ಕೈಕಂಬ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಚೇರಿ(ಆಡಳಿತ) ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ದಕ್ಷಿಣ ವಲಯ, ಎಸ್ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆ ವಾಮಂಜೂರು ಇವರ ಸಹಭಾಗಿತ್ವದಲ್ಲಿ ಸೆ. ೧೯ರಂದು ಮಂಗಳಜ್ಯೋತಿ ಶಾಲಾ ಸಭಾಭವನದಲ್ಲಿ ೧೪ ಮತ್ತು ೧೭ರ ವಯೋಮಿತಿಯ ಬಾಲಕ-ಬಾಲಕಿಯರ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ-೨೦೨೫ ಉದ್ಘಾಟನಾ ಸಮಾರಂಭ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಮಂಗಳೂರು ದಕ್ಷಿಣ ವಲಯ ದೈಹಿಕ ಶಿಕ್ಷಾಣಾಧಿಕಾರಿ ಎಚ್. ಆರ್. ಈಶ್ವರ್ ಅವರು ಮಾತನಾಡಿ, ಯೋಗಾಸನ ಸ್ಪರ್ಧೆಯಲ್ಲಿ ಗೆಲ್ಲುವುದು ಅಥವಾ ಸೋಲುವುದಕ್ಕಿಂತ ಸ್ಪರ್ಧಿಸುವುದೇ ದೊಡ್ಡ ಬಹುಮಾನ. ಆರೋಗ್ಯ ಉತ್ತಮವಾಗಿದ್ದರೆ ಓದು ಉತ್ತಮವಾಗಿರುತ್ತದೆ. ಗುರಿ ಮುಟ್ಟುವ ಹಾದಿಯಲ್ಲಿ ಆರೋಗ್ಯ ಉತ್ತಮವಾಗಿರಿಸಲು ಯೋಗಕ್ಕೆ ಆದ್ಯತೆ ನೀಡಬೇಕು. ಆರೋಗ್ಯಕರ ದೇಹದಲ್ಲಿ ಆರೋಗ್ಯಕರ ಆಲೋಚನೆಗಳಿರುತ್ತದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಇದು ಅವಶ್ಯ ಎಂದರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯೋಗ ಶಿಕ್ಷಕ ಗೋಪಾಲಕೃಷ್ಣ ದೇಲಂಪಾಡಿ ಅವರು ಮಾತನಾಡಿ, ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆಗಳ ಮೂಲಕ ಯೋಗ ಶಿಕ್ಷಣ ಬೆಳೆಯಬೇಕು.ಪ್ರಧಾನಿ ಮೋದಿ ಅವರು ವಿಶ್ವ ಯೋಗ ದಿನ ಘೋಷಿಸಿದ ಬಳಿಕ ಜನರಲ್ಲಿ ಯೋಗಾಸಕ್ತಿ ಹೆಚ್ಚಾಗಿದೆ. ದೈಹಿಕ ಮತ್ತು ಮಾನಸಿಕ ಕಾಯಿಲೆಗಳ ನಿವಾರಕವಾಗಿ ಯೋಗ ಕೆಲಸ ಮಾಡುತ್ತದೆ. ಯೋಗದಿಂದ ಕಾಯಿಲೆಗಳ ವಾಸಿ ಎಂದು ಹೇಳಿದರು.

ಮಂಗಳೂರು ದಕ್ಷಿಣ ವಲಯ ದೈಹಿಕ ಶಿಕ್ಷಣ ಪರಿವೀಕ್ಷಕಿ ಲಿಲ್ಲಿ ಪಾಯಸ್, ಧರ್ಮಸ್ಥಳ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ನಿರ್ದೇಶಕ ಡಾ. ಐ. ಶಶಿಕಾಂತ್ ಜೈನ್, ಚೆನ್ನೆÊ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ನಿವೃತ್ತ ಅಧಿಕಾರಿ ಸುಂದರ್ ಕೆ. ಯೋಗದ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಯೋಗ ಮತ್ತು ದೈಹಿಕ ಶಿಕ್ಷಕರಾದ ರಾಧಾಕೃಷ್ಣ ಮತ್ತು ನಯನಾ ಕುಮಾರಿ ಅವರನ್ನು ಸನ್ಮಾನಿಸಲಾಯಿತು.
ಮಂಗಳಜ್ಯೋತಿ ಸಮಗ್ರ ಶಾಲೆಯ ಆಡಳಿತಾಧಿಕಾರಿ ನರೇಶ್ ಮಲ್ಲಿಗೆಮಾಡು ಸ್ವಾಗತಿಸಿದರು. ವಿದ್ಯಾರ್ಥಿನಿ ವೈಷ್ಣವಿ ಪ್ರಾರ್ಥಿಸಿದರು. ಮೂಡಬಿದ್ರೆ ಆಳ್ವಾಸ್ ಶಾಲೆಯ ವಿದ್ಯಾರ್ಥಿ ಶಶಿಕುಮಾರ್ ಯೋಗ ಪ್ರದರ್ಶಿಸಿದರು. ಶಾಲಾ ಆಡಳಿತ ಮಂಡಳಿ ಸದಸ್ಯ ಉದಯ ಕುಮಾರ್ ಕುಡುಪು, ಎಸ್ಡಿಎಂ ಐಟಿಐ ಪ್ರಾಂಶುಪಾಲ ನರೇಂದ್ರ, ಪ್ರೌಢಶಾಲಾ ಮುಖ್ಯ ಶಿಕ್ಷಕ ರಮೇಶ್ ಆಚಾರ್ಯ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ಹರಿಣಾಕ್ಷಿ ಮತ್ತು ವಿಠಲ್ ವಾಗ್ಮೋರೆ, ಗುರುಪುರ ಹೋಬಳಿ ನೋಡಲ್ ಅಧಿಕಾರಿ ಪ್ರಮೋದ್ ಕುಮಾರ್, ದೈಹಿಕ ಮತ್ತು ಯೋಗ ಶಿಕ್ಷಕರು, ತರಬೇತುದಾರು, ತೀರ್ಪುಗಾರರು, ಜಿಲ್ಲೆಯ ೭ ತಾಲೂಕುಗಳ ಶಾಲೆಗಳ ಯೋಗ ವಿದ್ಯಾರ್ಥಿಗಳು, ಶಿಕ್ಷಕ ವರ್ಗ ಪೋಷಕರು ಇದ್ದರು. ಶಾಲಾ ಶಿಕ್ಷಕಿ ಪ್ರಸನ್ನಾ ವೈ., ನಿರೂಪಿಸಿದರು. ತಾಲೂಕು ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಶೇಖರ ಕಡ್ತಲ ಅವರು ವಂದಿಸಿದರು
