ಬಂಟ್ವಾಳ:   ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಹೊಂದಿದ್ದರೆ ಉತ್ತಮ ಶೈಕ್ಷಣಿಕ ಸಾಧನೆಯನ್ನು ಮಾಡಲು ಸಾಧ್ಯ ಎಂದು ಪುಂಜಾಲಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಮಾಧವ ಅವರು ಹೇಳಿದರು. 
 
ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
 ಈಗ ಸರಕಾರಿ ಕಾಲೇಜುಗಳಲ್ಲಿ ಉತ್ತಮ ಸೌಲಭ್ಯಗಳಿವೆ. ಅವುಗಳನ್ನು ಉಪಯೋಗಿಸಿಕೊಂಡು ಇಂದಿನ ಉದ್ಯೋಗ ಮಾರುಕಟ್ಟೆಗೆ ಬೇಕಾದ ಕೌಶಲಗಳನ್ನು ರೂಢಿಸಿಕೊಂಡರೆ ಸುಲಭವಾಗಿ ಸ್ಪರ್ದಾತ್ಮಕವಾದ ಉದ್ಯೋಗಕ್ಷೇತ್ರಕ್ಕೆ ಪ್ರವೇಶಿಸಬಹುದಲ್ಲದೆ ಉದ್ಯೋಗದಾತರೂ ಆಗಬಹುದು. ಹೆತ್ತವರು ಇಟ್ಟಿರುವ ಭರವಸೆಯನ್ನು ಮಕ್ಕಳು ಹುಸಿ ಮಾಡಬಾರದು ಎಂದು ಎಂದು ಅವರು ತಿಳಿಸಿದರು. 
  ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಹಾಗೂ ಬದನಡಿ ಶ್ರೀ ನಾಗಬ್ರಹ್ಮೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಜಗದೀಶ ಕೊಯಿಲ ಅವರು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ‘ಇಂದಿನ ಸಮಾಜದಲ್ಲಿ ಸಮಸ್ಯೆಗಳಿವೆ ಇವೆಯಾದರೂ ಯುವಜನತೆಯು ಜಾಗೃತರಾಗಿದ್ದರೆ ಸಮಾಜದಲ್ಲಿರುವ ಅರೆಕೊರೆಗಳನ್ನು ನಿವಾರಿಸಿ ಸಮೃದ್ಧವಾದ ದೇಶವನ್ನು ಕಟ್ಟಲು ಸಾಧ್ಯ’ ಎಂದು ಹೇಳಿದರು. 
ಅಭಿವೃದ್ಧಿ ಸಮಿತಿಯ ವತಿಯಿಂದ ಕಾಲೇಜಿಗೆ ಅಗತ್ಯವಿರುವ ಸೌಕರ್ಯಗಳನ್ನು ಒದಗಿಸುವ ಭರವಸೆಯನ್ನು ಅವರು ನೀಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಗಿರೀಶ ಭಟ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
 ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಹರಿಪ್ರಸಾದ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ಈ ಸಂದರ್ಭ ನಿವೃತ್ತ ಶಿಕ್ಷಕ ನಾರಾಯಣ ನಾಯಕ್ ಅವರನ್ನು ಸಮ್ಮಾನಿಸಲಾಯಿತು. ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿವರಾಜ್ ಕುಮಾರ್, ವಿದ್ಯಾರ್ಥಿವೇದಿಕೆಯ ಅಧ್ಯಕ್ಷ ಯಶೋಧರ ಮತ್ತಿತರರು ವೇದಿಕೆಯಲ್ಲಿದ್ದರು.   

By suddi9

Leave a Reply

Your email address will not be published. Required fields are marked *