ಬಂಟ್ವಾಳ: ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯುವುದೇ ಅವರು ತಮ್ಮ ಶಿಕ್ಷಕರಿಗೆ ನೀಡುವ ಗುರುದಕ್ಷಿಣೆಯಾಗಿದ್ದು, ಎಸೆಸೆಲ್ಸಿ ಹಂತದಲ್ಲಿ ವಿಶೇಷ ಶ್ರಮಪಟ್ಟು ಓದಿದಾಗ ಒಳ್ಳೆಯ ಅಂಕ ಪಡೆದು ಉತ್ತಮ ಕಾಲೇಜುಗಳಲ್ಲಿ ಪ್ರವೇಶ ದೊರೆಯುವ ಜತೆಗೆ ಭವಿಷ್ಯತ್ತಿನಲ್ಲಿ ಉದ್ಯೋಗ ಪಡೆಯುವುದಕ್ಕೂ ಅದು ಪೂರಕವಾಗುತ್ತದೆ. ದಡ್ಡಲಕಾಡು ಸರಕಾರಿ ಶಾಲೆ ಬೆಳೆದ ರೀತಿ ಇಡೀ ದೇಶಕ್ಕೆ ಮಾದರಿಯಾಗಿದ್ದು, ಧನಾತ್ಮಕ ವಿಚಾರಗಳಲ್ಲಿ ದಡ್ಡಲಕಾಡು ಶಾಲೆಯು ರಾಜ್ಯಾದ್ಯಂತ ಸುದ್ದಿ ಮಾಡಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ ಎಂದು  ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.
ದಡ್ಡಲಕಾಡು ಪಿಎಂಶ್ರೀ ಸರಕಾರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶ್ರೀದುರ್ಗಾ ಚಾರಿಟೇಬಲ್ ಟ್ರಸ್ಟ್ ಶಾಲೆಯನ್ನು ದತ್ತು ಪಡೆದ ದಶಮಾನೋತ್ಸವದ ಪ್ರಯುಕ್ತ ದಡ್ಡಲಕಾಡು ಸಂಭ್ರಮೋತ್ಸವ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ದಡ್ಡಲಕಾಡು ಶಾಲೆಯ ಶಿಕ್ಷಕರ ಕೊರತೆಯನ್ನು  ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಜತೆ ಚರ್ಚಿಸಿ,  ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಶ್ರೀದುರ್ಗಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಅಂಚನ್ ಮಾತನಾಡಿ, ಸಾವಿರಕ್ಕೂ ಅಧಿಕ ಮಕ್ಕಳಿರುವ ಸರಕಾರಿ ಶಾಲೆಗೆ ಕೇವಲ ಮೂರು  ಖಾಯಂ ಶಿಕ್ಷಕರಿರುವುದು ಅತ್ಯಂತ ನೋವಿನ ವಿಚಾರವಾಗಿದ್ದು, ರಾಜ್ಯದ ಶಿಕ್ಷಣ ವ್ಯವಸ್ಥೆಯ ಗೊಂದಲ ಇದಕ್ಕೆ ಕಾರಣವಾಗಿದೆ ಎಂದರು.

ದ.ಕ.ಜಿಲ್ಲಾ ಡಿಡಿಪಿಐ ಶಶಿಧರ್ ಜಿ.ಎಸ್.ಮಾತನಾಡಿ, ಇಲಾಖೆಯು ಈ ಶಾಲೆಗೆ ಅತಿಥಿ ಶಿಕ್ಷಕರನ್ನು ನೋಮಿಸುವ ಕಾರ್ಯ ಮಾಡಿದ್ದು, ಖಾಯಂ ಶಿಕ್ಷಕರು ಬೇಕು ಎನ್ನುವ ಬೇಡಿಕೆ ಇದೆ. ಇಲಾಖೆಯ ಮಿತಿಗಳು ಹಾಗೂ ಸಾಧ್ಯತೆಗಳ ಕುರಿತು ಈಗಾಗಲೇ ಶಾಸಕರ ಜತೆ ಚರ್ಚಿಸಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕರ ವ್ಯವಸ್ಥೆಯನ್ನು ಮಾಡುವುದಾಗಿ ಭರವಸೆಯಿತ್ತರು.
ವೇದಿಕೆಯಲ್ಲಿ ಪಂಜಿಕಲ್ಲು ಗ್ರಾ.ಪಂ.ಸದಸ್ಯರಾದ ಪೂವಪ್ಪ ಮೆಂಡನ್, ರೂಪಶ್ರೀ, ಪ್ರೌಢಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಶೇಖರ್ ಅಂಚನ್ ಪಿಲ್ಕಾಜೆಗುತ್ತು, ನಿವೃತ್ತ ಮುಖ್ಯಶಿಕ್ಷಕ ಮೌರಿಸ್ ಡಿಸೋಜ, ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಬಾಲಕೃಷ್ಣ ಗೌಡ, ಉಪಾಧ್ಯಕ್ಷ ರಾಜೇಶ್ ನೆಕ್ಕರೆ ಉಪಸ್ಥಿತರಿದ್ದರು.
ಇದೇ ವೇಳೆ ಕರಾಟೆ ತರಬೇತುದಾರ ಅಶೋಕ ಆಚಾರ್ಯ ಹಾಗೂ ರಾಷ್ಟ್ರ ಮಟ್ಟದ ಕರಾಟೆಪಟು ಮಂಥನ್ ಪೂಜಾರಿ ಅವರನ್ನು ಸಮ್ಮಾನಿಸಲಾಯಿತು.
ಪ್ರೌಢಶಾಲಾ ಪ್ರಭಾರ ಮುಖ್ಯಶಿಕ್ಷಕ ಶೈಲೇಂದ್ರ ಸ್ವಾಗತಿಸಿದರು. ಹಿರಿಯ ಶಿಕ್ಷಕಿ ಹಿಲ್ಡಾ ಫೆರ್ನಾಂಡೀಸ್ ಪ್ರಸ್ತಾವನೆಗೈದರು. ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಜಯಶ್ರೀ ವಂದಿಸಿದರು. ಶಿಕ್ಷಕಿಯರಾದ ರಶ್ಮಿತಾ ಹಾಗೂ ಭವ್ಯ ಕಾರ್ಯಕ್ರಮ ನಿರ್ವಹಿಸಿದರು. 
 
 
 
 




By suddi9

Leave a Reply

Your email address will not be published. Required fields are marked *