Published On: Sat, Oct 25th, 2025

ಗುರುಪುರ ಶ್ರೀ ಜಂಗಮ ಸಂಸ್ಥಾನ ಮಠದ ಶ್ರೀ ನೀಲಕಂಠೇಶ್ವರ ದೇವಸ್ಥಾನಕ್ಕೆ ಶಿಲಾನ್ಯಾಸ: ಸುಮಾರು ೫ ಕೋ. ರೂ. ವೆಚ್ಚದಲ್ಲಿಶ್ರೀ ಕ್ಷೇತ್ರ ಶಿಲಾಮಯದಲ್ಲಿ ನಿರ್ಮಾಣಗೊಳ್ಳಲಿದೆ.

ಕೈಕಂಬ : ಶ್ರೀ ನೀಲಕಂಠೇಶ್ವರ ದೇವಸ್ಥಾನ ಶ್ರೀ ಜಂಗಮ ಸಂಸ್ಥಾನ ಮಠ ಗುರುಪುರ ಇದರ ಜೀರ್ಣೋದ್ಧಾರ ಪ್ರಯುಕ್ತ ಅ. ೨೪ರಂದು ವಿಶೇಷ ಧಾರ್ಮಿಕ ವಿಧಿವಿಧಾನಗಳ ಮೂಲಕ ಅದ್ದೂರಿ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.

ಶಿಲಾನ್ಯಾಸಗೈದ ಸುತ್ತೂರು ಶ್ರೀ ಕ್ಷೇತ್ರದ ಜಗದ್ಗುರು ಶ್ರೀ ವೀರ ಸಿಂಹಾಸನ ಸಂಸ್ಥಾನ ಮಠದ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಮಠಗಳು ಸಮಾಜದ ಏಳ್ಗೆ ದೆಸೆಯಲ್ಲಿ ಜವಾಬ್ದಾರಿಯುತ ಕೆಲಸ ಮಾಡುತ್ತಿವೆ. ಇಲ್ಲಿನ ದೇವರು-ಧಾರ್ಮಿಕ ವಿಚಾರದಿಂದಲೇ ಜಗತ್ತು ಭಾರತದತ್ತ ನೋಡುವಂತಾಗಿದೆ. ಹಿಂದೆ ಧಾರ್ಮಿಕ ಕೇಂದ್ರಗಳು ನ್ಯಾಯಸ್ಥಾನ, ಕಲಾಕೇಂದ್ರಗಳಾಗಿತ್ತು. ಶ್ರೀ ಕ್ಷೇತ್ರಗಳಲ್ಲಿ ಅಂತಹ ಅವತರಣಿಕೆಯ ಪುನರುತ್ಥಾನವಾಗಬೇಕು. ಭಗವಂತನ ಮೇಲೆ ನಂಬಿಕೆ ಇಟ್ಟು ಮಾಡುವ ಪ್ರತಿಯೊಂದು ಕೆಲಸಕ್ಕೆ ಆತನ ಕೃಪೆ ಇದ್ದೇ ಇರುತ್ತದೆ ಎಂದರು.

ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಇತಿಹಾಸ ಕೆದಕಿದಾಗ ಕರಾವಳಿ ಕರ್ನಾಟಕದಲ್ಲಿ ನೂರಾರು ಮಠಗಳಿದ್ದ ನಿದರ್ಶನಗಳಿವೆ. ಆದರೆ ಈಗ ಗುರುಪುರ ಜಂಗಮ ಸಂಸ್ಥಾನ ಮಠದ ಸಹಿತ ಬೆರಳೆಣಿಕೆ ಮಠಗಳು ಮಾತ್ರ ಕಾಣ ಸಿಗುತ್ತವೆ. ಈ ಮಠಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ. ಗುರುಗಳಿದ್ದ `ಪುರ’ ಗುರುಪುರವಾಗಿದೆ. ಅತಿ ಶೀಘ್ರ ಶಿಲಾಮಯ ಜೀರ್ಣೋದ್ಧಾರದೊಂದಿಗೆ ಮಠದ ಗತವೈಭವ ಮರುಕಳಿಸಿ ಎಂದು ಹಾರೈಸಿದರು.

ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ನೂರಾರು ವರ್ಷಗಳ ಬಳಿಕ ಶಿಲಾನ್ಯಾಸಗೊಂಡು ಈ ಮಠ ಜೀರ್ಣೋದ್ಧಾರಗೊಳ್ಳುತ್ತಿದೆ. ಹಾಗಾಗಿ ಇದು ಗುರುಪುರದ ಇತಿಹಾಸದಲ್ಲಿ ಸ್ವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನವಾಗಿದೆ. ನಮ್ಮ ಅಳಿವು-ಉಳಿವು ಭಗವಂತನ ಇಚ್ಛೆಯಂತಿದೆ. ಆತನ ಇಚ್ಛೆಯಂತೆ ಈ ಪುಣ್ಯದ ಕೆಲಸ ನಡೆಯುತ್ತಿದೆ. ಒಂದು ಒಳ್ಳೆಯ ಕೆಲಸದಲ್ಲಿ ನಾವೆಲ್ಲರೂ ಒಗ್ಗೂಡಿ, ಪರಸ್ಪರ ಸಹಕಾರ ಭಾವನೆಯಿಂದ ಕೆಲಸ ಮಾಡಬೇಕು ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಅವರು ಮಾತನಾಡಿ, ಶ್ರೀ ಕ್ಷೇತ್ರದ ಶಿಲಾಮಯ ನಿರ್ಮಾಣ ಕಾರ್ಯ ಸುಮಾರು ೫ ಕೋ. ರೂ. ವೆಚ್ಚದಲ್ಲಿ ನಡೆಯಲಿದೆ. ಇಂತಹ ಪುಣ್ಯದ ಕೆಲಸದಲ್ಲಿ ಎಲ್ಲರ ಸಹಕಾರ ಅತ್ಯವಶ್ಯ. ಹಿಂದೂಗಳು ಯಾವುದೇ ರಾಜಕೀಯ ಪಕ್ಷದಲ್ಲಿದ್ದರೂ, ಇಂತಹ ಪುಣ್ಯದ ಕೆಲಸದಲ್ಲಿ ಎಲ್ಲ ಹಿಂದೂಗಳು ಕೈಜೋಡಿಸಬೇಕು. ವೈಯಕ್ತಿಕ ನೆಲೆಯಲ್ಲಿ ಮತ್ತು ಸರ್ಕಾರದಿಂದ ಸಿಗುವ ನೆರವಿಗಾಗಿ ಪ್ರಯತ್ನಿಸುವೆ ಎಂದರು.

ಮಾಜಿ ಸಚಿವ ಬಿ. ರಮಾನಾಥ ರೈ, ಶ್ರೀ ಕ್ಷೇತ್ರ ಕುದ್ರೋಳಿಯ ಕೋಶಾಧಿಕಾರಿ ಪದ್ಮರಾಜ ಆರ್. ಪೂಜಾರಿ, ನಿಕಟಪೂರ್ವ ಸಂಸದ ನಳಿನ್ ಕುಮಾರ್ ಕಟೀಲ್, ದ.ಕ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದ್ರೆ, ಮಲ್ಲಿಕಾರ್ಜುನ ಬೆಂಗಳೂರು ಅವರು ಶುಭ ಹಾರೈಸಿದರು.

ಶ್ರೀ ಜಂಗಮ ಸಂಸ್ಥಾನ ಮಠದ ಮಠಾಧ್ಯಕ್ಷ ಶ್ರೀ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಪ್ರಸ್ತಾವಿಕ ಮಾತನಾಡಿ, ಮಠದ ಇತಿಹಾಸದ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಹಾಸನ ತಣ್ಣೀರುಹಳ್ಳ ಮಠದ ಶ್ರೀಗಳು, ಬೇವೂರು ಮಠ, ಚೆನ್ನಪಟ್ಟಣ ಮಠ, ಅರಮೇರಿ ಮಠ, ಸಿರಿಗಲ್ಲೆ ಮಠ, ಹುಲಿಯೂರು ದುರ್ಗ ಮಠ, ಹೆಬ್ಬಣಿ ಮಠ, ಶಿಗಮಳ್ಳಿ ಮಠ ಹಾಗೂ ನಂಜನಗೂಡು ಮಠದ ಶ್ರೀಗಳು, ಕಾರಮೊಗರು ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ರವಿರಾಜ ಶೆಟ್ಟಿ ಕಾರಮೊಗರುಗುತ್ತು, ಬೆಂಗಳೂರು ಬಿಬಿಎಂಪಿ ಮಾಜಿ ಉಪಮೇಯರ್ ಸಿ. ಎಸ್. ಪುಟ್ಟರಾಜು, ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದ ರಾಷ್ಟ್ರೀಯ ಉಪಾಧ್ಯಕ್ಷೆ ವಿನುತಾ ರವಿ, ಬೆಂಗಳೂರು ಉದ್ಯಮಿ ಮಧುಸೂದನ ಪೈ ಗುರುಪುರ, ಅಕ್ಕಮಹಾದೇವಿ ಮಹಿಳಾ ಸಂಘದ ಸುಮಾ ಮಾನ್ವಿ, ಅಖಿಲ ಭಾರತ ವೀರಶೈವ ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ, ಕರಾವಳಿ ಕ್ಷೇಮಾಭಿವೃದ್ಧಿ ಸಂಘದ ಚೆನ್ನಬಸಪ್ಪ ಇದ್ದರು.

ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಸಂಸದ ಕ್ಯಾ. ಬೃಜೇಶ್ ಚೌಟ, ಬಂಟ್ವಾಳ ಶಾಸಕರಾದ ಡಾ. ಭರತ್ ಶೆಟ್ಟಿ, ರಾಜೇಶ್ ನಾಯ್ಕ್, ಮುಂಬೈ ಉದ್ಯಮಿ ಹಾಗೂ ಜಯಕೃಷ್ಣ ಪರಿಸರ ಪ್ರೇಮಿ ಸಮಿತಿ ಅಧ್ಯಕ್ಷ ಜಯಕೃಷ್ಣ ಎ. ಶೆಟ್ಟಿ, ಗುರುಪುರ ಸತ್ಯದೇವತಾ ಧರ್ಮದೇವತಾ ಮಂದಿರದ ವೇದಮೂರ್ತಿ ಚಂದ್ರಕಾಂತ ಭಟ್, ಮಾಜಿ ಸಚಿವ ಕೃಷ್ಣ ಪಾಲೆಮಾರ್, ಮೂಡಬಿದ್ರೆ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕುಲದೀಪ ಚೌಟ,ಜಗಧೀಶ್‌ ಅಧಿಕಾರಿ, ಸ್ಥಳೀಯ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಊರ-ಪರವೂರ ಗಣ್ಯರು ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು. ಜೀರ್ಣೋದ್ಧಾರದ ವಿವಿಧ ಕೆಲಸಗಳ ಉಸ್ತುವಾರಿ ವಹಿಸಿಕೊಂಡವರನ್ನು ಗೌರವಿಸಲಾಯಿತು. ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಸದಸ್ಯರು ಸಹಕರಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ಮತ್ತು ವಿಜೆ ಮಧು ಗುರುಪುರ ನಿರೂಪಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಚಿನ್ ಅಡಪ ವಂದಿಸಿದರು. ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter