದರೆ, ಅದು ಅಧಿಕಾರಿಗಳ ವೈಫಲ್ಯವೆಂದು ಪರಿಗಣಿಸಲಾಗುವುದು. ಅಂತಹ ಪರಿಸ್ಥಿತಿ ನಿರ್ಮಾಣವಾದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು ಎಂದು ಶಾಸಕ ರಾಜೇಶ್ ನಾಯ್ಕ ಎಚ್ಚರಿಸಿದರು.

ನದಿ ಮಾಲಿನ್ಯವಾಗದಂತೆ ನೋಡಿಕೊಳ್ಳಿ:
ಇದೇ ವೇಳೆ
ನೇತ್ರಾವತಿ ನದಿ ಮಾಲಿನ್ಯದ ವಿಚಾರವನ್ನೂ ಗಂಭೀರವಾಗಿ ಪ್ರಸ್ತಾಪಿಸಿದ ಶಾಸಕರು, ಬಂಟ್ವಾಳ ಬಡ್ಡಕಟ್ಟೆ, ಗೂಡಿನಬಳಿ, ತಲಪಾಡಿ ಸೇರಿದಂತೆ ಪುರಸಭಾ ವ್ಯಾಪ್ತಿಯ ಅನೇಕ ವಾಣಿಜ್ಯ ಸಂಕೀರ್ಣಗಳು, ವಸತಿ ಸಮುಚ್ಚಯಗಳು, ಹೋಟೆಲ್‌ಗಳು ಹಾಗೂ ವಿವಿಧ ಅಂಗಡಿಗಳಿಂದ ಹೊರಬರುವ ಕೊಳಚೆ ನೀರು ನೇರವಾಗಿ ನೇತ್ರಾವತಿ ನದಿಗೆ ಸೇರುತಿರುವ ಬಗ್ಗೆಯು ಶಾಸಕರು ತೀವ್ರ ಕಳವಳ ವ್ಯಕ್ತಪಡಿಸಿದರು.
ಪುರಸಭೆಗೊಳಪಟ್ಟ ವಾಣಿಜ್ಯ ಸಂಕೀರ್ಣಗಳಲ್ಲಿನ ಕೊಳಚೆ ನೀರನ್ನು ಕೂಡ ನದಿಗೆ ಬಿಡಲಾಗುತ್ತಿದ್ದು, ಅವರ ಮೇಲೆಯೂ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಶಾಸಕರು ಮುಖ್ಯಾಧಿಕಾರಿಯವರಿಗೆ  ಸೂಚಿಸಿದ್ದಾರೆ.

ನೇತ್ರಾವತಿ ನದಿ ಕೇವಲ ಬಂಟ್ವಾಳದ ಜೀವನಾಡಿಯಲ್ಲ, ಮಂಗಳೂರು ಸೇರಿದಂತೆ ಸಾವಿರಾರು ಜನರಿಗೆ ಕುಡಿಯುವ ನೀರಿನ ಪ್ರಮುಖ ಮೂಲವಾಗಿದೆ. ಇಂತಹ ನದಿಯನ್ನು ಕಲುಷಿತಗೊಳಿಸುವವರ ವಿರುದ್ಧ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಕಾನೂನು ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ಜರುಗಿಸಬೇಕು, ಎಂದು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.
ಈ ಕುರಿತು ಹಲವು ಸಭೆಗಳಲ್ಲಿ ಈಗಾಗಲೇ ಸೂಚನೆ ನೀಡಿದ್ದರೂ ಸಮಸ್ಯೆ ಮುಂದುವರಿದಿರುವ ಬಗ್ಗೆ ಮುಖ್ಯಾಧಿಕಾರಿಯವರಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು  ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕ ಆರೋಗ್ಯದ ವಿಚಾರದಲ್ಲಿ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.
ಪಂಚಾಯಿತಿ ವ್ಯಾಪ್ತಿಯಲ್ಲೂ ಕಸ:

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ರಸ್ತೆ ಬದಿಯಲ್ಲಿ ತ್ಯಾಜ್ಯ ರಾಶಿಯಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುಮಾರ್ ಅವರಿಗೂ ಕರೆ ಮಾಡಿ ಈ ವಿಚಾರದಲ್ಲಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ನಿಯಮಿತ ಸ್ವಚ್ಛತಾ ಕಾರ್ಯ ನಡೆಸಿ, ಕಸ ಎಸೆಯುವವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸುವಂತೆ ಶಾಸಕರು ಸೂಚಿಸಿದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಎದುರಾಗುವ ಪ್ರದೇಶಗಳಿಂದ ಒಣ ಹಾಗೂ ಹಸಿ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ, ಶಾಸಕರ ಗಂಜಿಮಠದಲ್ಲಿರುವ ಒಡೂರು ಫಾರ್ಮ್ ಹೌಸ್‌ಗೆ ಸಾಗಿಸಿ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

By Suddi9

Leave a Reply

Your email address will not be published. Required fields are marked *