ಬಂಟ್ವಾಳ ತಾಲೂಕು ಆಮೆಚೂರು ಕಬಡ್ಡಿ ಅಸೋಸಿಯೇಷನ್ ಅನುಮತಿ ಇಲ್ಲದ ಪಂದ್ಯಾಟಗಳಲ್ಲಿ ಭಾಗವಹಿಸಿದ ತಂಡ, ಆಟಗಾರರಿಗೆ 6 ತಿಂಗಳ ಅಮಾನತು ಮಹತ್ವದ ನಿರ್ಧಾರ
ಬಂಟ್ವಾಳ : ಇಲ್ಲಿನ ತಾಲೂಕು ಆಮೆಚೂರು ಕಬಡ್ಡಿ ಅಸೋಸಿಯೇಷನ್ ನ ಅನುಮತಿಯಿಲ್ಲದ (ಬ್ಲಾಕ್ ಮ್ಯಾಚ್) ಪಂದ್ಯಾಟಗಳಲ್ಲಿ ಭಾಗವಹಿಸಿದ ತಂಡ ಹಾಗೂ ಆಟಗಾರರನ್ನು ಮುಂದಿನ 6 ತಿಂಗಳ ಕಾಲ ಅಮಾನತಿಗೆ ಒಳಪಡಿಸಲಾಗುವ ಮಹತ್ವದ ನಿರ್ಣಯವೊಂದನ್ನು ಬಂಟ್ವಾಳ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಷನ್ ನಿರ್ಣಯ ಕೈಗೊಂಡಿದೆ.

ಬಿ.ಸಿ.ರೋಡಿನ ಸರಕಾರಿ ನೌಕರರ ಸಭಾ ಭವನದಲ್ಲಿ ನಡೆದ ಬಂಟ್ವಾಳ ತಾಲೂಕು ಅಮೆಚೂರು ಕಬ್ಬಡಿ ಅಸೋಸಿಯೇಷನ್, ಅಮೆಚೂರ್ ಕಬ್ಬಡಿ ತೀರ್ಪುಗಾರರ ಮಂಡಳಿ, ತಾಲೂಕಿನ ಕಬ್ಬಡಿ ಆಯೋಜಕರು, ಸಂಘಟಕರು, ತರಬೇತುದಾರರು ಹಾಗೂ ಆಟಗಾರರ
ಸಮಾಲೋಚನಾ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಬ್ಲ್ಯಾಕ್ ಮ್ಯಾಚ್ ಪಂದ್ಯಾಟದಲ್ಲಿ ಭಾಗವಹಿಸಿದ ಆಟಗಾರರಿಗೆ ಅಮಾನತಿನ ಜೊತೆಗೆ ಅಮೆಚೂರು ಕಬಡ್ಡಿ ಫೆಡರೇಷನ್ ವತಿಯಿಂದ ಆಯೋಜನೆಗೊಳ್ಳುವ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪಂದ್ಯಾಟಗಳಿಗೆ ಆಯ್ಕೆಯನ್ನು ನೀಡದಿರುವ ಬಗ್ಗೆಯೂ ಕ್ರಮ ಕೈಗೊಳ್ಳುವಂತೆ ನಿರ್ಣಯ ಕೈಗೊಂಡಿದೆ ಎಂದು ಅಮೆಚೂರಿನ ಪ್ರಕಟಣೆ ತಿಳಿಸಿದೆ.
ಅಮೆಚೂರ್ ಕಬ್ಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ತಾಲೂಕಿನಲ್ಲಿ ನಡೆಯುವ ಎಲ್ಲಾ ಹಂತದ ಕಬಡ್ಡಿ ಆಯೋಜನೆಯ ಬಗ್ಗೆ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ನ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಅನುಮತಿ ಪಡೆದ ಹಂತದ ಹೊರತು ಇತರ ಹಂತದ ಪಂದ್ಯಾಟ ಆಯೋಜಿಸಬಾರದು, ತಾಲೂಕಿನಲ್ಲಿ ಜಿಲ್ಲಾ ಮಟ್ಟದ ಪಂದ್ಯಾಟದಲ್ಲಿ ವಿದ್ಯಾ ಸಂಸ್ಥೆಯ ತಂಡಗಳು ಭಾಗವಹಿಸುವುದಾದರೆ ಪ್ರಸ್ತುತ ಅವರು ಅದೇ ವಿದ್ಯಾ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಬಗ್ಗೆ ದೃಡೀಕರಣ ಪತ್ರ ಹೊಂದಿರಬೇಕು, ತಾಲೂಕಿನಲ್ಲಿ ನಡೆಯುವ ಎಲ್ಲಾ ಪಂದ್ಯಾಟಗಳು ಕಾನೂನು ಸುವ್ಯವಸ್ಥೆಯ ಕಾರಣಕ್ಕೆ ಮತ್ತು ಆಟಗಾರರು, ತೀರ್ಪುಗಾರರ ಆರೋಗ್ಯದ ಹಿತದೃಷ್ಟಿಯಿಂದ ರಾತ್ರಿ 10 ರ ಒಳಗಾಗಿ ಮುಗಿಸುವುದು, ಬಂಟ್ವಾಳ ಅಮೆಚೂರ್ ಕಬಡ್ಡಿ ತೀರ್ಪುಗಾರರ ಮಂಡಳಿಯ ತೀರ್ಪುಗಾರರು ಉದ್ದೇಶ ಪೂರ್ವಕ ಅಥವಾ ತಪ್ಪಾಗಿ ತೀರ್ಪು ನೀಡಿದಲ್ಲಿ ಲಿಖಿತವಾಗಿ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಥವಾ ತೀರ್ಪುಗಾರ ಮಂಡಳಿಯ ಅಧ್ಯಕ್ಷರಿಗೆ ತಿಳಿಸುವುದು, ಇಂತಹ ದೂರುಗಳು ಬಂದಲ್ಲಿ ಈ ಬಗ್ಗೆ ಸೂಕ್ತ ಕ್ರಮ ವಹಿಸುವುದು, ತೀರ್ಪುಗಾರಿಕೆಯ ಸಂದರ್ಭದಲ್ಲಿ ತೀರ್ಪುಗಾರರ ಜೊತೆಗೆ ಅನುಚಿತವಾಗಿ ವರ್ತಿಸಿದಲ್ಲಿ ಅಂತಹ ಆಟಗಾರರನ್ನು ಅಮಾನತಿನಲ್ಲಿಡುವುದು
ಮೊದಲಾದ ನಿರ್ಣಯಗಳನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದುಪ್ರಕಟಣೆ ತಿಳಿಸಿದೆ.
ಸಭೆಯ ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಪುಷ್ಪರಾಜ್ ಚೌಟ ಮಾತನಾಡಿ
ತಾಲೂಕಿನಲ್ಲಿ ನಡೆಯುವ
ಪಂದ್ಯಾಟಗಳಲ್ಲಿ ಶಿಸ್ತು ಬದ್ಧವಾಗಿ ಭಾಗವಹಿಸಿದ ತಂಡದ ಆಟಗಾರರಿಗೆ ಅಸೋಸಿಯೇಷನ್ ವತಿಯಿಂದ ಉಚಿತ ಇನ್ಸೂರೆನ್ಸ್ ವ್ಯವಸ್ಥೆಯನ್ನು ಕಲ್ಪಿಸುವ ಚಿಂತನೆ ಇದೆ ಎಂದರು.
ಬಂಟ್ವಾಳ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಷನ್ ಗೌರವಾಧ್ಯಕ್ಷ ಬೇಬಿ ಕುಂದರ್, ಕಾರ್ಯಧ್ಯಕ್ಷ ಮಹಮ್ಮದ್ ಝಕರಿಯ ಕಲ್ಲಡ್ಕ, ಉಪಾಧ್ಯಕ್ಷರಾದ ಬಾಬು ಮಾಸ್ಟರ್, ನಾಗೇಶ್ ಪೂಜಾರಿ ಏಲಬೆ, ಸೇಸಪ್ಪ ಮೂಲ್ಯ ತುಂಬೆ, ಸಂಘಟನಾ ಕಾರ್ಯದರ್ಶಿಗಳಾದ ರೂಪಿತ್ ರೈ, ಮೂಸಾ ಕರಿಂ ಮಾಣಿ, ತೀರ್ಪುಗಾರರ ಮಂಡಳಿ ಕನ್ವೀನರ್ ಹಬೀಬ್ ಮಾಣಿ ವೇದಿಕೆಯಲ್ಲಿದ್ದರು.
ಕಬಡ್ಡಿ ಪ್ರಮುಖರಾದ ನಿತಿನ್ ಶೆಟ್ಟಿ ಶಂಭೂರ್, ಇಬ್ರಾಹಿಂ ಕಲ್ಲಡ್ಕ, ಮನ್ಸೂರ್ ಕುಕ್ಕಾಜೆ, ಸಂಪತ್ ಕಡೇಶ್ವಾಲ್ಯ, ಗಣೇಶ್ ಶಂಭೂರ್, ಸೈಪುದ್ದೀನ್, ನೌಶಾದ್ ಕಲ್ಪನೆ, ವಿನಯ ನಡುಮೊಗರು, ಸಿದ್ದಿಕ್ ಕುಕ್ಕಾಜೆ, ಸಲೀಂ, ಹೈಪ್ ಬಂಗೇರಕೋಡಿ, ರಂಜಿತ್ ಜಾರಂದಗುಡ್ಡೆ ವಿವಿಧ ಸಲಹೆಗಳನ್ನಿತ್ತರು.
ಇದೇ ವೇಳೆ ರಾಜಸ್ಥಾನದ ಜೈಪುರದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ತೀರ್ಪುಗಾರರ ಪರೀಕ್ಷೆಯಲ್ಲಿ ತೇರ್ಗಡೆಯಾದ ದೀಪಕ್ ಪೆರಾಜೆ ಅವರನ್ನು ಅಭಿನಂದಿಸಲಾಯಿತು
ಬಂಟ್ವಾಳ ತೀರ್ಪುಗಾರರ ಮಂಡಳಿಯ ಅಧ್ಯಕ್ಷ ಸುರೇಶ್ ಮೈರಡ್ಕ ಪ್ರಸ್ತಾವನೆಗೈದರು. ಬಂಟ್ವಾಳ ತಾಲೂಕು ಅಮೆಚೂರ್ ಕಬ್ಬಡ್ಡಿ ಅಸೋಸಿಯೇಷನ್ ಕಾರ್ಯದರ್ಶಿ ಲತೀಪ್ ನೇರಳಕಟ್ಟೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರೀಯ ಕಬಡ್ಡಿ ತೀರ್ಪುಗಾರ ದೀಪಕ್ ಪೆರಾಜೆ ವಂದಿಸಿದರು.



