ಮಾನವೀಯತೆಗಿಂತ ಮಿಗಿಲಾದ ಧರ್ಮ ಮತ್ತೊಂದಿಲ್ಲ: ಎನ್. ಪ್ರಕಾಶ್ ಕಾರಂತ್
ಬಂಟ್ವಾಳ: ಮಾನವೀಯತೆಗಿಂತ ಮಿಗಿಲಾದ ಧರ್ಮ ಮತ್ತೊಂದಿಲ್ಲ. ಮಾನವೀಯತೆಗೆ ಪೂರಕವಾದ ಕಾರ್ಯವನ್ನು ಸೇವಾಂಜಲಿ ಸಂಸ್ಥೆ ನಡೆಸಿಕೊಂಡು ಬರುತ್ತಿದೆ ಎಂದು ರೋಟರಿ ಕ್ಲಬ್ ಪೂರ್ವ ಜಿಲ್ಲಾ ಗವರ್ನರ್ ಎನ್. ಪ್ರಕಾಶ್ ಕಾರಂತ್ ತಿಳಿಸಿದರು.

ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ನಡೆದ 132ನೇ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಕ್ತಕ್ಕೆ ರಕ್ತವೇ ಪರ್ಯಯವಾಗಿದ್ದು ರಕ್ತದಾನ ಅತ್ಯಂತ ಪುಣ್ಯದ ಕಾರ್ಯವಾಗಿದೆ. ನಾವು ದಾನವಾಗಿ ನೀಡುವ 1 ಯುನಿಟ್ ರಕ್ತ ನಾಲ್ಕು ಮಂದಿಯ ಪ್ರಾಣ ಉಳಿಸುತ್ತದೆ ಎಂದರು.

ಕೃಷ್ಣಕುಮಾರ್ ಪೂಂಜ ಅವರ ನೇತೃತ್ವದಲ್ಲಿ ಸೇವಾಂಜಲಿ ಸಂಸ್ಥೆ ಹಮ್ಮಿಕೊಳ್ಳುವ ರಕ್ತದಾನ ಶಿಬಿರದಲ್ಲಿ ಸಂಗ್ರಹಣೆಯ ಉದ್ದೇಶವಿಲ್ಲ, ಬದಲಿಗೆ ವಿವಿಧ ಆಸ್ಪತ್ರೆಗಳ ರಕ್ತನಿಧಿಗೆ ಅವಶ್ಯಕತೆಗನುಗುಣವಾಗಿ ರಕ್ತದಾನ ಶಿಬಿರ ನಡೆಸಲಾಗುತ್ತಿದೆ. ಇದು ಜನರಿಗೆ ಅರಿವು ಮೂಡಿಸುವುದರ ಜೊತೆಗೆ ಇತರ ಸಂಘ ಸಂಸ್ಥೆಗಳಿಗೂ ಪ್ರೇರಣೆ ನೀಡುವ ಕಾರ್ಯ ಎಂದು ತಿಳಿಸಿದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ. ಕೃಷ್ಣಕುಮಾರ್ ಪೂಂಜ ಪ್ರಾಸ್ತಾವಿಕ ಮಾತನಾಡಿ ದಾನಿಗಳ ಸಹಕಾರದಿಂದ ನಿರಂತರವಾಗಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲು ಸಾಧ್ಯವಾಗಿದೆ ಎಂದು ತಿಳಿಸಿದರು. ವೇದಿಕೆಯಲ್ಲಿ ಕೆ.ಎಂ.ಸಿ ಆಸ್ಪತ್ರೆ ಬ್ಲಡ್ ಬ್ಯಾಂಕಿನ ಡಾ. ಹರ್ಷವರ್ಧನ್, ಫರಂಗಿಪೇಟೆ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಆಳ್ವ, ಫರಂಗಿಪೇಟೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪುಂಚಮೆ ಉಪಸ್ಥಿತರಿದ್ದರು. ಟ್ರಸ್ಟಿ ಕೊಡ್ಮಾಣ್ ದೇವದಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಶೇಖರ ಪೂಜಾರಿ ಕಲ್ಲತಡಮೆ, ಶಿವರಾಜ್ ಸುಜೀರು, ಪ್ರಶಾಂತ್ ತುಂಬೆ, ಅರ್ಜುನ್ ಪೂಂಜ, ವಿಕ್ರಮ್ ಫರಂಗಿಪೇಟೆ, ಸಾರಮ್ಮ, ಪ್ರಸಾದ್ ಕೇಸನಮೊಗರು, ನಾರಾಯಣ ಮೇರಮಜಲು, ಗಾಯತ್ರಿ ಪ್ರಸಾದ್, ಮೋಹನ್ ಬೆಂಜನಪದವು ಮತ್ತಿತರರು ಭಾಗವಹಿಸಿದ್ದರು. ಶಿಬಿರದಲ್ಲಿ ಸುಮಾರು 50 ಮಂದಿ ರಕ್ತದಾನ ಮಾಡಿದರು.



