ಬಂಟ್ವಾಳ :ಕುಡಿಯುವ ನೀರಿನ ಶುದ್ಧತೆ ಪರೀಕ್ಷೆ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಅಶುದ್ಧ ನೀರು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುಮಾರ್ ಹೇಳಿದ್ದಾರೆ.
ಮಂಗಳವಾರ ಬಂಟ್ವಾಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಗ್ರಾಮೀಣ ವಸತಿ ಪ್ರದೇಶಗಳಲ್ಲಿನ ನೀರು ಸರಬರಾಜು ವ್ಯವಸ್ಥೆಯಲ್ಲಿ ಬರುವ ಎಲ್ಲಾ ನೀರಿನ ಮಾದರಿಗಳನ್ನು ಫೀಲ್ಡ್ ಟೆಸ್ಟ್ ಕೈಟ್ ಮತ್ತು ಎಚ್ ಟುಎಸ್ ವಿಲ್ಸ್ ಮೂಲಕ ನೀರಿನ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಳ್ಳಲು ಅಭಿಯಾನ ಹಿನ್ನೆಲೆ ಫೆ.7ರವರೆಗೆ ನಡೆಸುವ ಕುರಿತು ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು

ಪ್ರತಿಯೊಂದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೂ ಶುದ್ಧ ಕುಡಿಯುವ ನೀರಿನ ಪೂರೈಕೆಗೆ ಹೆಚ್ಚಿನ ಮಹತ್ವ ನೀಡಬೇಕು. ತರಬೇತಿಯಲ್ಲಿ ನೀಡಲಾಗುವ ನಿಯಮಗಳನ್ನು ಪ್ರತಿಯೊಬ್ಬರೂ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಗ್ರಾ.ಕು.ನೀ.ಮ.ನೈ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ನಟೇಶ್ ಮಾತನಾಡಿ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿನ ಕುಡಿಯುವ ನೀರಿನ ಮೂಲಗಳು, ಅಂಗನವಾಡಿ ಕೇಂದ್ರ, ಶಾಲೆಗಳಿಗೆ ಸರಬರಾಜಾಗುತ್ತಿರುವ ನೀರು, ಜಲಸಂಗ್ರಹಾರಗಳ ನೀರಿನ ಮಾದರಿಗಳ ಗುಣಮಟ್ಟ ಪರೀಕ್ಷಿಸಿ ನೀರಿನ ಶುದ್ಧತೆಯನ್ನು ಖಚಿತಪಡಿಸಿಕೊಳ್ಳುವುದು ಅಗತ್ಯವಿಧ ಎಂದು ಹೇಳಿದರು.

ಇಲಾಖೆಯ ಕಿರಿಯ ವಿಶ್ಲೇಷಣಾಕಾರರಾದ ಸುಹಾಸಿನಿ ಅವರು ತರಬೇತಿಯನ್ನು ನಡೆಸಿಕೊಟ್ಟರು. ತಾಲೂಕು ಪಂಚಾಯತ್ ವ್ಯವಸ್ಥಾಪಕರು ಸಹಾಯಕ ಲೆಕ್ಕಾಧಿಕಾರಿಗಳಾದ ಪ್ರಕಾಶ್ ಪಿ., ಬಂಟ್ವಾಳ ತಾಲೂಕಿನ ನೀರು ಮಾದರಿ ಸಂಗ್ರಹಕಾರ ಅರುಣ್ ಕುಮಾರ್, ಗ್ರಾ.ಕು.ನೀ.ಮ.ನೈ ಇಲಾಖೆಯ ಉಪವಿಭಾಗಗಳ ಅಧಿಕಾರಿಗಳು, ವಿವಿಧ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮದ ನೀರು ಮತ್ತು ನೈರ್ಮಲ್ಯ ಸಮಿತಿಯ ಸದಸ್ಯರು, ಪಂಪ್ ಆಪರೇಟರ್ಗಳು, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು, ವಸತಿ ಶಾಲೆ ವಾರ್ಡನ್, ಗ್ರಾಪಂ ಡಿಇಒ, ಆಶಾ ಕಾರ್ಯಕರ್ತೆಯರು, ನಲ್ ಜಲ್ ಮಿತ್ರ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.
