ಬಂಟ್ವಾಳ: ಸಾರ್ವಜನಿಕ ಶ್ರೀ ಗಣೇಶೋತಗಸವ ಆಚರಣಾ ಸಮಿತಿ ಜಕ್ರಿಬೆಟ್ಟು ಇದರ ವತಿಯಿಂದ ಬಂಟ್ವಾಳದ ಜಕ್ರಿಬೆಟ್ಟುವಿನಲ್ಲಿ ನಡೆಯುವ 22 ನೇ ವರ್ಷದ ಶ್ರೀಗಣೇಶೋತ್ಸವ ಆ.27 ರಿಂದ 31 ರವರೆಗೆ ಐದುದಿನಗಳ ಕಾಲ ವಿವಿಧ ವೈಧಿಕ,ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ ಎಂದು ಆಚರಣಾ ಸಮಿತಿಯ ಗೌರವಾಧ್ಯಕ್ಷರು,ಮಾಜಿ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.

ಸೋಮವಾರ ಬಂಟ್ವಾಳದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು,ಆ.27 ರಂದು ಬೆಳಿಗ್ಗೆ ಶ್ರೀಗಣೇಶನ ವಿಗ್ರಹ ಪ್ರತಿಷ್ಠಾಪನೆಯಾದ ಬಳಿಕ ವೇ.ಮೂ.ಸುದರ್ಶನ್ ಬಲ್ಲಾಳ್ ಅವರ ಪೌರೋಹಿತ್ವದಲ್ಲಿ ವಿವಿಧ ವೈಧಿಕ,ವಿಧಿವಿಧಾನಗಳು ನಡೆಯಲಿದೆ.ಮಧ್ಯಾಹ್ನ ಉಗ್ರಾಣ ಮುಹೂರ್ತದ ಬಳಿಕ ಗಣೇಶೋತ್ಸವದ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುತ್ತದೆ ಎಂದರು.
ಗಣೇಶೋತ್ಸವದ ಪ್ರತಿದಿನ ಮಧ್ಯಾಹ್ನ ಮಹಾಪೂಜೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಿರಂತರವಾಗಿ ನಡೆಯಲಿದೆ.ಈ ಬಾರಿ ಮಧ್ಯಾಹ್ನದ ಹೊತ್ತಿಗೆ ವಿವಿಧ ಮಠಾಧೀಶರು,ಧಾರ್ಮಿಕ ಮುಖಂಡರು,ಜನಪ್ರತಿನಿಧಿಗಳು,ಗಣ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆಯನ್ನು ಆಯೋಜಿಸಲಾಗಿದೆ. ಪ್ರತಿದಿನ ಸಂಜೆ ವಿವಿಧ ಭಜನಾತಂಡಗಳಿಂದ ಭಜನಾ ಸಂಕೀರ್ತನೆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದ ಅವರು ಆ. 31 ರಂದು ಸಂಜೆ ವಿಗ್ರಹದ ವೈಭವಪೂರ್ಣ ಶೋಭಾಯಾತ್ರೆ ಬಂಟ್ವಾಳ ನಗರದಲ್ಲಿ ನಡೆಯಲಿದೆ ಎಂದರು.
ಎಲ್ಲಾ ಜಾತಿ,ಧರ್ಮದ ಜನರು ಗಣೇಶೋತ್ಸವದಲ್ಲಿಪಾಲ್ಗೊಳ್ಳುವ ಮೂಲಕ ಜಕ್ರಿಬೆಟ್ಟು ಗಣೇಶೋತ್ಸವ ಸೌಹಾರ್ಧತೆ,ಭಾವೈಕ್ಯತೆಯ ಸಮ್ಮೇಳನವಾಗಿ ರೂಪುಗೊಂಡು “ಬಂಟ್ವಾಳ ಹಬ್ಬ” ವಾಗಿ ಮಾದರಿ ಮತ್ತು ಅಭೂತಪೂರ್ವವಾಗಿ ಆಚರಿಸಲ್ಪಟ್ಟು ಜನಮಾನಸದಲ್ಲಿ ನೆಲೆಯಾಗಿದೆ ಎಂದರು.
ಈ ಬಾರಿ ಜಿಲ್ಲಾಡಳಿತದ ಸುತ್ತೋಲೆಯಂತೆ ಕಾನೂನು ಚೌಕಟ್ಟಿನಲ್ಲಿ ಧಾರ್ಮಿಕ ಆಚರಣೆಗೂ ಧಕ್ಕೆಯಾಗದಂತೆ ನಿಗದಿತ ಸಮಯದಲ್ಲಿ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು ಜಿಲ್ಲಾಡಳಿತದಿಂದ ಧಾರ್ಮಿಕ ಆಚರಣೆಗೆ ಯಾವುದೇ ಅಡಚಣೆಯಾಗದು ಎಂಬ ವಿಶ್ವಾಸವಿದೆ ಎಂದು ರಮಾನಾಥ ರೈ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಆಚರಣಾ ಸಮಿತಿ ಅಧ್ಯಕ್ಷ ಪದ್ಮಶೇಖರ ಜೈನ್ ,ಪದಾಧಿಕಾರಿಗಳಾದ ರಾಜೀವ ಶೆಟ್ಟಿ ಎಡ್ತೂರು,ಚಂದ್ರಪ್ರಕಾಶ್ ಶೆಟ್ಟಿ,ಬೇಬಿಕುಂದರ್,ಸಂಪತ್ ಕುಮಾರ್ ಶೆಟ್ಟಿ,ಮಹಾಬಲಬಂಗೇರ,ಸುದೀಪ್ ಕುಮಾರ್ ಶೆಟ್ಟಿ,ಪಿ.ಪ್ರವೀಣ್ ಕಿಣಿ,ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಆರ್.ಅಂಚನ್,ಜಯಂತಿ ಪೂಜಾರಿ,ದೇವಪ್ಪಕುಲಾಲ್,ಅಶೋಕ್ ಬನಂಡಾರಿಬೆಟ್ಟು,ವೆಂಕಪ್ಪಪೂಜಾರಿ ಬಂಟ್ವಾಳ ಮೊದಲಾದವರಿದ್ದರು.
