ಬಂಟ್ವಾಳ: ರೈತರು ನೀಡಿದ ಅಕ್ರಮ ಸಕ್ರಮ‌ ಅರ್ಜಿಯನ್ನು ಶೀಘ್ರ ವಿಲೇವಾರಿ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ದ.ಕ. ಜಿಲ್ಲಾ ಸಮಿತಿ ಒತ್ತಾಯಿಸಿದೆ.ರೈತ ಸಂಘದ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳ ಗುತ್ತು ಶುಕ್ತವಾರ ಬಿ.ಸಿ.ರೋಡಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ರಾಜ್ಯದಲ್ಲಿ ಆಡಳಿತ ಮಾಡಿದ ಎಲ್ಲಾ ರಾಜಕೀಯ ಪಕ್ಷಗಳ ಸರಕಾರಗಳು ಚುನಾವಣಾ ಸಂದರ್ಭದಲ್ಲಿ ರೈತರ  ಅಕ್ರಮ ಸಕ್ರಮ  ಅರ್ಜಿಯನ್ನು ಇತ್ಯರ್ಥ ಪಡಿಸುವ ಬಗ್ಗೆ  ಭರವಸೆಗಳನ್ನು ನೀಡಿ ಚುನಾವಣೆಯ ಬಳಿಕ ಮರೆತು ಬಿಡುತ್ತಾರೆ. ಪ್ರಸ್ತುತ ಸಾವಿರಗಟ್ಟಲೆ ಅರ್ಜಿಗಳು ಧೂಳು ಹಿಡಿದಿದ್ದು ತಕ್ಷಣವೇ ಎಲ್ಲಾ ಅರ್ಜಿಗಳನ್ನು ಇತ್ಯರ್ಥ ಪಡಿಸುವಂತೆ  ಅವರು ಒತ್ತಾಯಿಸಿದರು

ರೈತರ ಸ್ವಾಧೀನದಲ್ಲಿರುವ ಕುಮ್ಕೀ ಜಮೀನುಗಳ ಮೇಲೆ ಸರಕಾರ ದಾಳಿ ಆರಂಭಿಸಿದೆ. ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ರೈತರ ಕುಮ್ಕಿ ಹಕ್ಕನ್ನು ಕಸಿಯುವ ಪ್ರಯತ್ನ ನಡೆಯುತ್ತಿದ್ದು ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ರೈತರ ಸ್ವಾಧೀನದಲ್ಲಿರುವ ಕುಮ್ಕಿ ಜಮೀನನ್ನು ಸರಕಾರ ಮುಟ್ಟಬಾರದು ಎಂದು ಎಚ್ಚರಿಸಿದರು.‌ ಸರಕಾರದ ಅಭಿವೃದ್ದಿ ಕಾರ್ಯಗಳಿಗೆ ನಮ್ಮ ಆಕ್ಷೇಪವಿಲ್ಲ, ಆದರೆ ತಲೆ ತಲಾಂತರಗಳಿಂದ ಬಂದ‌ ಕೃಷಿ ಭೂಮಿಯ ಜೊತೆಗಿನ ಕುಮ್ಕಿ ಹಕ್ಕನ್ನು ಸರಕಾರ ಕಸಿಯ ಬಾರದು, ಆ ಭೂಮಿಯಲ್ಲಿ ರೈತರು ಕೃಷಿ ಮಾಡಲು ಅವಕಾಶ ಮಾಡಿಕೊಡಬೇಕು. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ  ದ.ಕ. ಜಿಲ್ಲೆಯಲ್ಲಿ ಸಣ್ಣ ಹಿಡುವಳಿದಾರರು ಮಾತ್ರ ಇದ್ದಾರೆ. ಕೆಲವು ಪ್ರಭಾವಶಾಲಿಗಳು ನೂರಾರು ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡ ಉದಾಹರಣೆಗಳು ಇದ್ದು ಅಕ್ರಮ ಸಕ್ರಮ ಜಮೀನಿಗೆ ಅರ್ಜಿ ಹಾಕಿದ ರೈತರಿಗೆ ತೊಂದರೆ ನೀಡದೆ ಶೀಘ್ರ ಹಕ್ಕು ಪತ್ರಗಳನ್ನು ವಿತರಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ , ಬೈಲುಗುತ್ತು, ಬಂಟ್ವಾಳ ತಾಲೂಕು ಅಧ್ಯಕ್ಷ ಎಂ. ಸುಬ್ರಹ್ಮಣ್ಯ ಭಟ್, ತಾಲೂಕು ಸಂಚಾಲಕ ರೋನಾಲ್ಡ್ ಡಿಸೋಜಾ, ಜಿಲ್ಲಾ ಸಂಚಾಲಕ ಮುರುವ ಮಹಾಬಲ ಭಟ್, ತಾಲೂಕು ಕಾರ್ಯದರ್ಶಿ ಸುದೇಶ್ ಮಯ್ಯ ಉಪಸ್ಥಿತರಿದ್ದರು.
 

By suddi9

Leave a Reply

Your email address will not be published. Required fields are marked *