ಬಂಟ್ವಾಳ:   ವಿದ್ಯಾರ್ಥಿಗಳು ಫಾಸ್ಟ್ ಫುಡ್ ಸಂಸ್ಕೃತಿಗೆ ಬಲಿಯಾಗಿ ಆರೋಗ್ಯವನ್ನು ಕೆಡಿಸಿಕೊಳ್ಳದೆ, ಮನೆಯಲ್ಲೇ ಲಭ್ಯವಿರುವ ಧಾನ್ಯಗಳಿಂದ ಪೌಷ್ಟಿಕ ಆಹಾರ ಸಿದ್ಧಪಡಿಸಿ ದೇಹದ ಆರೋಗ್ಯವನ್ನು ಕಾಪಾಡುವುದು ಮುಖ್ಯ ಎಂದು ಸಿದ್ಧಕಟ್ಟೆ ಫಲ್ಗುಣಿ ರೋಟರಿ ಕ್ಲಬ್ ಅಧ್ಯಕ್ಷ ರೊ. ದುರ್ಗಾದಾಸ್ ಶೆಟ್ಟಿ ಹೇಳಿದರು. 
ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ನಡೆಸಲಾದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. “ಹಳ್ಳಿಗಳಲ್ಲು  ಇಂದಿನ ಆಧುನಿಕ ಕಾಲದಲ್ಲಿ ಆರೋಗ್ಯವನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲು. ಯುವಜನತೆ ಆರೋಗ್ಯವಾಗಿದ್ದರೆ ರಕ್ತದಾನದಂತಹ ಕಾರ್ಯಗಳ ಮೂಲಕ ಇತರರಿಗೆ ಸಹಾಯ ಮಾಡಲು ಸಾಧ್ಯ ಎಂದು ಅವರು ತಿಳಿಸಿದರು. 
ಕಾಲೇಜಿನ ಪ್ರಾಂಶುಪಾಲರಾದ ಡಾ. ಗಿರೀಶ ಭಟ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ವಿದ್ಯಾರ್ಥಿನಿಯರು ರಕ್ತದಲ್ಲಿನ ಹಿಮೊಗ್ಲೊಬಿನ್ ಕೊರತೆಯಿಂದಾಗಿ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಅಪೌಷ್ಟಿಕತೆಯಿಂದ ಶಿಕ್ಷಣದ ಮೇಲೂ ದುಷ್ಪರಿಣಾಮವಾಗುತ್ತದೆ. ಇಂತಹ ರಕ್ತದಾನ ಶಿಬಿರಗಳ ಮೂಲಕ ಆರೋಗ್ಯಜಾಗೃತಿಯೂ ಆಗುತ್ತದೆ, ರಕ್ತದಾನದ ಮಹತ್ವವು ತಿಳಿಯುತ್ತದೆ ಎಂದು ಹೇಳಿದರು.   
  ಸಿದ್ಧಕಟ್ಟೆ ಬಂಟರ ಸಂಘದ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ, ಬಿಲ್ಲವರ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಮಂಜಿಲ, ಸಿದ್ಧಕಟ್ಟೆ ಶಾರದೋತ್ಸವ ಸಮಿತಿಯ ಅಧ್ಯಕ್ಷ ನೋಣಯ್ಯ ಶೆಟ್ಟಿಗಾರ್, ಅತ್ತಾವರ ಕೆ.ಎಂ.ಸಿ. ಆಸ್ಪತ್ರೆಯ ವೈದ್ಯರಾದ ಡಾ.ಲಕ್ಷ್ಮೀ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. 
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಹರಿಪ್ರಸಾದ್ ಶೆಟ್ಟಿ , ಕಾಲೇಜಿನ ಗುಣಮಟ್ಟ ಭರವಸೆ ಕೋಶದ ಸಂಚಾಲಕರಾದ ಡಾ. ಸುಮನ್ ಶೆಟ್ಟಿ ವೇದಿಕೆಯಲ್ಲಿದ್ದರು. ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘ, ರೋಟರಿ ಕ್ಲಬ್ ಸಿದ್ಧಕಟ್ಟೆ ಫಲ್ಗುಣಿ, ಬಂಟರ ಸಂಘ, ಬಿಲ್ಲವರ ಸಂಘ, ಶಾರದೋತ್ಸವ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಸಂಸ್ಥೆಗಳ ಸದಸ್ಯರು ರಕ್ತದಾನ ಮಾಡಿದರು.  
 

By suddi9

Leave a Reply

Your email address will not be published. Required fields are marked *