ಬಿ.ಮೂಡ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಡಿಜಿಟಲ್ ಸಂಚಿಕೆ ಜ್ಞಾನಮಿತ್ರ ಅನಾವರಣ
ಬಂಟ್ಚಾಳ: ಬಿ.ಸಿ.ರೋಡ್ ಅಜ್ಜಿಬೆಟ್ಟುವಿನಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಕಂಪ್ಯೂಟರ್ ಶಿಕ್ಷಕ ಶಿವಮೂರ್ತಿ ಅವರ ಮುತುವರ್ಜಿಯಲ್ಲಿ ಹಾಗೂ ಸಂಪಾದಕತ್ವದಲ್ಲಿ ಜ್ಞಾನಮಿತ್ರ ಎಂಬ ಡಿಜಿಟಲ್ ಪತ್ರಿಕೆಯನ್ನು ಆರಂಭಿಸಲಾಗಿದ್ದು, ಪುರಸಭಾ ಸದಸ್ಯೆ ವಿದ್ಯಾವತಿ ಪ್ರಮೋದ್ ಕುಮಾರ್ ಶಾಲೆಯಲ್ಲಿ ಬಿಡುಗಡೆಗೊಳಿಸಿದರು. ವಿದ್ಯಾರ್ಥಿಗಳ ಪ್ರತಿಭೆ ವಿಕಸನಗೊಳ್ಳಲು ಇದು ಸಹಕಾರಿಯಾಗಲಿ ಎಂದು ಅವರು ಶುಭ ಹಾರೈಸಿದರು.

ಪ್ರತಿ ವಾರವೂ ಜ್ಞಾನಮಿತ್ರ ಸಾಮಾಜಿಕ ಮಾಧ್ಯಮ ಮೂಲಕ ಶಾಲಾ ವಿದ್ಯಾರ್ಥಿಗಳ ಪೋಷಕರಿಗೆ ತಲುಪಲಿದ್ದು, ವಿದ್ಯಾರ್ಥಿಗಳ ಕಥೆ, ಕವನ ಹಾಗೂ ಪೂರಕ ಮಾಹಿತಿಗಳು ಇದರಲ್ಲಿ ಅಡಕವಾಗಿವೆ ಎಂದು ಶಿವಮೂರ್ತಿ ತಿಳಿಸಿದರು.
ಈ ಸಂದರ್ಭ ಮುಖ್ಯ ಶಿಕ್ಷಕರ ಸಹಿತ ಶಿಕ್ಷಕ ವೃಂದ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.