ಕಲ್ಲಡ್ಕದಲ್ಲಿ ಮಾತೆಯರಿಗಾಗಿ ಸಪ್ತಶಕ್ತಿ ಸಂಗಮ ಕಾರ್ಯಕ್ರಮ
ಬಂಟ್ವಾಳ: ವಿದ್ಯಾಭಾರತಿ ಅಖಿಲ ಭಾರತ ಶಿಕ್ಷಣ ಸಂಸ್ಥಾನಂ ವತಿಯಿಂದ ಕಲ್ಲಡ್ಕ ಶ್ರೀರಾಮದ ಶಿಶುಮಂದಿರ ೧ ಮತ್ತು ೨ನೇ ತರಗತಿಯ ವಿದ್ಯಾರ್ಥಿಗಳ ಮಾತೆಯರಿಗಾಗಿ ಸಪ್ತಶಕ್ತಿ ಸಂಗಮ ಕಾರ್ಯಕ್ರಮವುಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ನಡೆಯಿತು.

ಅಖಿಲ ಭಾರತ ಸಪ್ತಶಕ್ತಿ ಸಂಗಮದ ಪ್ರಮುಖರಾದ ಧರಣಿಪ್ರಿಯ ವಿಶಾಖಪಟ್ಟಣ ಮಾತನಾಡಿ “ ಸಂಘ ಶತಾಬ್ಧಿಯ ಹಿನ್ನಲೆಯಲ್ಲಿ ಆಯೋಜಿಸಿದ ಸಪ್ತಶಕ್ತಿ ಸಂಗಮ ಇಲ್ಲಿ ಸಫಲತೆಯನ್ನು ಹೊಂದಿದೆ. ಮಾತೆಯರಲ್ಲಿ ಸಪ್ತಶಕ್ತಿಗಳು ಜಾಗೃತವಾಗಿ ಇದು ಸಮಾಜದ ಇತರ ಮಾತೆಯರಿಗೆ ಕೂಡ ಪ್ರೇರಣಾದಾಯಕವಾಗಿದೆ” ಎಂದು ತಿಳಿಸಿದರು.

ರಾಷ್ಟ್ರ ಸೇವಿಕಾ ಸಮಿತಿಯ ದಕ್ಷಿಣ ಪ್ರಾಂತ್ಯದ ಮಾರ್ಗದರ್ಶಕ ಮಂಡಳಿಯ ಸದಸ್ಯೆ ಡಾ. ಕಮಲಾ ಪ್ರಭಾಕರ್ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವು ಪ್ರಯತ್ನ ಮಾಡಿದರೆ ಎಲ್ಲವೂ ಸಾಧ್ಯ. ಸ್ವ-ಅಧ್ಯಾಯವನ್ನು ಬೆಳೆಸಿ ತಮ್ಮ ಜ್ಞಾನವನ್ನು ವೃದ್ಧಿಸಿಕೊಂಡು, ಸಪ್ತಶಕ್ತಿಯ ಗುಣಗಳನ್ನು ಅರಿತುಕೊಂಡು ಮಕ್ಕಳನ್ನು ಬೆಳೆಸಬೇಕು ಎಂದು ತಿಳಿಸಿದರು.
ಪುಣಚ ಶ್ರೀದೇವಿ ಪ್ರೌಢಶಾಲೆ ನಿವೃತ್ತ ಮುಖ್ಯೋಪಾಧ್ಯಯಿನಿ ಗಂಗಮ್ಮ ಗಮಕವಾಚಕಿ ಮಂಜುಳಾ ಸುಬ್ರಹ್ಮಣ್ಯ ಭಟ್ ಕುಕ್ಕಾಜೆ ಸಭೆಯನ್ನುದ್ದೇಶಿಸಿ ಮಾತನಾಡಿದರು.ಕಾರ್ಯಕ್ರಮಕ್ಕೆ ಮುನ್ನ ಮಾತೆಯರನ್ನು ಅರಶಿಣ ಕುಂಕುಮ ನೀಡಿ ಆರತಿ ಬೆಳಗಿಸಿ ಬರಮಾಡಿಕೊಳ್ಳಲಾಯಿತು.
ನಂತರ ಭಾರತಮಾತೆಗೆ ದೀಪ ಪ್ರಜ್ವಲನೆ ಹಾಗೂ ಪುಷ್ಪಾರ್ಚನೆ ಮಾಡಿ ಅಗ್ನಿಹೋತ್ರದೊಂದಿಗೆ ಸರಸ್ವತಿ ವಂದನೆಯನ್ನು ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅತಿಥಿಗಳಿಗೆ ಮಾತೆಯರು ಹೂ ನೀಡುವುದರ ಮೂಲಕ ಸ್ವಾಗತಿಸಿದರು.
ಮಾತೆಯರು ಸಾಮೂಹಿಕ ಗೀತೆ ಹಾಡಿದರೆ, ವಿದ್ಯಾರ್ಥಿಗಳು ವಿವಿಧ ಧೀರ ನಾರಿಯರಾದ ರಾಣಿ ಅಬ್ಬಕ್ಕದೇವಿ, ಒನಕೆ ಓಬವ್ವ, ಅಕ್ಕಮಹಾದೇವಿ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಜೀಜಾಬಾಯಿ ಮತ್ತು ಶಿವಾಜಿ, ಲಕ್ಷ್ಮೀಬಾಯಿ ಕೇಳ್ಕರ್ ಹಾಗೂ ಅಹಲ್ಯಾಬಾಯಿ ಹೋಳ್ಕರ್‌ರವರ ವೇಷಭೂಷಣಗಳ ಜೊತೆಗೆ ಸಂದೇಶಗಳನ್ನು ನುಡಿದರು.
ನಂತರ ಮಾತೆಯರಿಗೆ ನಾಲ್ಕು ತಂಡಗಳನ್ನು ರಚಿಸಿ ರಸಪ್ರಶ್ನೆಯನ್ನು ಏರ್ಪಡಿಸಿ ಬಹುಮಾನವನ್ನು ವಿತರಿಸಲಾಯಿತು. ರೂಪಕಲಾ ಮತ್ತು ಚೈತ್ರಾ ಇದನ್ನು ನಡೆಸಿಕೊಟ್ಟರು.
ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಮಧುರ ಕಡ್ಯ ಪ್ರಸ್ತಾವನೆಗೈದರು.
ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದಸ್ಯೆ ಅಕ್ಷತಾ ಕೊಂಬಿಲ, ಉಪಸ್ಥಿತರಿದ್ದರು.



