ಬಂಟ್ವಾಳ: ಕರಾವಳಿಯ ರಾಜ ಕಲೆಯೆಂದು ವ್ಯಾಖ್ಯಾನಿಸಲ್ಪಟ್ಟ ಗಂಡು ಕಲೆ ಯಕ್ಷಗಾನ ಪ್ರಸ್ತುತ ದೇಶ ಮಾತ್ರವಲ್ಲ ಅಂತರಾಷ್ಟ್ರೀಯ ವ್ಯಾಪ್ತಿಯಲ್ಲಿ ಆವರಿಸಿದೆ.ಅಂತಹ ಯಕ್ಷಗಾನ ಪ್ರದರ್ಶನಕ್ಕೆ ಸಮಯ ನಿರ್ಬಧಿಸುವ ಮೂಲಕ ಬ್ರಹ್ಮಾಸ್ತ್ರ ಪ್ರಯೋಗಿಸಿರುವುದು ಯಕ್ಷಕಲಾವಿದರು ಮತ್ತು ಯಕ್ಷಪ್ರೇಮಿಗಳ ಪಾಲಿಗೆ ಬರಸಿಡಿಲು ಬಡಿದಂತಾಗಿದೆ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಅವರು ಹೇಳಿದ್ದಾರೆ.

ಭೌಗೋಳಿಕವಾಗಿ ಕರಾವಳಿ ಜಿಲ್ಲೆ ವಿಭಿನ್ನವಾಗಿ ಕಾಣಿಸಿಕೊಂಡಿರುವುದು ಸರ್ವ ವೇದ್ಯ, ಅವಿಭಜಿತ ದ.ಕ. ಜಿಲ್ಲೆ, ನೆರೆಯ ಕಾಸರಗೋಡು, ಉ.ಕ. ಭಾಗದ ಗಂಡುಕಲೆ ಯಕ್ಷಗಾನ ಎಂದು ಹೇಳಿಕೊಳ್ಳಲು ಹೆಮ್ಮೆ ಯಾಗುತ್ತಿದೆ. ಆದರೆ ದುರ್ದೈವಶಾತ್ ಈ ಕಲೆಯನ್ನು ನೋಡಿ ಆಕರ್ಷಿತರಾಗಿ ನನ್ನಂತೆ ಸಾವಿರಾರು ಮಂದಿ ಯಕ್ಷಗಾನ ಕಲಾ ಕ್ಷೇತ್ರವನ್ನು ಆಯ್ಕೆ ಮಾಡಿ ಇದೀಗ ಅತಂತ್ರರಾಗಿ ನಡುನೀರಿನಲ್ಲಿ ಕೈಬಿಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೂರ್ಯಾಸ್ಥದಿಂದ ಸೂರ್ಯೋದಯದವರೆಗೆ ಪ್ರದರ್ಶಿಸಲ್ಪಡುತ್ತಿದ್ದ ಯಕ್ಷಗಾನ ಪ್ರದರ್ಶನಕ್ಕೆ ಜಿಲ್ಲಾಡಳಿತ,ಪೋಲಿಸ್ ಇಲಾಖೆ ರಾತ್ರಿ 10 ಗಂಟೆಯಿಂದ ಧ್ವನಿವರ್ಧಕ ಬಳಕೆ ಮಾಡಬಾರದೆಂದು ತಾಕೀತು ಮಾಡಿಸಮಯ ನಿರ್ಬಂಧಿಸುವ ಮೂಲಕ ಬ್ರಹ್ಮಾಸ್ತ್ರ ಪ್ರಯೋಗ ಮಾಡಿರುವುದು ಯಕ್ಷ ಕಲಾವಿದರು ಮಾತ್ರವಲ್ಲ ಇದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುವ ಕಾರ್ಮಿಕರು ಹಾಗೂ ಯಕ್ಷಪ್ರೇಮಿಗಳಿಗೆ ಬರಸಿಡಿಲು ಬಡಿದಂತಾಗಿದೆ ಎಂದು ಅಶೋಕ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಗಲಿಡಿ ದುಡಿದ ಕಲಾಸಕ್ತರು ರಾತ್ರಿ ಬಿಡುವು ಇರುವುದರಿಂದ ಹಾಗೂ ನಿಶ್ಯಬ್ದ ವಾತಾವರಣದಲ್ಲಿ ಯಕ್ಷಗಾನ ಕಲೆಯನ್ನು ಪೂರ್ಣವಾಗಿ ಆಸ್ವಾದಿಸುತ್ತಾರೆ. ಇಂತಹ ಶ್ರೀಮಂತ ಕಲೆಯಾದ ಯಕ್ಷಗಾನ ಪ್ರದರ್ಶನಕ್ಕೆ ಪೊಲೀಸ್ ಇಲಾಖೆ ತಡೆಯೊಡ್ಡುತ್ತಿರುವುದು ದುರಂತವೇ ಸರಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾತ್ರಿ ವೇಳೆ ಧ್ವನಿವರ್ಧಕ ಬಳಕೆ ಮಾಡುವುದರ ಬಗ್ಗೆ ಆದೇಶ ನೀಡಿದ ಸುಪ್ರೀಂ ಕೋರ್ಟಿಗೆ ರಾಜ್ಯ ಸರಕಾರವು ಮರುಮನವಿ ಮಾಡಬೇಕು ಆ ಮೂಲಕ ನಗರ ಸಹಿತ ಗ್ರಾಮಾಂತರ ಪ್ರದೇಶದಲ್ಲಿ ರಾತ್ರಿ 12 ರ ತನಕ ಧ್ವನಿವಧ೮ಕ ಬಳಕೆ ಮಾಡಲು ಇರುವ ತೊಡಕನ್ನು ನಿವಾರಿಸಬೇಕು. ಕಲಾವಿದರ ಬದುಕು ಬೀದಿ ಪಾಲಾಗದಂತೆ ಜನ ಪ್ರತಿನಿಧಿಗಳು ಇಚ್ಛಾ ಶಕ್ತಿ ಪ್ರಕಟಿಸಬೇಕೆಂದು ಅಶೋಕ್ ಶೆಟ್ಟಿ ಅವರು ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ.
