ಇಸ್ರೇಲ್ ನಂತಹ ದೇಶಭಕ್ತಿ ನಿದರ್ಶನ: ಶ್ರೀಕಾಂತ್ ಶೆಟ್ಟಿ
ಬಂಟ್ವಾಳ: ಇಸ್ರೇಲ್ ನ ಜನರಲ್ಲಿರುವಂತಹ ದೇಶಭಕ್ತಿಯನ್ನು ನಾವು ಅಳವಡಿಸಿಕೊಂಡಾಗ ಮಾತ್ರ ನಮ್ಮ ದೇಶದ ಏಳಿಗೆಯು ಸಾಧ್ಯ ಎಂದು ಸಮಾಜಸೇವಕ, ಚಿಂತಕ, ಅಂಕಣಕಾರ ಶ್ರೀಕಾಂತ್ ಶೆಟ್ಟಿ ಕಾರ್ಕಳ ಅವರು ಹೇಳಿದ್ದಾರೆ.ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನಲ್ಲಿ “ಪ್ರಚಲಿತ ಭಾರತ- ಸತ್ಯ ಮಿಥ್ಯೆ” ಎಂಬ ವಿಷಯದ ಕುರಿತು ನಡೆದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪದಲ್ಲಿ “ಇಸ್ರೇಲ್- ನಾವರಿಯದ ಸತ್ಯಗಳು” ಎಂಬ ವಿಷಯದ ಬಗ್ಗೆ ಅವರು ಮಾತನಾಡಿದರು.

ಕೈತಪ್ಪಿಹೋದ ತಮ್ಮ ರಾಷ್ಟ್ರವನ್ನು ತಮ್ಮ ಅಪ್ರತಿಮ ಪ್ರಯತ್ನದಿಂದ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಿದ ಹೆಗ್ಗಳಿಕೆ ಅವರದು. ಕೇವಲ ೦.೨ ಪ್ರತಿಶತ ಜನಸಂಖ್ಯೆ ಇರುವ ಪುಟ್ಟ ದೇಶವಾದ ಇಸ್ರೇಲ್ ನಲ್ಲಿ ೨೨ ಜನ ನೋಬೆಲ್ ಪ್ರಶಸ್ತಿ ಪುರಸ್ಕೃತರಿದ್ದು ತಂತ್ರಜ್ಞಾನದಿಂದ ಹಿಡಿದು ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರಗತಿಯಲ್ಲಿದೆ ಇಂತಹ ದೇಶಭಕ್ತಿ ನಮ್ಮಲ್ಲಿಯೂ ಕಾಣಬೇಕಾಗಿದೆ ಎಂದರು.
ಬೆಳಿಗ್ಗೆ ನಿವೃತ್ತ ಐಪಿಎಸ್ ಪೊಲೀಸ್ ಅಧಿಕಾರಿ ಅಣಾಮಲೈ ಕೆ.ಅವರು ವಿಚಾರ ಸಂಕಿರಣವನ್ನು ಉದ್ಘಾಟಿಸಿ “ನನ್ನ ದೇಶ, ನನ್ನ ಹೊಣೆ ” ಎಂಬ ವಿಚಾರವನ್ನು ಮಂಡಿಸಿದ್ದರು.
ಎರಡನೇ ಗೋಷ್ಠಿಯಲ್ಲಿ “ಕಲಿತ ಪಾಠಗಳು, ಅರಿಯದ ನೋಟಗಳು” ವಿಷಯದ ಬಗ್ಗೆ ಬೆಂಗಳೂರಿನ ಇತಿಹಾಸ ಸಂಶೋಧಕ ಡಾ. ವಿಕ್ರಮ್ ಸಂಪತ್ ಮಂಡಿಸಿದರು.
ಮೂರನೇ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಬೆಂಗಳೂರಿನ ನ್ಯಾಯವಾದಿ ಕ್ಷಮಾ ನರಗುಂದ ಇವರು “ನ್ಯಾರೇಟಿವ್ ಕಥನ-ಆಖ್ಯಾನಗಳು” ಎಂಬ ವಿಚಾರವನ್ನು ಮಂಡಿಸಿದರು.
ಹಿರಿಯ ವಿದ್ಯಾರ್ಥಿನಿ ಕು. ಗಾಯತ್ರೀ ರಾಷ್ಟ್ರಗೀತೆ ಹಾಡಿದರು.ಇದರೊಂದಿಗೆ ರಾಷ್ಟ್ರೀಯ ವಿಚಾರ ಸಂಕಿರಣ ಸಂಪನ್ನಗೊಂಡಿತು.