ಗುರುಪುರ : ಸೇವೆ, ಕ್ರೀಡೆ, ಸಂಸ್ಕೃತಿ, ಧಾರ್ಮಿಕ ಹಾಗೂ ಶಿಕ್ಷಣಕ್ಕೆ ಆದ್ಯತೆ ನೀಡುತ್ತ ಬಂದಿರುವ ಶ್ರೀ ವಿಜಯವಾಹಿನಿ ಗಂಜಿಮಠ ಸಂಸ್ಥೆಯು ಮಳಲಿಯ ಸರ್ಕಾರಿ ಶಾಲೆಯಲ್ಲಿ ಜೂ. ೧೫ರಂದು ಆಯೋಜಿಸಿದ ಕಾರ್ಯಕ್ರಮದಲ್ಲಿ ಮಳಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬರೆಯುವ ಪುಸ್ತಕ ವಿತರಣೆ ನೀಡಿತು. ಜೊತೆಗೆ ಈ ಬಾರಿ ೧೦ನೇ ತರಗತಿಯಲ್ಲಿ ಶಾಲೆಗೆ ಶೇ. ೧೦೦ ಫಲಿತಾಂಶ ತಂದುಕೊಟ್ಟಿರುವ ಎಲ್ಲ ವಿದ್ಯಾರ್ಥಿಗಳು ಹಾಗೂ ನಿವೃತ್ತ ಶಿಕ್ಷಕಿ ಸುಶೀಲಾ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.

 

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಜಯವಾಹಿನಿ ಸಂಸ್ಥೆಯು ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ನೀಡುವಂತಹ ಒಂದು ಉತ್ತಮ ಕೆಲಸ ಮಾಡುತ್ತಿದೆ. ಸುಮಾರು ೧೩೫ ವರ್ಷಗಳಷ್ಟು ಹಳೆಯದಾದ ಮಳಲಿ ಪ್ರೌಢಶಾಲೆಯಲ್ಲಿ ಪದವಿಪೂರ್ವ ಕಾಲೇಜು ಸ್ಥಾಪನೆಗೆ ನಡೆಸುತ್ತಿರುವ ಪ್ರಯತ್ನ ಉತ್ತಮವಾಗಿದ್ದು, ಸಹಕರಿಸುವೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ ಆರ್. ಪೂಜಾರಿ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ಒಂದುತ್ತಮ ಕೆಲಸ ಇದು. ಸರ್ಕಾರಿ ಶಾಲೆಗಳಲ್ಲಿ ಗುಣ ಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಉದ್ದೇಶವಾಗಿದ್ದು, ಈ ಬಾರಿ ಜಿಲ್ಲೆಯಲ್ಲಿ ಸುಮಾರು ೧೩ರ ಸಹಿತ ರಾಜ್ಯದಲ್ಲಿ ಅಂದಾಜು ೧೩,೦೦೦ ಕೆಪಿಎಸ್(ಕರ್ನಾಟಕ ಪಬ್ಲಿಕ್ ಸ್ಕೂಲ್) ಆರಂಭಗೊAಡಿದೆ. ಮುಂದಿನ ದಿನಗಳಲ್ಲಿ ಮಳಲಿ ಶಾಲೆಯನ್ನೂ ಈ ಪಟ್ಟಿಗೆ ಸೇರಿಸಲು ಪ್ರಯತ್ನಿಸೋಣ ಎಂದರು.

ಮೂಲತಃ ಕುಡುಪು ಇಲ್ಲಿನವರಾದ ಪ್ರಸಕ್ತ ಅಮೆರಿಕದಲ್ಲಿ ಶಿಕ್ಷಕಿಯಾಗಿರುವ ವಿಜಯವಾಹಿನಿ ಸಂಸ್ಥೆಯ ನಿಕಟ ಸಂಪರ್ಕ ಹೊಂದಿರುವ ಇಂಡಿಯಾ ರಸ್ಕಿನ್ಹಾ ವೆರ್ನೆರ್ ಅವರು ಮಾತನಾಡಿ, ಮಕ್ಕಳು ತಂದೆ-ತಾಯಿಯರಿಗೆ ವಿಧೇಯರಾಗಿರಬೇಕು. ಅಂತಹ ಸಂಸ್ಕೃತಿ ಮನೆ ಮತ್ತು ಶಾಲೆಯಲ್ಲಿ ಸಿಗಬೇಕು. ಪಾಲಕರಿಗೆ ವಿಧೇಯರಾಗಿ ಬೆಳೆದಾಗ ಉದ್ಯೋಗ ಕ್ಷೇತ್ರದಲ್ಲೂ ಉತ್ತಮ ವ್ಯಕ್ತಿಗಳಾಗಲು ಸಾಧ್ಯವಿದೆ. ವಿದ್ಯಾಭ್ಯಾಸದ ವೇಳೆ ಆಲಸ್ಯ ಬೇಡ ಎಂದರು.

ಗಂಜಿಮಠ ಗ್ರಾಪಂ ನಿಕಟಪೂರ್ವ ಅಧ್ಯಕ್ಷೆ ಮಾಲತಿ ಅವರು ಅಧ್ಯಕ್ಷತೆ ವಹಿಸಿದ್ದರು. ವಿಜಯವಾಹಿನಿ ಸಂಸ್ಥೆ ಅಧ್ಯಕ್ಷ ಸುನಿಲ್ ಗಂಜಿಮಠ ಸ್ವಾಗತಿಸಿ, ಪ್ರಸ್ತಾವಿಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಬೂಬ ಪೂಜಾರಿ ಮಳಲಿ, ಇಂಡಿಯಾ ರಸ್ಕಿನ್ಹಾರ ಪತಿ ಜ್ಯಾಕ್ಸ್(ಅಮೆರಿಕ ಪ್ರಜೆ), ಮಳಲಿ ಶಾಲೆಯ ಮುಖ್ಯ ಶಿಕ್ಷಕಿ ವಿನಯಾಪ್ರಭಾ, ಆತ್ಮಶಕ್ತಿ ಸಂಸ್ಥೆ ಚಿತ್ತರಂಜನ್ ಬೋಳಾರ್, ಪ್ರಗತಿಪರ ಕೃಷಿಕ ಪ್ರೇಮಚಂದ್ರ, ಉದ್ಯಮಿ ಕೆ. ಎಂ ರಜಾಕ್, ಮಳಲಿ ಮಸೀದಿ ಅಧ್ಯಕ್ಷ ಅಬ್ದುಲ್ ರಜಾಕ್, ವಿಷ್ಣುಮೂರ್ತಿ ದೇವಸ್ಥಾನದ ಅರ್ಚಕ ಸತ್ಯನಾರಾಯಣ ಉಪಾಧ್ಯಾಯ, ಸಂಸ್ಥೆಯ ಗೌರವಾಧ್ಯಕ್ಷ ಚಂದ್ರಶೇಖರ ಪೂಜಾರಿ ಅರ್ಬಿ, ಕಾರ್ಯದರ್ಶೀ ದಯಾನಂದ ಪೂಜಾರಿ, ಎಸ್‌ಡಿಎಂಸಿ ಉಪಾಧ್ಯಕ್ಷ ಸೀತಾರಾಮ ಪೂಜಾರಿ, ಜನಾರ್ದನ ಕುಲಾಲ್, ಈರಪ್ಪ ಪೂಜಾರಿ ಗಂಜಿಮಠ, ಪುಷ್ಪಾ ಕರ್ಕೇರ, ಗಂಜಿಮಠ ಗ್ರಾಪಂ ಮಾಜಿ ಉಪಾಧ್ಯಕ್ಷೆ ಸಾರಮ್ಮ ಹಾಗೂ ಶಾಲಾ ಮಕ್ಕಳು, ಶಿಕ್ಷಕ ವೃಂದ ಇದ್ದರು. ಶಿಕ್ಷಕ ಪ್ರವೀಣ್ ಕುಟಿನ್ಹೊ ನಿರೂಪಿಸಿ, ವಂದಿಸಿದರು.

By Suddi9

Leave a Reply

Your email address will not be published. Required fields are marked *