ಅಕ್ಟೋಬರ್ 26 ರಂದು ಮಂಚಿಯಲ್ಲಿ ಶ್ರೀ ಮಹಾಪವಮಾನ ಯಾಗ,ಶ್ರೀ ರಾಮತಾರಕ ಯಜ್ಞ,ಸಾಮೂಹಿಕಗೋಪೂಜೆ ಮತ್ತು ಧರ್ಮಜಾಗೃತಿ ಸಭೆ
ಬಂಟ್ವಾಳ: ವಿಶ್ವ ಹಿಂದೂ ಪರಿಷತ್,ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮಂಚಿ ಘಟಕ ,ಕಲ್ಲಡ್ಕ ಪ್ರಖಂಡ,ಶ್ರೀ ಮಹಾಪವಮಾನ ಯಾಗ ಸಮಿತಿ -2025, ಮಂಚಿ,ಬಂಟ್ವಾಳ ತಾಲೂಕು ಇದರ ಸಹಭಾಗಿತ್ವದಲ್ಲಿ ಶ್ರೀ ಮಹಾಪವಮಾನ ಯಾಗ,ಶ್ರೀ ರಾಮತಾರಕ ಯಜ್ಞ,ಸಾಮೂಹಿಕಗೋಪೂಜೆ ಮತ್ತು ಧರ್ಮಜಾಗೃತಿ ಸಭೆಯು ತಾಲೂಕಿನ ಮಂಚಿಗ್ರಾಮದ ಶ್ರೀ ಮೋಂತಿಮಾರು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅಕ್ಟೋಬರ್ 26 ರಂದು ನಡೆಯಲಿದೆ ಎಂದು ಯಾಗ ಸಮಿತಿಯ ಅಧ್ಯಕ್ಷ ವಿಕಾಸ್ ಕುಮಾರ್ ಪಿ.ಅವರು ತಿಳಿಸಿದ್ದಾರೆ.

ಶನಿವಾರ ಸಂಜೆ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಮಾಜಿ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಅವರ ಪೌರೋಹಿತ್ಯದಲ್ಲಿ ಸುಮಾರು 26 ಮಂದಿ ಪುರೋಹಿತರು ಯಾಗದಲ್ಲಿ ಪಾಲ್ಗೊಳ್ಳಲಿದ್ದು,ಬೆಳಿಗ್ಗೆ 7 ಗಂಟೆಗೆ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಅವರು ದೀಪೋಜ್ವನೆಯ ಮೂಲಕ ಪವಮಾನ ಪಾರಾಯಣ ಶ್ರೀರಾಮತಾರಕ ಯಜ್ಞ ಹಾಗೂ ಶ್ರೀ ಪವಮಾನ ಯಾಗಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ಬೆಳಿಗ್ಗೆ 11.30 ರ ಹೊತ್ತಿಗೆಯಾಗದ ಪೂರ್ಣಾಹುತಿ ನೆರವೇರಲಿದ್ದು,ಬಳಿಕ ನಡೆಯುವ ಧರ್ಮಸಭೆಯಲ್ಲಿ ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಆರ್ಶೀವಚನ ನೀಡಲಿದ್ದು, ಕಶೆಕೋಡಿ ಸೂರ್ಯ ನಾರಾಯಣ ಭಟ್ ಅವರು ಯಾಗಫಲದ ಸಂದೇಶ ನೀಡಲಿದ್ದಾರೆ.ರಾ.ಸ್ವ.ಸೇ.ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಿ.ಎಸ್.ಪ್ರಕಾಶ್ ಅವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ,ಸಂಸದ ಕ್ಯಾ.ಬ್ರಿಜೇಶ್ ಚೌಟ, ಮಾಜಿ ಸಂಸದ ಪ್ರತಾಪಸಿಂಹ,ವಿ.ಹಿಂ.ಪ.ಪ್ರಾಂತ ಕಾರ್ಯ ದರ್ಶಿ ಶರಣ್ ಪಂಪ್ ವೆಲ್,ಕೈರಂಗಳ ಅಮೃತಧಾರ ಗೋಶಾಲೆಯ ಅಧ್ಯಕ್ಷ ಟಿ.ಜಿ.ರಾಜಾರಾಮ್ ಭಟ್,ವಿ.ಹಿ.ಪ.ಬಂಟ್ವಾಳ ಪ್ರಖಂಡದ ಅಧ್ಯಕ್ಷ ಪ್ರಸಾದ್ ಕುಮಾರ್ ರೈ,ವಿ.ಹಿ.ಪ.ಕಲ್ಲಡ್ಕ ಪ್ರಖಂಡದ ಅಧ್ಯಕ್ಷ ಸಚಿನ್ ಮೆಲ್ಕಾರ್,ಬಜರಂಗದಳ ಕಲ್ಲಡ್ಕ ಪ್ರಖಂಡದ ಸಂಚಾಲಕ ಅಮಿತ್ ಕಲ್ಲಡ್ಕ ಅವರು ಅತಿಥಿಗಳಾಗಿ ಭಾಗವಹಿಸಲಿದ್ದು,ವಿ.ಹಿ.ಪ. ಮಂಚಿ ಘಟಕದ ಅಧ್ಯಕ್ಷ ರಮೇಶ್ ರಾವ್ ಪತ್ತುಮುಡಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಇನ್ನಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದು ವಿಕಾಸ್ ಪುತ್ತೂರು ವಿವರಿಸಿದರು.
ದ.ಕ.ಜಿಲ್ಲೆ ಧಾರ್ಮಿಕ ಚಟುವಟಿಕೆಗೆ ಹೆಸರು ವಾಸಿಯಾಗಿದ್ದು,ಮಂಚಿಯ ಹಿರಿಯರು,ಗ್ರಾಮಸ್ಥರು ಚರ್ಚಿಸಿ
ಲೋಕಕಲ್ಯಾಣಾರ್ಥ ಮತ್ತು ಸರ್ವ ದೋಷ ಪರಿಹಾರರ್ಥವಾಗಿ ಈ ಯಾಗ ನಡೆಸಲು ಉದ್ದೇಶಿಸಿದಂತೆ ಇದೇ ಮೊದಲಿಗೆ ಮಂಚಿಯಲ್ಲಿ ಈ ಮಹತ್ವದ ಪವಮಾನಯಾಗವನ್ನು ಆಯೋಜಿಸಲಾಗಿದೆ.ಈ ಕ್ಷೇತ್ರದಲ್ಲಿ ಹಿಂದೆಯು ಅಖಂಡ ಭಜನಾ ಕಾರ್ಯಕ್ತಮ ನಡೆದ ಹಿರಿಮೆ ಇದೆ.ಯಾಗದ ದಿನಂದು ಸುಮಾರು 3 ರಿಂದ 4 ಸಾವಿರ ಜನರು ಸೇರುವ ನಿರೀಕ್ಷೆ ಇದ್ದು,ಮಂಚಿ ಮಾತ್ರವಲ್ಲ ತಾಲೂಕಿನ ಸಮಸ್ತ ಹಿಂದೂ ಸಮಾಜದ ಬಂಧುಗಳು ಈ ಪಣ್ಯ ಕಾರ್ಯದಲ್ಲಿ ಭಾಗವಹಿಸುವಂತೆ ಅವರು ವಿನಂತಿಸಿದರು.
ಯಾಗ ಸಮಿತಿಯ ಗೌರವಾಧ್ಯಕ್ಷ ಪದ್ಮನಾಭ ಸಾಲಿಯಾನ್ ,ವಿ.ಹಿ.ಪ. ಮಂಚಿ ಘಟಕದ ಅಧ್ಯಕ್ಷ ರಮೇಶ್ ರಾವ್ ಪತ್ತುಮುಡಿ,ಮಾತೃ ಸಮಿತಿ ಸದಸ್ಯೆ ಯಶೋಧ ಬಿ. ಶೆಟ್ಟಿ,ಸಮಿತಿಯ ಪ್ರ.ಕಾರ್ಯದರ್ಶಿಗಳಾದ ಮಾಧವ ಅಂಚನ್,ಸಂತೋಷ್ ಗುಂಡಿಮಜಲು ,ಕೋಶಾಧಿಕಾರಿ ದೀಕ್ಷಿತ್ ಶೆಟ್ಟಿ ನಾಡಾಜೆ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು



