Published On: Thu, Jun 5th, 2025

 ಪುತ್ತೂರು ನಗರಸಭಾ ಸದಸ್ಯನ ಮೃತದೇಹ ಕುಡಿಯುವ ನೀರಿನ ಟಾಂಕಿಯಲ್ಲಿ ಪತ್ತೆ

ಬಂಟ್ವಾಳ: ಗುರುವಾರ ಬೆಳಿಗ್ಗೆ 11 ಗಂಟೆಯ ಹೊತ್ತಿಗೆ ಪಾಣಮಂಗಳೂರಿನ ಸೇತುವೆಯ ಬಳಿ ಬೈಕ್, ಮೊಬೈಲ್, ಚಪ್ಪಲಿ ಹಾಗೂ ಶಟ್೯ ತೊರೆದು ನಾಪತ್ತೆಯಾಗಿದ್ದ ಪುತ್ತೂರು ನಗರಸಭಾ ಸದಸ್ಯ ರಮೇಶ್ ರೈ( 55) ಅವರ ಮೃತದೇಹ ನೇತ್ರಾವತಿ ನದಿ ಕಿನಾರೆಯಲ್ಲಿರುವ ಬಂಟ್ವಾಳ ಪುರಸಭೆಯ ಕುಡಿಯುವ ನೀರಿನ ಟ್ಯಾಂಕ್ ನೊಳಗೆ ಸಂಜೆಯ ವೇಳೆ ಪತ್ತೆಯಾಗಿದೆ. 

ಸುಳ್ಯ ಮಂಗಳ ಡ್ರೈವಿಂಗ್ ಸ್ಕೂಲ್ ನ ಮಾಲಕರಾಗಿದ್ದು, ಸುಮಾರು 11 ಗಂಟೆಯ ಹೊತ್ತಿಗೆ ಪಾಣೆಮಂಗಳೂರು ಹಳೆ ಸೇತುವೆಯ ಕೆಳಭಾಗದಲ್ಲಿ ಬೈಕ್  ಮೊಬೈಲ್ ಮತ್ತು ಚಪ್ಪಲಿ,ಶಟ್೯ ಅನಾಥವಾಗಿ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು  ಸ್ಥಳಕ್ಕಾಗಮಿಸಿ  ಈಜುಪಟುಗಳ ನೆರವಿನಿಂದ ಹುಡುಕಾಟ ನಡೆಸಿದಾಗ ಪುರಸಭೆಯ ಕುಡಿಯುವ ನೀರಿನ ಟ್ಯಾಂಕ್ ನೊಳಗೆ ಸಂಜೆ  ಮೃತದೇಹ ಪತ್ತೆಯಾಗಿದೆ. ಮೃತರು ಪತ್ನಿ ಮೋಹಿನಿ, ಪುತ್ರ ವಿನೀಶ್, ಪುತ್ರಿ ವೀಕ್ಷಾ ಹಾಗೂ ಅಪಾರ ಕುಟುಂಬ ವರ್ಗ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

ರಮೇಶ್ ರೈ ಅವರು ಇತ್ತೀಚೆಗೆ ನಡೆದ ಪುತ್ತೂರು ನಗರಸಭೆಗೆ ನಡೆದ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ನೆಲ್ಲಿಕಟ್ಟೆ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಸ್ಥಳೀಯವಾಗಿ ಜನಾನುರಾಗಿಯಾಗಿದ್ದ ಅವರು ಸಜ್ಜನ ರಾಜಕಾರಣಿ ಎಂದೇ ಚಿರಪರಿಚಿತರಾಗಿದ್ದರು. ಅವರ ಮಿತ್ರರು ಈ ಘಟನೆಯಿಂದ ಆಘಾತಕ್ಕೆ ಒಳಗಾಗಿದ್ದಾರೆ.

ರಮೇಶ್ ರೈ ಅವರ ಆತ್ಮಹತ್ಯೆಗೆ ಸ್ಪಷ್ಟವಾದ ಕಾರಣ ತಿಳಿದುಬಂದಿಲ್ಲ, ಆರೋಗ್ಯ ಸಮಸ್ಯೆಯಿಂದ ಬಳಲಿತ್ತಿದ್ದು,ಇದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು  ಶಂಕಿಸಲಾಗಿದೆ.

ಗೊತ್ತಾಗಿದ್ದು ಹೇಗೆ?

ಪಾಣೆಮಂಗಳೂರು ಸೇತುವೆ ಬಳಿ ದೊರೆತ ಮೊಬೈಲ್ ನಿಂದ ಸಂಖ್ಯೆಯನ್ನು ಪಡೆದು ಪೊಲೀಸರು ಕರೆ ಮಾಡಿದಾಗ, ಅದು ಪುತ್ತೂರಿನ ರಮೇಶ್ ರೈ ಅವರಿಗೆ ಸೇರಿದ್ದೆಂದು ತಿಳಿದುಬಂದಿತ್ತು. ಕೂಡಲೇ ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕಾಗಮಿಸಿದ ಕುಟುಂಬ ಸದಸ್ಯರು ಮೃತದೇಹವನ್ನು ಗುರುತಿಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.

ಸ್ಥಳಕ್ಕೆ ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಸೇರಿದಂತೆ ಹಲವಾರು ಪ್ರಮುಖರು ಸ್ಥಳಕ್ಕಾಗಮಿಸಿದ್ದರು.

ಪಾಣೆಮಂಗಳೂರಿನ ನೇತ್ರಾವತಿ ಸೇತುವೆ ಬಳಿ ತನ್ನ ಬೈಕ್,ಮೊಬೈಲ್, ಬಟ್ಟೆ, ಪರ್ಸ್ ಮತ್ತಿತರ ವಸ್ತಗಳು ನೇತ್ರಾವತಿ ನದಿ ತೀರದಲ್ಲಿರಿಸಿ ಬಳಿಕ ನದಿ ಕಿನಾರೆಯಲ್ಲಿರುವ ಕುಡಿಯುವ ನೀರಿನ ಟ್ಯಾಂಕ್ ನೊಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಮೃತರ ಶವವನ್ನು ಟ್ಯಾಂಕ್ ನಿಂದ ಮೇಲಕ್ಕೆತ್ತಲಾಗಿದೆ.

ರಮೇಶ್  ಅವರು ಶಟ್೯ ಸಹಿತ ಸೊತ್ತುಗಳನ್ನು ನೇತ್ರಾವತಿ ನದಿ ತೀರದಲ್ಲಿರಿಸಿ ನೀರಿನ ಟ್ಯಾಂಕ್ ಗೆ  ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ.

   .ಇವರು ಸುಮಾರು ವರ್ಷಗಳಿಂದ ಸುಳ್ಯ, ಪುತ್ತೂರು ಭಾಗದಲ್ಲಿ ಡ್ರೈವಿಂಗ್ ಸ್ಕೂಲ್ ನಡೆಸುತ್ತಿದ್ದರು.ಬಿಜೆಪಿ ಸಕ್ರೀಯ ಕಾರ್ಯಕರ್ತರಾಗಿದ್ದು,  ಎರಡನೇ ಬಾರಿ ನಗರ ಸಭಾ ಸದಸ್ಯನಾಗಿ ಆಯ್ಕೆಯಾಗಿದ್ದರು. 

 ಇತ್ತೀಚೆಗೆ  ಕಾಂಗ್ರೆಸ್  ಸದಸ್ಯ ಶಕ್ತಿಸಿನ್ಹ ಅವರ ನಿಧನದ ಹಿನ್ನಲೆಯಲ್ಲಿ  ತೆರವಾದ ಸ್ಥಾನಕ್ಕೆ  ನಡೆದ ಉಪಚುನಾವಣೆಯಲ್ಲಿ ರಮೇಶ್  ಸ್ಪರ್ಧಿಸಿ ಗೆದ್ದಿದ್ದರು. 

 ಮಾಜಿ ಸಂಸದ ನಳಿನ್ ಕುಮಾರ್ ಕಟೀಲು,  ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು,ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಾಜಿ ಶಾಸಕ ಸಂಜೀವ ಮಠಂದೂರು,ನಗರ ಅಧ್ಯಕ್ಷೆ ಲೀಲಾವತಿ ,ಉಪಾಧ್ಯಕ್ಷ ಬಾಲಚಂದ್ರ,   ಬಿಜೆಪಿ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ಆರ್.ಸಿ.ನಾರಾಯಣ, ದಯಾನಂದ, ಚೆನ್ನಪ್ಪ ಆರ್ ಕೋಟ್ಯಾನ್  ಅವರು ಸಂತಾಪ ಸೂಚಿಸಿದ್ದಾರೆ.

   ವಿಜೆ ಅಬುಸಾಲಿ,ಮಹಮ್ಮದ್ ಗೂಡಿನಬಳಿ,ಅಶ್ರಫ್ ಅಕ್ಕರಂಗಡಿ ,ಲತೀಫ್ ನಂದಾವರ, ಅಸ್ಪಕ್ ಅಕ್ಕರಂಗಡಿ, ಇರ್ಫಾನ್ ಅಕ್ಕರಂಗಡಿ ಅವರು ಟ್ಯಾಂಕ್ ನೊಳಗೆ ಇಳಿದು  ಮೃತದೇಹವನ್ನು ಮೇಲಕ್ಕೆತ್ತುವಲ್ಲಿ ಸಹಕರಿಸಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter