ಗಂಜಿಮಠ ಗ್ರಾಪಂನಿಂದ ಸ್ವಾತಂತ್ರ‍್ಯೋತ್ಸವ ಸ್ಪರ್ಧೆ-ಸನ್ಮಾನ
ಕೈಕಂಬ: ಸ್ವಾತಂತ್ರ‍್ಯೋತ್ಸವ ದಿನಾಚರಣೆ ಪ್ರಯುಕ್ತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಗಂಜಿಮಠ ಗ್ರಾಮ ಪಂಚಾಯತ್ ಜಂಟಿ ಆಶ್ರಯದಲ್ಲಿ ಗಂಜಿಮಾ ವ್ಯಾಪ್ತಿಯ ಅಂಗನವಾಡಿಯಿಂದ ಪ್ರೌಢಶಾಲಾ ಎಸ್ಸೆಸ್ಸೆಲ್ಸಿ ಶಾಲಾ ವಿದ್ಯಾರ್ಥಿಗಳಿಗಾಗಿ ಅ. ೧೩ರಂದು ಗಂಜಿಮಠದ ಖಾಸಗಿ ಸಭಾಗೃಹದಲ್ಲಿ ವಿವಿಧ ಆಟೋಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ಹಾಗೂ ಸನ್ಮಾನ ಸಮಾರಂಭ ನಡೆಯಿತು.

ಶಿಕ್ಷಕಿ ಶಾಲಿನಿ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕುಮಾರ್ ಹೊಳ್ಳ ಮಾತನಾಡಿ, ಸ್ವಾತಂತ್ರ‍್ಯೋತ್ಸವದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವಂತಹ ಕಾರ್ಯಕ್ರಮಗಳ ಅಗತ್ಯವಿದೆ. ಪ್ರಾಥಮಿಕ ಶಾಲಾ ದಿನಗಳಿಂದಲೇ ಮಕ್ಕಳಲ್ಲಿ ಸ್ವಚ್ಛತೆ ಮತ್ತು ಪರಿಸರದ ಮೇಲಿನ ಕಾಳಜಿ ಬೆಳೆಯಬೇಕು. ಇಂತಹ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಬೇಕು ಎಂದು ಆಶಿಸಿದರು.

ಅಧ್ಯಕ್ಷತೆ ವಹಿಸಿದ್ದ ಗಂಜಿಮಠ ಗ್ರಾಪಂ ಅಧ್ಯಕ್ಷೆ ಮಾಲತಿ ಅವರು ಮಾತನಾಡಿ, ಇದು ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮ. ಮಕ್ಕಳ ಪ್ರತಿಭೆ ಅನಾವರಣಗೊಳ್ಳಲು ಇದು ಸೂಕ್ತ ವೇದಿಕೆ. ಹಾಗಾಗಿ ಮಕ್ಕಳೆಲ್ಲರೂ ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ. ಸೋಲು-ಗೆಲುವಿನ ಬಗ್ಗೆ ಚಿಂತಿಸಬೇಡಿ ಎಂದರು.
ನಿವೃತ್ತ ಶಿಕ್ಷಕಿ ಸುಶೀಲಾ ಮಳಲಿ ಹಾಗೂ ಗುರುಪುರ ಹೋಬಳಿಯ ನಿವೃತ್ತ ಗ್ರಾಮ ಸಹಾಯಕ ಶಿವರಾಮ ಕೊಟ್ಟಾರಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಗಂಜಿಮಠ ಗ್ರಾಪಂ ಪಿಡಿಒ ಪ್ರಕಾಶ್ ಅವರು ಸ್ವಾಗತಿಸಿದರು.
ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಬೂಬ ಪೂಜಾರಿ, ಪಂಚಾಯತ್ ಉಪಾಧ್ಯಕ್ಷೆ ಸಾರಮ್ಮ, ಸದಸ್ಯರಾದ ಸುನಿಲ್ ಜಿ, ಪ್ರವೀಣ್ ಶೆಟ್ಟಿ, ಸುನಿಲ್ ಫೆರ್ನಾಂಡಿಸ್, ಜಯಾನಂದ ಕುಲಾಲ್, ವಿನಯ್ ರೈ, ಅನಿತಾ ಡಿ’ಸೋಜ, ತಮ್ಮಯ್ಯ ಪೂಜಾರಿ, ಸಾದಿಕ್, ಅಬ್ದುಲ್ ಹಮೀದ್, ರೇಖಾ, ಸೌಮ್ಯಾ, ರೋಹಿತಾಕ್ಷಿ, ಫರ್ಜಾನಾ, ವಿಜಯ್, ಪಂಚಾಯತ್‌ನ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಮೊಹಮ್ಮದ್ ಶರೀಫ್, ಉದ್ಯಮಿಗಳಾದ ಚಂದ್ರಹಾಸ ಶೆಟ್ಟಿ ನಾರಳ, ಅಬ್ದುಲ್ ಖಾದರ್, ಶಿವಾನಂದ ಬಂಗೇರ, ಅಶಿತ್ ಲೋಬೊ, ಗ್ರಾಮಾಡಳಿತಾಧಿಕಾರಿ ಮೆಹಬೂಬ್, ಶಿಕ್ಷಕಿ ವಾರಿಜಾ, ಶಾಲಾ ಶಿಕ್ಷಕಿಯರು, ಪಂಚಾಯತ್ ಸಿಬ್ಬಂದಿ ವರ್ಗ, ೧೨ ಶಾಲೆಯ ಮಕ್ಕಳು ಸುಮಾರು ೩೫೦ ಮಕ್ಕಳು ಪಾಲ್ಗೊಂಡಿದ್ದರು. ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ಪತ್ರ ನೀಡಲಾಯಿತು. ಉಮೇಶ್ ಮಳಲಿ ಕಾರ್ಯಕ್ರಮ ನಿರೂಪಿಸಿದರು.



