ಬಂಟ್ವಾಳ: ಪುಂಜಾಲಕಟ್ಟೆ ರಾಷ್ಟ್ರಭಕ್ತ ನಾಗರೀಕರ ವತಿಯಿಂದ ಅಯೋಧ್ಯೆಯಲ್ಲಿ ಮುಕ್ತಾಯದ ಹಂತದಲ್ಲಿರುವ ಶ್ರೀ ರಾಮ ಮಂದಿರದಲ್ಲಿ ೧೪ ದೇವಾಲಯಗಳ ಪ್ರಾಣ ಪ್ರತಿಷ್ಠೆ ಅಂಗವಾಗಿ ಪುಂಜಾಲಕಟ್ಟೆ ಶ್ರೀ ಗೋಪಾಲಕೃಷ್ಣ ದೇವರಿಗೆ ಕ್ಷೀರಾಭಿಷೇಕ ಹಾಗೂ ಸಿಂಧೂರ ವಿಜಯೋತ್ಸವದ ನಿಮಿತ್ತ ಭಾರತ ಮಾತಾ ಪೂಜನ ಕಾರ್ಯಕ್ರಮ ಗುರುವಾರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ರಾಧಾಕೃಷ್ಣ ಕಲ್ಯಾಣ ಮಂಟಪದಲ್ಲಿ ನಡೆಯಿತು.

ದೇವಸ್ಥಾನದ ಅರ್ಚಕರು ದೇವರಿಗೆ ಕ್ಷೀರಾಭಿಷೇಕ ಹಾಗೂ ಪುಷ್ಪಾರ್ಚನೆ ನಡೆಸಿದರು. ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಬೆಳ್ತಂಗಡಿ ವಿಧಾನಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಅವರು ದಿಕ್ಸೂಚಿ ಭಾಷಣ ಮಾಡಿ ಮಾತನಾಡಿ, ಅಯೋಧ್ಯೆ ಶ್ರೀ ರಾಮ ಮಂದಿರ ನಮ್ಮ ದೇಶದ ಅಸ್ಮಿತೆಯಾಗಿದ್ದು, ೫೦೦ ವರ್ಷಗಳ ಬಳಿಕ ಪೂರ್ಣ ಪ್ರಮಾಣದಲ್ಲಿ ದೇವಸ್ಥಾನ ನಿರ್ಮಾಣವಾಗಿರುವುದು ದೇಶಕ್ಕೇ ಸಂಭ್ರಮ ಪಡುವಂತಾಗಿದೆ ಎಂದು ಹೇಳಿದರು.
ಹಿರಿಯ ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ಶ್ರೀ ರಾಮಚಂದ್ರ ನಮಗೆಲ್ಲರಿಗೂ ಆದರ್ಶ ಪುರುಷನಾಗಿದ್ದು, ಶ್ರೀ ರಾಮನ ಬದುಕಿನ ಸಂದೇಶವನ್ನು ಅಳವಡಿಸಿಕೊಳ್ಳಬೇಕು. ಮುತ್ತೈದೆಯರ ಪ್ರತೀಕವಾದ ಸಿಂದೂರವನ್ನು ಅಳಿಸಿದವರಿಗೆ ತಕ್ಕ ಪಾಠ ಕಲಿಸಿದ ಆಪರೇಷನ್ ಸಿಂದೂರ ವಿಜಯೋತ್ಸವ ಅರ್ಥಪೂರ್ಣ ಎಂದು ಹೇಳಿದರು.
ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಎಂ.ನಾಗೇಶ್ ಪ್ರಭು ಮೂರ್ಜೆ ಅವರು ವೇದಿಕೆಯಲ್ಲಿದ್ದರು.ಬಸವನಗುಡಿ ಪಂಚಕಟ್ಟೆ ಶ್ರೀ ಬಸವೇಶ್ವರ ದೇವಸ್ಥಾನದ ಪ್ರ.ಅರ್ಚಕ ವಾಸುದೇವ ಕುಂಞಣ್ಣಾಯ ಅವರ ನೇತೃತ್ವದಲ್ಲಿ ಶ್ರೀ ರಾಮ ಹಾಗೂ ಭಾರತ ಮಾತೆಯ ಪೂಜೆ ನಡೆಯಿತು.
ಈ ಸಂದರ್ಭದಲ್ಲಿ ನಿವೃತ್ತ ಯೋಧರಾದ ಗುಣಪಾಲ್ ಜೈನ್ ಪುರಿಯ ಹಾಗೂ ಕಾಂತಪ್ಪ ಗೌಡ ಹಟ್ಟತ್ತೋಡಿ ಅವರನ್ನು ನಾಗರಿಕರ ವತಿಯಿಂದ ಸಮ್ಮಾನಿಸಲಾಯಿತು.
ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಸಮಿತಿ ಸಂಚಾಲಕ ರಾಮದಾಸ ಕಾಮತ್, ಪ್ರಮುಖರಾದ ಲಿಂಗಪ್ಪ ಟೈಲರ್, ರವೀಂದ್ರ ಶೆಟ್ಟಿ ಅನಿಲಡೆ, ಯಶೋಧರ, ಹರೀಶ್ಚಂದ್ರ ಶೆಟ್ಟಿಗಾರ್, ರಘುವೀರ ಬಾಳಿಗ, ಬಾಲಕೃಷ್ಣ ನಾಯಕ್, ಮತ್ತಿತರರು ಉಪಸ್ಥಿತರಿದ್ದರು.
ನಿವೃತ್ತ ಶಿಕ್ಷಕ ಧರ್ಣಪ್ಪ ಗೌಡ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರತ್ನದೇವ್ ಪುಂಜಾಲಕಟ್ಟೆ ಅಭಿನಂದನಾ ಪತ್ರ ವಾಚಿಸಿದರು.

