ನ.೨೭:ಕಕ್ಯಪದವು” ಸತ್ಯ-ಧರ್ಮ” ಜೋಡುಕರೆ ಬಯಲು ಕಂಬಳ
ಬಂಟ್ವಾಳ : ತಾಲೂಕಿನ ಉಳಿ ಗ್ರಾಮದ ಕಕ್ಯಪದವಿನ ಮೈರ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ೧೩ನೇ ವರ್ಷದ ಹೊನಲು ಬೆಳಕಿನ ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳವು ನ.೨೯ರಂದು ಮೈರ, ಬರ್ಕೆಜಾಲುನಲ್ಲಿ ಜರಗಲಿದೆ.
ಶ್ರೀ ರಾಮಾಂಜನೇಯ ಗೆಳೆಯರ ಬಳಗ ಬಂಟ್ವಾಳ ತಾಲೂಕು ಉಳಿಗ್ರಾಮದ ಕಕ್ಯಪದವು ಮೂಲತಃ ಹಳ್ಳಿಗಾಡು ಪ್ರದೇಶ ಮತ್ತು ಕೃಷಿ ಪ್ರಾಧಾನ್ಯತೆ ಪಡೆದಂತಹ ಹಾಗೂ ಕೂಲಿ ಕಾರ್ಮಿಕರೇ ಹೆಚ್ಚಾಗಿ ವಾಸಿಸುವ ಪ್ರದೇಶವಾಗಿದ್ದರೂ ಅಲ್ಲಿನ ಜನರು ಕ್ರಿಯಾಶೀಲರು. ಆರ್ಥಿಕ ಬಡತನವಿದ್ದರೂ, ಮನಸ್ಸಿಗೆ ಬಡತನವಿಲ್ಲ ಎಂಬಂತೆ ತಮ್ಮ ಹಳ್ಳಿಯ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಮಗ್ರ ಅಭಿವೃದ್ಧಿಗೋಸ್ಕರವಾಗಿ ಅನೇಕ ಕನಸುಗಳನ್ನು ಹೊತ್ತುಕೊಂಡು ಜೀವನ ಸಾಗಿಸುತ್ತಿದ್ದರು.
ಆ ಕನಸ್ಸಿನ ಫಲವಾಗಿ ಹುಟ್ಟಿಕೊಂಡ ಬಳಗವೇ ಶ್ರೀ ರಾಮಾಂಜನೇಯ ಗೆಳೆಯರ ಬಳಗ. ತುಳುನಾಡಿನಾದ್ಯಂತ ಕಂಬಳಗಳು ಕಂಬಳ ಸಮಿತಿ ಅಥವಾ ದೇವಸ್ಥಾನದ ವತಿಯಿಂದ ನಡೆಯುತ್ತಿದ್ದರೆ ಕಂಬಳದ ಇತಿಹಾಸದಲ್ಲಿ ಪ್ರಥಮ ಬಾರಿ ಯುವಕ ಸಂಘವೊಂದು ಕಂಬಳವನ್ನು ಸಂಘಟಿಸುತ್ತಿದೆ. ಕಳೆದ ೨೭ ವರ್ಷಗಳಿಂದ ಧಾರ್ಮಿಕ, ಶೈಕ್ಷಣಿಕ, ಕ್ರೀಡಾ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅನುಪಮ ಸೇವೆ ಗೈಯುತ್ತಿರುವ ಶ್ರೀ ರಾಮಾಂಜನೇಯ ಗೆಳೆಯರ ಬಳಗ ತುಳುನಾಡಿನ ಹೆಮ್ಮೆಯ ಜಾನಪದ ಕ್ರೀಡೆ ಕಂಬಳವನ್ನು ಕಳೆದ ೧೨ ವರ್ಷ ಗಳಿಂದ ನಡೆಸಿಕೊಂಡು ಬರುತ್ತಿದೆ.
ಪ್ರಸ್ತುತ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಗೌರವಾಧ್ಯಕ್ಷತೆಯಲ್ಲಿ , ಗೆಳೆಯರ ಬಳಗದ ಅಧ್ಯಕ್ಷ ದಿನೇಶ್ ಪೂಜಾರಿ ಕುಕ್ಕಾಜೆ ಹಾಗೂ ಕಂಬಳ ಸಮಿತಿ ಅಧ್ಯಕ್ಷ ಸುದರ್ಶನ್ ಬಜ ಅವರ ಮುಂದಾಳತ್ವದಲ್ಲಿ ಸದಸ್ಯರ ಮುತುವರ್ಜಿಯಲ್ಲಿ ಕಂಬಳ ನಡೆಯುತ್ತಿದೆ.
ಅಂದು ಬೆಳಗ್ಗೆ ಕಂಬಳವನ್ನು ವೇ.ಮೂ.ರಾಘವೇಂದ್ರ ಭಟ್ ಕೊಡಂಬೆಟ್ಟು ಅವರ ಪೌರೋಹಿತ್ಯದಲ್ಲಿ ಹೈದರಾಬಾದ್ ಎಂಇಪಿ ಸಂಸ್ಥೆಯ ಎಂಡಿ ನಿತಿನ್ ಶೆಟ್ಟಿ ಮತ್ತು ಕಂಬಳಕೋಣಗಳ ಯಜಮಾನ ತನಿಯಪ್ಪ ಗೌಡ ಪೆಂರ್ಗಾಲು ಅವರು ಕಂಬಳವನ್ನು ಉದ್ಘಾಟಿಸಲಿದ್ದಾರೆ. ಪ್ರಗತಿಪರ ಕೃಷಿಕ ರಾಮಯ್ಯ ಭಂಡಾರಿ ಪುಣ್ಕೆದಡಿ ಮತ್ತು ಗೆಳೆಯರ ಬಳಗದ ಅಧ್ಯಕ್ಷ ದಿನೇಶ್ ಪೂಜಾರಿ ಕುಕ್ಕಾಜೆ ಅವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು.
ಸಂಜೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ಸಭಾಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಉದ್ಯಮಿ ಶಶಿಧರ ಶೆಟ್ಟಿ ಬರೊಡಾ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಸಂಸದ ಕ್ಯಾ| ಬೃಜೇಶ್ ಚೌಟ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಡಾ. ಎಂ ಎನ್. ರಾಜೇಂದ್ರ ಕುಮಾರ್, ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.
ಸಾಧಕರಾದ ಭಾಸ್ಕರ ಕೋಟ್ಯಾನ್,ಶಾಂತರಾಮ ಶೆಟ್ಟಿ ಬಾರ್ಕೂರು, ಟಿ.ಜಿ.ರಾಜಾರಾಮ ಭಟ್, ಸತೀಶ್ ದೇವಾಡಿಗ, ಸುದರ್ಶನ್ ನಾಯ್ಕ ಅವರನ್ನು ಈ ಸಂದರ್ಭ ಸಮ್ಮಾನಿಲಾಗುವುದು ಎಂದು ಕಂಬಳ ಸಮಿತಿ ಅಧ್ಯಕ್ಷ ಸುದರ್ಶನ್ ಬಜ ಪ್ರಕಟನೆಯಲ್ಲಿ ತಿಳಿಸಿದ್ದಾರೆ



