ಬಂಟ್ವಾಳ: ಪರವಾನಿಗೆ ಭೂಮಾಪಕರ ಬೇಡಿಕೆಗಳನ್ನು ಈಡೇರಿಸಿ ಜನಸಾಮಾನ್ಯರ ಸಮಸ್ಯೆಗೆ ಪರಿಹಾರ ನೀಡಲು ಮುಂದಾಗುವಂತೆ ಬಂಟ್ವಾಳ ತಾಲೂಕು ಪಂಚಾಯತ್ ನ ಮಾಜಿ ಸದಸ್ಯ ಪ್ರಭಾಕರ ಪ್ರಭು ಅವರು ರಾಜ್ಯದ ಕಂದಾಯ ಸಚಿವರಾದ ಕೃಷ್ಣಬೈರೇಗೌಡ ಅವರಿಗೆ ಲಿಖಿತ ಮನವಿಯ ಮೂಲಕ ಒತ್ತಾಯಿಸಿದ್ದಾರೆ.

ಕಂದಾಯ ಇಲಾಖೆಯಡಿಯಲ್ಲಿ ಬರುವ ಭೂಮಾಪನ ಇಲಾಖೆಯ ಪರವಾನಿಗೆ ಪಡೆದಿರುವ ಭೂಮಾಪಕರು ಮಾರ್ಚ್ ತಿಂಗಳಿನಿಂದ ನಡೆಸುತ್ತಿರುವ ಮುಷ್ಕರದಿಂದಾಗಿ ಜಮೀನು ಮಾರಾಟ ಮತ್ತು ಖರೀದಿ , ಕುಟುಂಬದೊಳಗಿನ ವಿಭಾಗ ಪತ್ರ , 11 ಇ-ನಕ್ಷೆ , ತಾತ್ಕಲ್ ಪೋಡಿ ಇನ್ನಿತರ ಅಳತೆ ಸಂಬಂಧಿತ ಕೆಲಸ ಕಾರ್ಯಗಳು ಸಂಪೂರ್ಣ ಸ್ಥಗಿತವಾಗಿದ್ದು, ರೈತರು ಮತ್ತು ಜನಸಾಮಾನ್ಯರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಪರವಾನಿಗೆ ಭೂಮಾಪಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ , ಸೇವಾ ಭದ್ರತೆ , ವಿಶೇಷ ನೇಮಕಾತಿಯಲ್ಲಿ  ಪರವಾನಿಗೆ ಭೂಮಾಪಕರನ್ನು ಸರಕಾರಿ ಸೇವೆಯಲ್ಲಿ ಸಕ್ರಮಗೊಳಿಸುವುದು ಸೇರಿದಂತೆ ಅವರ ಬೇಡಿಕೆಗಳಿಗೆ ಸರಕಾರ ತಕ್ಷಣವೇ ಸ್ಪಂದಿಸಬೇಕು ಎಂದು‌ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ. ಭೂಮಾಪಕರ ಮುಷ್ಕರದಿಂದಾಗಿ ಕಳೆದ ಎರಡು ತಿಂಗಳಿನಿಂದ ರಾಜ್ಯದಲ್ಲಿ ಲಕ್ಷಾಂತರ ಅರ್ಜಿಗಳು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 15 ಸಾವಿರ ಹಾಗೂ ಬಂಟ್ವಾಳ ತಾಲೂಕೊಂದರಲ್ಲಿಯೇ 3 ಸಾವಿರಕ್ಕೂ ಅಧಿಕ ಅರ್ಜಿಗಳ ವಿಲೇವಾರಿಯಾಗದೇ ಬಾಕಿಯಾಗಿದೆ.ಇದರಿಂದಾಗಿ‌ ಫಲಾನುಭವಿಗಳುತೊಂದರೆಗೀಡಾಗಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಬೆರಳೆಣಿಕೆಯ ಸರ್ಕಾರಿ ಭೂ ಮಾಪಕರಿಂದ ಇಷ್ಟೊಂದು ಅರ್ಜಿಗಳ ವಿಲೇವಾರಿ ಅಸಾಧ್ಯ. ಈ ಎಲ್ಲಾ ತೊಂದರೆಗಳಿಗೆ ಸರಕಾರದ ನಿರ್ಲಕ್ಷ್ಯವೇ  ಕಾರಣವಾಗಿದ್ದು ಇದಕ್ಕೆ ಸರಕಾರವೇ ನೇರ ಹೊಣೆಯಾಗಿದೆ‌ಎಂದು ತಿಳಿಸಿರುವ ಪ್ರಭು ಅವರು ಸರಕಾರದ ಇನ್ನಾದರೂ  ಎಚ್ಚೆತ್ತು ಈ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಂಡು  ಪರವಾನಿಗೆ ಭೂಮಾಪಕರ ಬೇಡಿಕೆಗಳನ್ನು ಈಡೇರಿಸುವ ಮೂಲಕ ಜನಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

By suddi9

Leave a Reply

Your email address will not be published. Required fields are marked *