ಅಡ್ಡೂರು ಸೇತುವೆ ದುರಸ್ಥಿ ಕಾಮಗಾರಿಗೆ ಚಾಲನೆ: ಪೊಳಲಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕಾಮಗಾರಿ ಆರಂಭ
ಬಂಟ್ವಾಳ: ಶಿಥಿಲಗೊಂಡಿರುವ ಪೊಳಲಿ ಸಮೀಪದ ಅಡ್ಡೂರು ಸೇತುವೆಯಕಾಮಗಾರಿಗೆ ಕೊನೆಗೂ ಶುಕ್ರವಾರ ಚಾಲನೆ ದೊರೆತಿದೆ. ಎರಡು ದಿನಗಳ ಹಿಂದೆಯಷ್ಠೆ ಬೆಂಗಳೂರಿನಲ್ಲಿ ನಡೆದ ಭರವಸೆ ಸಮಿತಿ ಸಭೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಈ ಸೇತುವೆ ದುರಸ್ಥಿಗೆ ಸರ್ಕಾರದಿಂದ 6.00 ಕೋ.ರೂ ಅನುದಾನ ಬಿಡುಗಡೆಯಾಗಿ ಟೆಂಡರ್ ಪ್ರಕ್ರಿಯೆ ಮುಗಿದರೂ ಕಾಮಗಾರಿ ಕೈಗೆತ್ತಿಕೊಳ್ಳದ ಹಿನ್ನಲೆಯಲ್ಲಿ ಅಧಿಕಾರಿಗಳ ಮುಂದೆ ಅಸಮಾಧಾನ ವ್ಯಕ್ತಪಡಿಸಿದ್ದರು, ಈ ಸಂದರ್ಭ ಪಿಡಬ್ಲುಡಿ ಇಲಾಖಾಧಿಕಾರಿಯವರು ಮೂರುದಿನಗಳ ಒಳಗಾಗಿ ಕಾಮಗಾರಿ ಆರಂಭಿಸುವ ಭರವಸೆ ನೀಡಿದ್ದರು.

ಅದರಂತೆ ಶುಕ್ರವಾರ ಸೇತುವೆ ಕಾಮಗಾರಿಗೆ ಆರಂಭಕ್ಕೆ ಮುನ್ನ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹಾಗೂ ಗುತ್ತಿಗೆ ವಹಿಸಿಕೊಂಡ ಮೊಗರೊಡಿ ಕನ್ಸರ್ಟ್ ಕ್ಸನ್ ಸಂಸ್ಥೆಯ ಮಾಲಕ ಸುಧಾಕರ ಶೆಟ್ಟಿಯವರ ಉಪಸ್ಥಿತಿಯಲ್ಲಿ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಕಾಮಗಾರಿಗೆ ಚಾಲನೆ ನೀಡಲಾಯಿತು.

ಪೊಳಲಿ ವಾರ್ಷಿಕ ಜಾತ್ರೋತ್ಸವಕ್ಕೆ ಮೊದಲು ಸೇತುವೆಯ ದುರಸ್ತಿ ಕಾರ್ಯವನ್ನು ಮುಗಿಸಿ ಭಕ್ತರ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಶಾಸಕ ರಾಜೇಶ್ ನಾಯ್ಕ್ ಅವರು ಗುತ್ತಿಗೆದಾರರಿಗೆ ಸೂಚಿಸಿದರು.
ಸೇತುವೆಯ ದುರಸ್ತಿಯನ್ನು ವೈಜ್ಞಾನಿಕ ರೀತಿಯಲ್ಲಿ ಮಾಡಬೇಕಾಗಿದ್ದರಿಂದ ಕೆಲವೊಂದು ನಿಯಮಗಳನ್ನು ಪಾಲಿಸಿಕೊಂಡು ಕಾಮಗಾರಿ ಮಾಡಬೇಕಾಗುತ್ತದೆ. ಈ ಸಂದರ್ಭ ಸಾರ್ವಜನಿಕರ ಸಹಕಾರವು ಅತೀ ಅಗತ್ಯವಾಗಿದ್ದು,ಆದಷ್ಟು ಬೇಗ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಲು ಪ್ರಯತ್ನಿಸುವುದಾಗಿ ಗುತ್ತಿಗೆದಾರರು ತಿಳಿಸಿದರು.

“ಮಾತಿನಂತೆ ಕಾಮಗಾರಿ ಆರಂಭ”ಪೊಳಲಿ ಅಡ್ಡೂರು ಸೇತುವೆ ದುರಸ್ತಿ ಕಾರ್ಯಕ್ಕಾಗಿಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ ಕಾಮಗಾರಿ ಕೈಗೆತ್ತಿಕೊಳ್ಳದಿರುವ ಬಗ್ಗೆ ಬೆಂಗಳೂರು ವಿಧಾನ ಸೌಧದಲ್ಲಿ ನಡೆದ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಭರವಸೆಗಳ ಸಮಿತಿ ಸಭೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರು ಪ್ರಶ್ನಿಸಿದ್ದಲ್ಲದೆ ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು.ಇದೀಗ ಸೇತುವೆಯ ದುರಸ್ಥಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಈಮಧ್ಯೆ ಸೇತುವೆಯ ಪುನರ್ ನಿರ್ಮಾಣಕ್ಕೆ 50 ಕೋಟಿ ರೂ.ವಿನ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು ಇಲಾಖಾಧಿಕಾರಿಗಳು ತಿಳಿಸಿದ್ದರು.