ಕೈಕಂಬ : ಧಾರಾಕಾರ ಮಳಗೆ ಇಲ್ಲಿನ ಅಲೈಗುಡ್ಡೆಯ ಅಹಲ್ಯಾವನದಲ್ಲಿ ಸೋಮವಾರ ಮೋಹಿನಿ ಪೂಜಾರಿ ಎಂಬವರ ಮನೆಯ ಪಕ್ಕದ ತಡೆಗೋಡೆ ಕುಸಿದು ಬಿದ್ದು, ಸಂಪೂರ್ಣ ಬಿರುಕು ಬಿಟ್ಟಿರುವ ಮನೆ ಕುಸಿಯುವ ಹಂತ ತಲುಪಿದೆ.


ತಡೆಗೋಡೆ ಕುಸಿದ ಸಂದರ್ಭದಲ್ಲಿ ಮನೆಯಲ್ಲಿ ಮೋಹಿನಿ ಸಹಿತ ಮೂವರು ಮಹಿಳೆಯರು ಹಾಗೂ ಇಬ್ಬರು ಮಕ್ಕಳಿದ್ದರು. ಮನೆಯ ಅಡುಗೆ ಕೋಣೆ ಒಂದು ಬದಿಗೆ ವಾಲಿದ್ದರೆ, ನೆಲ ಮತ್ತು ಗೋಡೆ ಬಿರುಕು ಬಿಟ್ಟಿದೆ. ಮನೆ ಅಪಾಯದಲ್ಲಿದ್ದು, ಯಾವುದೇ ಸಂದರ್ಭದಲ್ಲಿ ಕುಸಿದು ಬೀಳುವ ಭೀತಿ ಸಾಧ್ಯತೆ ಇದೆ.
ಮೋಹಿನಿ ಪೂಜಾರಿ ಕುಟುಂಬಕ್ಕೆ ಸದ್ಯ ಹತ್ತಿರದ ಬಿಲ್ಲವ ಸಮಾಜ ಸೇವಾ ಸಂಘದ ಸಭಾಗೃಹದಲ್ಲಿ ಉಳಿದುಕೊಳ್ಳಲು ತಾತ್ಕಾಲಿಕ ವ್ಯವಸ್ಥೆಯನ್ನು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಮಹಾಬಲ ಅಮೀನ್ ಮತ್ತು ಬಿಲ್ಲವ ಸಂಘದ ಸದಸ್ಯರು ಮಾಡಿಕೊಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಗುರುಪುರ ಗ್ರಾಮ ಪಂಚಾಯತ್‌ನ ಸದಸ್ಯರು ಹಾಗೂ ಗ್ರಾಮಸ್ಥರು ಅಗಮಿಸಿ ಸಹಕರಿಸಿದ್ದಾರೆ. ಪಂಚಾಯತ್ ಸದಸ್ಯ ರಾಜೇಶ್ ಸುವರ್ಣ ಅವರ ಸಂಭಂದಿಕರ ಮನೆಗೆ ಬಾಡಿಗೆಗೆ ಗುರುವಾರ ಕುಟುಂಬ ಸ್ಥಳಾಂತರಗೊಳ್ಳಲಿದೆ.
ಘಟನಾ ಸ್ಥಳಕ್ಕೆ ಗುರುಪುರ ಗ್ರಾಮ ಪಂಚಾಯತ್‌ನ ವಾರ್ಡ್ ಸದಸ್ಯ ಜಿ. ಎಂ. ಉದಯ ಭಟ್ ಹಾಗೂ ಮಹಾಬಲ ಅಮೀನ್ ಅವರು ತಡೆಗೋಡೆ ಜರಿದ ಜಾಗಕ್ಕೆ ಹಾಸಲು ಪ್ಲಾಸ್ಟಿಕ್ ಹೊದಿಕೆ ಒದಗಿಸಿಕೊಟ್ಟಿದ್ದಾರೆ. ಮನೆಯವರು ಪರಿಹಾರ ಕೇಳಿ ಗ್ರಾಮ ಕಾರಣಿಕೆ(ವಿಎ) ಶಿಲ್ಪಾ ಅವರ ಮೂಲಕ ಮಂಗಳೂರು ತಹಶೀಲ್ದಾರ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
