ಬಂಟ್ವಾಳ: ಮಂಚಿ-ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ 23ನೇ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

ಬಂಟ್ವಾಳ :ಮಂಚಿ-ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ 2025ನೇ ಜ. 4 ಮತ್ತು 5 ರಂದು ನಡೆಯುವ 23ನೇ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಶಾಲೆಯಲ್ಲಿ ನಡೆದ ಸ್ವಾಗತ ಸಮಿತಿ ಸಭೆಯಲ್ಲಿ ಬಿಡುಗಡೆಗೊಳಿಸಲಾಯಿತು.
ಆಹ್ವಾನ ಪತ್ರಿಕೆಯನ್ನು ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಬಿಡುಗಡೆಗೊಳಿಸಿ ಮಾತನಾಡಿದರು, ಹಿರಿಯ ಸಾಹಿತಿಗಳ, ಪ್ರತಿಭಾನ್ವಿತ ಯುವ ಬರಹಗಾರರ, ಸಾಹಿತ್ಯ ಪ್ರಿಯರೆಲ್ಲರ ಸಾಹಿತ್ಯ ಜಾತ್ರೆಯಾಗಿ 23ನೇ ಕನ್ನಡ ಸಾಹಿತ್ಯ ಸಮ್ಮೇಳನವು ಮೆರುಗು ನೀಡಲಿದ್ದು, ಕನ್ನಡ ಭಾಷೆಯ ಕೃಷಿಗೆ ಇನ್ನಷ್ಟು ಹೊಸ ರೂಪ ಹೊಸ ಚಿಂತನೆಗಳನ್ನು ಹುಟ್ಟು ಹಾಕುವ ‘ಸಾಹಿತ್ಯದಿಂದ ಸಾಮರಸ್ಯ’ ಎನ್ನುವ ಆಶಯದಡಿ ಈ ಸಮ್ಮೇಳನ ನಡೆಯಲಿದೆ ಎಂದರು.
ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಸತೀಶ್ ಆಳ್ವ ಇರಾ ಬಾಳಿಕೆ ಮಾತನಾಡಿ, ಗ್ರಾಮಾಂತರ ಮಂಚಿ ಪ್ರದೇಶವು ಹಲವಾರು ಸಾಹಿತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದೆ. ಮಂಚಿಯ ಇಬ್ಬರು ಸಾಹಿತಿಗಳು ಈಗಾಗಲೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿಕೊಂಡಿರುವುದು ಆಯೋಜನೆ ಮಾಡುತ್ತಿರುವ ನಮಗೆ ಹೆಮ್ಮೆಯ ಸಂಗತಿ. ಮಂಚಿ-ಕೊಳ್ನಾಡು ಪ್ರೌಢಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ಈ ಬಾರಿಯ ಸಮ್ಮೇಳನ ಯಶಸ್ವಿಯಾಗಿ ಮೂಡಿ ಬರಲಿ ಎಂದು ಹಾರೈಸಿದರು.
ಹಿರಿಯ ಸಾಹಿತಿ ಹಾಗೂ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಪಡಾರು ಮಹಾಬಲೇಶ್ವರ ಭಟ್ ಶುಭ ಹಾರೈಸಿದರು. ಶಾಲಾ ಹಿರಿಯ ವಿದ್ಯಾರ್ಥಿ ಮಾಧವ ಮಾವೆ, ಅಬ್ದುಲ್ ರಝಾಕ್ ಕೂಡ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಬಂಟ್ವಾಳ ತಾಲೂಕು ಘಟಕದ ಪದಾಧಿಕಾರಿಗಳಾದ ವಿ ಸು ಭಟ್, ಅಬೂಬಕ್ಕರ್ ಅಮ್ಮುಂಜೆ, ಮಹಮ್ಮದ್ ಪಾಣೆಮಂಗಳೂರು, ಗಣೇಶ ಪ್ರಸಾದ ಪಾಂಡೆಲು, ಸಮಿತಿ ಕೋಶಾಧಿಕಾರಿ ಹಾಜಿ ಸುಲೈಮಾನ್ ಸುರಿಬೈಲು, ಸಂಚಾಲಕರಾದ ಉಮಾನಾಥ ರೈ ಮೇರಾವು, ಬಿ ಎಂ ಅಬ್ಬಾಸ್ ಆಲಿ, ಪುಷ್ಪರಾಜ ಕುಕ್ಕಾಜೆ ಹಾಗೂ ಶಾಲಾ ಮುಖ್ಯ ಶಿಕ್ಷಕಿ ಸುಶೀಲ ವಿಟ್ಲ ಮೊದಲಾದವರಿದ್ದರು.
ಸ್ವಾಗತ ಸಮಿತಿಯ ಪ್ರಧಾನ ಸಂಯೋಜಕ ರಾಮ್ ಪ್ರಸಾದ್ ರೈ ತಿರುವಾಜೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಎಂ ಡಿ ಮಂಚಿ ವಂದಿಸಿದರು. ಬಂಟ್ವಾಳ ತಾಲೂಕು ಘಟಕದ ಗೌರವ ಕಾರ್ಯದರ್ಶಿ ರಮಾನಂದ ನೂಜಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.