ಜ. 19ಕ್ಕೆ “ಕೋಟಿ ಚೆನ್ನಯ ಕ್ರೀಡೋತ್ಸವ” ಸುದ್ದಿಗೋಷ್ಠಿ ನಡೆಸಿದ ಬೇಬಿ ಕುಂದರ್

ಬಂಟ್ವಾಳ : ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ, ಯುವವಾಹಿನಿ ಬಂಟ್ವಾಳ ಹಾಗೂ ಬಂಟ್ವಾಳ ತಾಲೂಕು ಬಿಲ್ಲವ ಮಹಿಳಾ ಸಮಿತಿಯ ಸಹಕಾರದೊಂದಿಗೆ ಬಿಲ್ಲವ ಸಮುದಾಯಕ್ಕೆ ಸೀಮಿತವಾಗಿ ಬಂಟ್ವಾಳ ತಾಲೂಕು ಮಟ್ಟದ “ಕೋಟಿ ಚೆನ್ನಯ ಕ್ರೀಡೋತ್ಸವ”ವು ಜ. 19 ಭಾನುವಾರದಂದು ಬಂಟ್ವಾಳ ಭಂಡಾರಿಬೆಟ್ಟು ಎಸ್.ವಿ.ಎಸ್. ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕ್ರೀಡೋತ್ಸವ ಸಮಿತಿ ಸಂಚಾಲಕರಾದ ಬೇಬಿ ಕುಂದರ್ ಅವರು ತಿಳಿಸಿದ್ದಾರೆ.
ಬುಧವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕ್ರೀಡಾಕೂಟದಲ್ಲಿ
ತಾಲೂಕಿನ 24 ಬಿಲ್ಲವ ಗ್ರಾಮ ಸಮಿತಿಗಳ ಆಕರ್ಷಕ ಪಥ ಸಂಚಲನ ನಡೆಯಲಿದೆಯಲ್ಲದೆ 24 ಬಿಲ್ಲವ ಗ್ರಾಮ ಸಮಿತಿಯ ತಂಡಗಳು ವಿವಿಧ ಗುಂಪು ಸ್ಪರ್ಧೆಯಲ್ಲಿ ಭಾಗವಹಿಸಲಿದೆ ಎಂದರು.
ಮಾಜಿ ಕೇಂದ್ರ ಸಚಿವರಾದ ಬಿ. ಜನಾರ್ದನ ಪೂಜಾರಿಯವರು ಕ್ರೀಡೋತ್ಸವವನ್ನು ಉದ್ಘಾಟಿಸಲಿದ್ದಾರೆ.ಪಡುಮಲೆ ಕೋಟಿ-ಚೆನ್ನಯ ಜನ್ಮಸ್ಥಾನದ ಸಂಚಲನಾ ಸಮಿತಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಅವರು ಕ್ರೀಡಾ ಜ್ಯೋತಿ ಹಸ್ತಾಂತರಿಸಲಿದ್ದಾರೆ ಎಂದ ಅವರು ವಿಧಾನ ಪರಿಷತ್ ಸದಸ್ಯ ಬಿ. ಕೆ. ಹರಿಪ್ರಸಾದ್ ಗೌರವ ರಕ್ಷೆ ಸ್ವೀಕರಿಸಲಿದ್ದು,ಬಂಟ್ವಾಳ ಡಿ.ವೈ.ಎಸ್.ಪಿ ಎಸ್. ವಿಜಯ ಪ್ರಸಾದ್ ಧ್ವಜಾರೋಹಣ ಮಾಡಲಿದ್ದಾರೆ.ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಬಿ. ಸಂಜೀವ ಪೂಜಾರಿ ಗುರುಕೃಪಾ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಎಂದರು.
ಬಿಲ್ಲವ ಸಮುದಾಯದ ಹಲವಾರು ಗಣ್ಯರು,ರಾಜಕೀಯ,ಧಾರ್ಮಿಕ,ಸಾಮಾಜಿಕ ಮುಖಂಡರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದ ಅವರು ಮಕ್ಕಳು, ಹಿರಿಯರು, ಮಹಿಳೆಯರು ಸೇರಿದಂತೆ ಎಲ್ಲಾ ವಿಭಾಗಗಳಲ್ಲಿ ವಿವಿಧ ಆಟೋಟ ಸ್ಪರ್ಧೆಗಳ ಸಹಿತ ಪುರುಷರಿಗೆ ಕಬಡ್ಡಿ,ಹಗ್ಗ-ಜಗ್ಗಾಟ,ವಾಲಿಬಾಲ್ ಹಾಗೂ ಮಹಿಳೆಯರಿಗೆ ಹಗ್ಗ-ಜಗ್ಗಾಟ,ತ್ರೋಬಾಲ್ ಸ್ಪರ್ಧೆ ಆಯೋಜಿಸಲಾಗಿದೆ ಎಂದುಅವರು ವಿವರಿಸಿದರು.
ಬಿಲ್ಲವ ಸಮುದಾಯದಲ್ಲಿ ಹಲವಾರು ಮಂದಿ ಕ್ರೀಡಾಪಟುಗಳಿದ್ದು ಅವರನ್ನು ಪ್ರೋತ್ಸಾಹಿಸಿ ಇನ್ನಷ್ಟು ಉನ್ನತಮಟ್ಟದಲ್ಲಿ ಗುರುತಿಸುವುದು ಸೇರಿದಂತೆ ಅವರಿಗೆ ಉದ್ಯೋಗ ದೊರಕುವ ನಿಟ್ಟಿನಲ್ಲಿ ವಿವಿಧ ತರಬೇತಿ ನೀಡುವ ಉದ್ದೇಶವನ್ನು ಹೊಂದಿದೆ.ತಾಲೂಕು ಬಿಲ್ಲವ ಸಂಘದ ಅಧ್ಯಕ್ಷರಾಗಿದ್ದ ದಿವಂಗತ ಸೇಸಪ್ಪ ಕೋಟ್ಯಾನ್ ಅವರ ಕನಸಿನಂತೆ ಇನ್ನುಮುಂದಕ್ಕೆ ನಿರಂತರವಾಗಿ ಪ್ರತಿವರ್ಷವು ಈ ಕ್ರೀಡಾಕೂಟ ಆಯೋಜಿಸಲಾಗುವುದು ಎಂದರು. ಈ ಕ್ರೀಡಾಕೂಟದಲ್ಲಿ ಬಿಲ್ಲವ ಸಮಾಜದ ಸಾಧಕರು,ಪ್ರತಿಭೆಗಳನ್ನು ಪ್ರಗತಿಪರ ಕೃಷಿಕರು,ವಿವಿಧ ಗ್ರಾ.ಪಂ.ನಲ್ಲಿರುವ ಬಿಲ್ಲವ ಸಮುದಾಯದಅಧ್ಯಕ್ಷರನ್ನು ಗುರುತಿಸಿ ಅವರನ್ನು ಗೌರವಿಸಲಾಗುವುದು ಎಂದರು.
ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಬಹುಮಾನ ವಿತರಣೆ ಮಾಡಲಿದ್ದರೆ, ಕೋಟಿ-ಚೆನ್ನಯ ಕ್ರೀಡೋತ್ಸವ ಸಮಿತಿ ಸಂಚಾಲಕರಾದ ಬೇಬಿ ಕುಂದರ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಶಾಸಕ ಉಮಾನಾಥ ಕೋಟ್ಯಾನ್, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್, ದ.ಕ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ರಾಜಶೇಖರ ಕೋಟ್ಯಾನ್, ನಾರಾಯಣಗುರು ವಿಚಾರ ವೇದಿಕೆ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಸಹಿತ ಹಲವಾರು ಗಣ್ಯರು ಈ ಸಂದರ್ಭ ದಲ್ಲಿಭಾಗವಹಿಸಲಿದ್ದಾರೆ ಎಂದರು.
ಸಮಿತಿಯ ಪ್ರ.ಕಾರ್ಯದರ್ಶಿ ಶ್ರೀನಿವಾಸ್ ಪೂಜಾರಿ ಮೆಲ್ಕಾರ್ ,ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಬಿ. ಸಂಜೀವ ಪೂಜಾರಿ ಗುರುಕೃಪಾ,ಯುವವಾಹಿನಿ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ,ಮಹಿಳಾ ಸಂಘದ ಅಧ್ಯಕ್ಷೆ ಶೈಲಜಾ ರಾಜೇಶ್,ಹರೀಶ್ ಕೋಟ್ಯಾನ್ ಕುದನೆ ಮೊದಲಾದವರಿದ್ದರು.