ಶ್ರೀ ಕ್ಷೆ.ಧ.ಗ್ರಾ.ಯೋಜನೆಯಿಂದ ಬಂಟ್ವಾಳ ತಾಲೂಕು ಮಟ್ಟದ ‘ಯಂತ್ರಶ್ರೀ’ ಕಾರ್ಯಕ್ರಮಕ್ಕೆ ಚಾಲನೆ
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಬಂಟ್ವಾಳ ತಾಲೂಕಿನ ವಾಮದಪದವು ಸದಾಶಿವ ಪೂಜಾರಿಯವರ ನಿವಾಸದಲ್ಲಿ ರೈತರಿಗಾಗಿ ರೈತ ಕ್ಷೇತ್ರ ಪಾಠ ಶಾಲೆ ಮೂಲಕ ಯಂತ್ರಶ್ರೀ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಶ್ರೀ ಕ್ಷೇ. ಧ.ಘ್ರಾ.ಯೋಜನೆಯ ಕೃಷಿ ವಿಭಾಗ ಕೇಂದ್ರ ಕಛೇರಿಯ ಪ್ರಾದೇಶಿಕ ನಿರ್ದೇಶಕರಾದ ಮನೋಜ್ ಮೆನೆಜಸ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಶ್ರೀ ಕ್ಷೇತ್ರದ ಮೂಲಕ ಮಂಗಳೂರುನಿಂದ ಗೋವಾ ತನಕ ದಾವಣಗೆರೆಯಿಂದ ಚಾಮರಾಜನಗರ ವರೆಗೆ ಯಂತ್ರಶ್ರೀ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ನಮಗೆ ಅನ್ನ ದೊರಕಬೇಕಾದರೆ ಭತ್ತ ಬೆಳೆಯಬೇಕು. ರೈತರು ರಬ್ಬರ್ ಮತ್ತು ಅಡಿಕೆಯನ್ನು ಮಾತ್ರ ಬೆಳೆದರೆ ಸಾಲದು. ಭತ್ತ ಕೃಷಿ ಮಾಡಬೇಕು. ಇದಕ್ಕೆ ಪರ್ಯಾಯವಾಗಿ 2010 ರಲ್ಲಿ ಸಂಸ್ಥೆಯಿಂದ ಶ್ರೀ ಪದ್ದತಿ ಕಾರ್ಯಗಳನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

ಅಡಿಕೆ ಕೃಷಿ ರಾಜ್ಯದಲ್ಲಿ ವಿಸ್ತರಣೆಯಾಗಿದ್ದು, ರೈತರು ತನ್ನ ಮನೆಗೆ ಬೇಕಾಗುವಷ್ಟಾದರೂ ಭತ್ತ ಬೆಳೆಯಬೇಕು. ಭತ್ತದ ಕೃಷಿ ನಾಶವಾಗಬಾರದು ಎಂದರು. ಪ್ರಸ್ತುತ ತಂತ್ರಜ್ಞಾನದ ಯುಗದಲ್ಲಿ ಕೃಷಿ ಕಾರ್ಯ ಸುಲಭ ಸಾಧ್ಯವಾಗಿದೆ. ಶ್ರೀ ಕ್ಷೇತ್ರದ ಧರ್ಮಸ್ಥಳ ಮತ್ತು ಕೃಷಿ ಇಲಾಖೆ ಮೂಲಕ ಕೃಷಿ ಯಂತ್ರ ಧಾರೆ ಮೂಲಕ ಉಳುಮೆ, ಭಿತ್ತನೆ, ಭತ್ತ ಕಟಾವು, ಬೈಹುಲ್ಲು ಕಟ್ಟುವ ತನಕದ ಎಲ್ಲ ವಿಧದ ಯಂತ್ರಗಳು ಕೇಂದ್ರದಲ್ಲಿ ಲಭ್ಯವಿದೆ ಎಂದರು.
ರಾಜ್ಯದಲ್ಲಿ ೮೭ ತಾಲೂಕಿನಲ್ಲಿ ೧ ಲಕ್ಷ ೮೪ ಸಾವಿರ ಕುಟುಂಬದಲ್ಲಿ ಯಂತ್ರಶ್ರೀ ಕಾರ್ಯಕ್ರಮ ಅನುಷ್ಠಾನ ಮಾಡಲಾಗಿದೆ. ಕಳೆದ ವರ್ಷ ರಾಜ್ಯದಲ್ಲಿ ೨೧ ಸಾವಿರ ಎಕರೆ ನಾಟಿ ಮಾಡಲಾಗಿದ್ದು, ಬಂಟ್ವಾಳ ತಾಲೂಕಿನ ಕಳೆದ ವರ್ಷ ೫೦೦ ಎಕರೆ ನಾಟಿ ಮಾಡಿದ್ದು ಪ್ರಸ್ತುತ ವರ್ಷದಲ್ಲಿ ಇದೇ ಗುರಿಯನ್ನು ಇರಿಸಲಾಗಿದೆ ಎಂದು ಹೇಳಿದ ಅವರು, ೨೦೨೬ ಇಸವಿ ಮಹಿಳಾ ರೈತರ ವರ್ಷ ಎಂದು ಘೋಷಣೆಯಾಗಿದ್ದು, ಕೃಷಿಯಲ್ಲಿ ಇನ್ನಷ್ಟು ಆಸಕ್ತಿ ಉಂಟಾಗಲಿ ಎಂದು ಹೇಳಿದರು.
ಇದೇ ವೇಳೆ ಯಂತ್ರಶ್ರೀ ಪೂರಕವಾಗಿ ಮಣ್ಣು ತಯಾರಿ, ಬೀಜ ತಯಾರಿ, ಸಸಿ ತಯಾರಿಕೆಯ ಪ್ರಾತ್ಯಕ್ಷಿಕೆ ನಡೆಸಲಾಯಿತು.
ಬಂಟ್ವಾಲ ತಾ.ಯೋಜನಾದಿಕಾರಿ ಜಯಾನಂದ, ಸಿಎಚ್‌ಎಸ್‌ಸಿ ಯೋಜನಾಧಿಕಾರಿ ಮೋಹನ್, ಜನಜಾಗೃತಿ ವೇದಿಕೆ ಸದಸ್ಯ ನವೀನ್ ಚಂದ್ರ ಶೆಟ್ಟಿ , ಪ್ರಗತಿಪರ ಕೃಷಿಕ ಸದಾಶಿವ ಪೂಜಾರಿ, ಕೃಷಿ ಮೇಲ್ವಿಚಾರಕ ಭಾಸ್ಕರ್,ಯೋಜನೆ ಮೇಲ್ವಿಚಾರಕಿ ಸವಿತಾ, ಪ್ರಬಂಧಕ ಶಿವಕುಮಾರ್ , ಪ್ರಮುಖರಾದ ಪ್ರಕಾಶ್, ಚಂದಪ್ಪ, ಪ್ರಶಾಂತ್, ಶಂಕರ್, ಆನಂದ್ ಉಪಸ್ಥಿತರಿದ್ದರು.



