ಗುರುಪುರ : ಕೆನರಾ ಬ್ಯಾಂಕ್ ಗುರುಪುರ ಹಾಗೂ ಗುರುಪುರ ಗ್ರಾಮ ಪಂಚಾಯತ್ ವತಿಯಿಂದ ಸೆ. ೧೧ರಂದು ಗುರುಪುರ ಪಂಚಾಯತ್ ಸಭಾಭವನದಲ್ಲಿ `ಆರ್ಥಿಕ ಸೇರ್ಪಡೆ, ಜನ ಸುರಕ್ಷಾ ಯೋಜನೆಗಳ ಗ್ರಾಮ ಮಟ್ಟದ ಸಂಪೂರ್ಣತಾ ಅಭಿಯಾನ’ ನಡೆಯಿತು.

ಆರ್‌ಬಿಐನ ಬೆಂಗಳೂರು ಪ್ರಾದೇಶಿಕ ನಿರ್ದೇಶಕಿ ಸೋನಾಲಿ ಸೇನ್ ಗುಪ್ತಾ ಅವರು ದೀಪ ಬೆಳಗಿಸಿ ಮಾತನಾಡಿ, ಬ್ಯಾಂಕಿಂಗ್ ಸೇವೆಗಳ ಬಗ್ಗೆ ಪ್ರತಿಯೊಬ್ಬರಲ್ಲೂ ಮಾಹಿತಿ ಮತ್ತು ಅರಿವು ಇರಬೇಕು. ಬ್ಯಾಂಕಿಂಗ್ ಸೇವೆಗಳು ಗ್ರಾಮೀಣ ಮಟ್ಟ ತಲುಪಬೇಕೆಂಬ ಉದ್ದೇಶದಿಂದ ಪ್ರತಿ ಗ್ರಾಮಗಳಲ್ಲಿ ಈ ಅಭಿಯಾನ ನಡೆಯುತ್ತಿದೆ. ಬ್ಯಾಂಕ್‌ನೊಂದಿಗೆ ನಿರಂತರ ಸಂಪರ್ಕ ಹೊಂದಿಕೊಂಡಿದ್ದರೆ ಮಾತ್ರ ಪ್ರತಿಯೊಬ್ಬರಿಗೂ ಸರ್ಕಾರಗಳ ಸಾಮಾಜಿಕಾ ಭದ್ರತಾ ಯೋಜನೆಗಳ ಬಗ್ಗೆ ತಿಳಿದುಕೊಂಡು, ಅವುಗಳಲ್ಲಿ ತೊಡಗಿಸಿಕೊಳ್ಳಲು(ಫಲಾನುಭವಿಗಳಾಗಲು) ಸಾಧ್ಯವಾಗುತ್ತದೆ ಎಂದರು.

ಮುಂದಿನ ಕೆಲವೇ ವರ್ಷಗಳಲ್ಲಿ ದೇಶದ ಪ್ರತಿಯೊಬ್ಬರೂ ಬಲಾಢ್ಯರಾಗಬೇಕು ಎಂದಿರುವ ಕೇಂದ್ರ ಸರ್ಕಾರ, ರಾಷ್ಟೀಕೃತ ಬ್ಯಾಂಕ್‌ಗಳ ಮೂಲಕ ಜನರಿಗೆ ಲಾಭ ಕೊಡುವಂತಹ ಹಲವು ಜನಸ್ನೇಹಿ ಯೋಜನೆ ರೂಪಿಸಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಬ್ಯಾಂಕ್ ಸೇವೆ ಕೈಗೆಟಕುವಂತಾಗಬೇಕು ಎಂಬುದು ಈ ಅಭಿಯಾನದ ಉದ್ದೇಶ ಎಂದು ಹೇಳಿದರು.

ಎಚ್‌ಒ ಸಿಪಿಎಚ್ ಕೆನರಾ ಬ್ಯಾಂಕ್ ಮಣಿಪಾಲದ ಮಹಾ ಪ್ರಬಂಧಕ ಸುಧಾಕರ ಕೊಟ್ಟಾರಿ ಮಾತನಾಡಿ, ರಾಷ್ಟ್ರಿ ಕೃತ ಬ್ಯಾಂಕ್‌ಗಳಲ್ಲಿ ಈಗ ಸುಲಭೀಕರಿಸಲಾದ ಮಾನದಂಡದಡಿ ಸಾಲಗಳು ಲಭ್ಯವಿವೆ. ಪ್ರತಿಯೊಬ್ಬರೂ ಎಟಿಎಂ ಬಳಸಿಕೊಳ್ಳಿ. ಪ್ರತಿ ೧೦ ವರ್ಷಕ್ಕೊಮ್ಮೆ ಪಿಎಂ ಜನ್‌ಧನ್ ಯೋಜನೆಯ ಖಾತೆ ನವೀಕರಿಸಬೇಕು(ಕೆವೈಸಿ). ಈ ಮೂಲಕ ಕೇಂದ್ರ/ರಾಜ್ಯ ಸರ್ಕಾರದ ಫಲಾನುಭವಿಗಳು ಪ್ರಯೋಜನ ಪಡೆದುಕೊಳ್ಳಬೇಕು. ಡಿಜಿಟಲ್ ಫ್ರಾಡ್‌ಗಳು, ಎಸ್ಸೆಮ್ಸೆಸ್‌ಗಳು ಹಾಗೂ ಲಿಂಕ್‌ಗಳ ಬಗ್ಗೆ ತುರ್ತಾಗಿ ಸ್ಪಂದಿಸಬೇಡಿ. ಯಾವುದೇ ಗೊಂದಲಗಳಿದ್ದಲ್ಲಿ ಹತ್ತಿರದ ಬ್ಯಾಂಕ್ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ.
ಕೆನರಾ ಬ್ಯಾಂಕ್ ಮಂಗಳೂರು ವೃತ್ತ ಕಚೇರಿಯ ಮಹಾ ಪ್ರಬಂಧಕ ಮಂಜುನಾಥ ಬಿ., ಅವರು ಪ್ರಸ್ತಾವಿಕ ಮಾಹಿತಿ ಮಾತನಾಡಿದರು. ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸಫರಾ ಮದಕ ಮತ್ತು ಪಿಡಿಒ ಪಂಕಜಾ ಶೆಟ್ಟಿ ಮಾತನಾಡಿದರು.
ಈ ಸಂದರ್ಭದಲ್ಲಿ ೨೦೨೫ರ ಎಪ್ರಿಲ್‌ನಲ್ಲಿ ಬೈಕ್ ಅಪಘಾತದಲ್ಲಿ ಮರಣ ಹೊಂದಿದ ಕೊಂಪದವು ನೀರುಡೆಯ ನವೀನ್ ಅಲಿಸ್ಟರ್ ಅವರ ಪಿಎಂ ಜನ್‌ಧನ್ ಯೋಜನೆಯ ೨ ಲಕ್ಷ ರೂ ಪರಿಹಾರ ಚೆಕ್‌ನ್ನು ಮೃತರ ತಾಯಿ ಮದ್ದಲಿನಾ ಡಿ’ಸೋಜ ಸ್ವೀಕರಿಸಿದರು. ಜೊತೆಗೆ ಸಾಮಾಜಿಕಾ ಭದ್ರತಾ ಯೋಜನೆಗಳ ಇತರ ಕೆಲವು ಫಲಾನುಭವಿಗಳಿಗೆ ಬ್ಯಾಂಕ್ ಅಧಿಕಾರಿಗಳು ಚೆಕ್ ವಿತರಿಸಿದರು.
