ಬಂಟ್ವಾಳ: ಫರಂಗಿಪೇಟೆ ಸಮೀಪದ ಕಿದೆಬೆಟ್ಟು ಪದ್ಮನಾಭ ಮಡಿವಾಳ ಅವರ ಪುತ್ರ ,ಪಿಯುಸಿ ವಿದ್ಯಾರ್ಥಿ ದಿಗಂತ್ ಅವರ ನಿಗೂಡ ನಾಪತ್ತೆ ಪ್ರಕರಣವನ್ನು ಬೇಧಿಸುವಂತೆ ಒತ್ತಾಯಿಸಿ ಪೋಲಿಸ್ ಇಲಾಖೆ ಹಾಗೂ ಸರಕಾರದ ಮೇಲೆ ಒತ್ತಡ ಹಾಕುವ ನಿಟ್ಟಿನಲ್ಲಿ ಫರಂಗಿಪೇಟೆ ಜಂಕ್ಷನ್ ನಲ್ಲಿ ಶನಿವಾರ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.

ಬೆಳಿಗ್ಗೆ 9 ಗಂಟೆಯಿಂದ 11 ರವರೆಗೆ ಪೇಟೆ ಬಂದ್ ಮಾಡಿ ಬಾಲಕನ ಪತ್ತೆಗೆ ಒತ್ತಾಯ ಮಾಡಲಾಯಿತು. ಈ ಸಂದರ್ಭ ಎಲ್ಲರೂ ಬಂದ್ ನಡೆಸಿ ಬೆಂಬಲ ಸೂಚಿಸಿದರು.ಸಂಘಪರಿವಾರ ಸಂಘಟನೆಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಹಿಳೆಯರ ಸಹಿತ ಸಾವಿರಾರು ಮಂದಿ ಭಾಗವಹಿಸಿದ್ದರು.

ಪ್ರತಿಭಟನಾ ಸ್ಥಳಕ್ಕೆ ಅಗಮಿಸಿದ್ದ ಸಂಸದ ಕ್ಯಾ. ಬ್ರಿಜೇಶ್ ಚೌಟ,ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ, ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ದಕ್ಷಿಣಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಸಂಘಪರಿವಾರ ಸಂಘಟನೆಯ ಮುಖಂಡರಾದ ನ್ಯಾಯವಾದಿ ಪ್ರಸಾದ್ ಕುಮಾರ್ ರೈ, ಭರತ್ ಕುಮ್ಮೆಲು,ನರಸಿಂಹ ಮಾಣಿ, ಉಮೇಶ್ ಶೆಟ್ಟಿ ಬರ್ಕೆ, ತಾರಾನಾಥ ಕೊಟ್ಟಾರಿ ತೇವು, ನಂದನ್ ಮಲ್ಯ, ಮನೋಜ್ ಆಚಾರ್ಯ, ರವೀಂದ್ರ ಕಂಬಳಿ ಮತ್ತಿತರರು ಇದ್ದರು.
ಈ ಸಂದರ್ಭ ಮನವಿ ಸ್ವೀಕರಿಸಿದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಯತೀಶ್ ಎನ್, ತಂಡಗಳಾಗಿ ನಾವು ತನಿಖೆ ನಡೆಸುತ್ತಿದ್ದು, ಎಲ್ಲರ ಸಹಕಾರ ಕೋರಿದರು.ಪ್ರತಿಭಟನೆಯ ವೇಳೆ ರಸ್ತೆಯ ಒಂದು ಬದಿಯಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.
ವಿದ್ಯಾರ್ಥಿಗಳ ಪರೀಕ್ಷಾ ಸಮಯವಾದುದರಿಂದ ವಾಹನಗಳ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಯಿತು.ನಿರೀಕ್ಷೆಗೂ ಮೀರಿ ಸಾರ್ವಜನಿಕರು ಸೇರಿದ್ದರಿಂದ ವ್ಯಾಪಕ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.ಪ್ರತಿಭಟನೆ ಮುಗಿಯುತ್ತಿದ್ದಂತೆ11 ಗಂಟೆಯ ಹೊತ್ತಿಗೆ ಅಂಗಡಿ ಮುಂಗಟ್ಟುಗಳು ತೆರೆದು ಕೊಂಡವು.
