ಬಂಟ್ವಾಳ ತಾಲೂಕಿನ ವಧುವಿಗೆ ಪಂಜಾಬಿನ ವರ, ಹೊರರಾಜ್ಯದಲ್ಲಿ ಮಿಂಚಿದ ತುಳುನಾಡಿನ ಅಳಿಯ ಕಟ್ಟಿನ ಸಂಪ್ರದಾಯ ಅಪರೂಪದ ಮದುವೆಗೆ ಸಾಕ್ಷಿಯಾಯಿತು ಪಂಜಾಬಿನ ಕಲ್ಯಾಣ ಮಂಟಪ…
ಬಂಟ್ವಾಳಕ್ಕೂ ಪಂಜಾಬ್ ಗೂ ಎಲ್ಲಿಯ ಸಂಬಂಧ, ಏಳೇಳು ಜನುಮದ ಅನುಬಂಧ. ತುಳುನಾಡಿನ ವಧುವನ್ನು ಪಂಜಾಬಿಯ ವರನಿಗೆ ಕನ್ಯಾದಾನ ಮಾಡಿದ ಅಪರೂಪದ ಪ್ರಸಂಗವೊಂದು ಇತ್ತೀಚೆಗೆ ನಡೆಯಿತು….

ತುಳುನಾಡಿನಲ್ಲಿ ನಡೆಯುವ ಅಳಿಯ ಕಟ್ಟಿನ ಮದುವೆಯನ್ನು ಪಂಜಾಬ್ ರಾಜ್ಯದ ಕುಟುಂಬವೊಂದು ಅಪ್ಪಿಕೊಂಡು ಒಪ್ಪಿಕೊಂಡರು ಎಂಬುದು ನಿಜಕ್ಕೂ ತುಳುನಾಡಿಗೆ ಹೆಮ್ಮೆ….ಮೂಲತ: ಬಡಗಬೆಳ್ಳೂರು ಗ್ರಾಮದ ಪರಿಮೊಗರು ನಿವಾಸಿ ಪ್ರಕಾಶ್ ಶೆಟ್ಟಿ ಅವರ ಪ್ರಥಮ ಪುತ್ರಿ ಪುಣ್ಯ ಅವರ ವಿವಾಹವು ಪಂಜಾಬ್ ರಾಜ್ಯದ ಸಂಜೀವ ಶರ್ಮ ಅವರ ಮಗ ಉತ್ಕರ್ಷ ಅವರ ಜೊತೆ ನ.27 ರಂದು ಪಂಜಾಬ್ ಲುದಿನಾದ ಅಂಬ್ರೋಸಿಯಾ ಗ್ರ್ಯಾಂಡ್ ರೆಸಾರ್ಟ್ ನಲ್ಲಿ ಸಂಭ್ರಮದಿಂದ ನಡೆಯಿತು.

ಬಂಟ್ವಾಳದ ಪುಣ್ಯ ಅವರು ಉನ್ನತ ವ್ಯಾಸಂಗಕ್ಕೆ ಅಮೇರಿಕಾಕ್ಕೆ ತೆರಳಿದ್ದರು.ಉತ್ಕರ್ಷ ಕೂಡ ಅಮೇರಿಕಾದಲ್ಲಿ ಶಿಕ್ಷಣ ಪಡೆಯುತ್ತಿದ್ದರು.ಉನ್ನತ ವಿದ್ಯಾಭ್ಯಾದ ಉದ್ದೇಶದಿಂದ ಅಮೇರಿಕಾದ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವೇಳೆ ಪರಿಚಯವಾದ ಇವರಿಬ್ಬರ ಸ್ನೇಹ ಮುಂದೆ ಸಾಗಿ ಮದುವೆ ಎಂಬ ಮೂರಕ್ಷದ ಗಂಟು ಕಟ್ಟುವರೆಗೂ ತಲುಪಿತು. ಅಮೇರಿಕಾದ ವರನಿಗೆ ಅಥವಾ ವಧುವಿಗೆ ತುಳುನಾಡಿನ ವರ ಅಥವಾ ವಧು ಎಂಬ ಸಂಬಂಧಗಳು ಅನೇಕ ನಡೆದಿವೆ, ಅದು ದೊಡ್ಡ ಸಂಗತಿಯಾಗದೆ ಇರಬಹುದು.
ಆದರೆ ಹೊರರಾಜ್ಯವಾದ ಪಂಜಾಬ್ ನ ವರ ಬಂಟ್ವಾಳದ ಬಂಟ ಸಮುದಾಯದ ವಧುವನ್ನು ತುಳುನಾಡಿನ ಅಳಿಯ ಕಟ್ಟು ಪ್ರಕಾರದ ಮದುವೆ ಮೂಲಕ ವರಿಸಿದ್ದಾನೆ ಎಂಬುದು ಉಲ್ಲೇಖನೀಯ ಅಂಶವಾಗಿದೆ. ಅತ್ಯಂತ ಪುರಾತನವಾದ ತುಳುನಾಡಿನ ಅಳಿಯ ಕಟ್ಟಿನ ಸಂಪ್ರದಾಯ ಬದ್ದವಾದ ಮದುವೆಗೆ ಸಾಕ್ಷಿಯಾಗಿ, ಭೂಮಿ ಸಾಕ್ಷಿಯಾದ ಮದುವೆಯನ್ನು ಪಿ.ಕಿಶೋರ್ ಭಂಡಾರಿ ಬಡಗಬೆಳ್ಳೂರು ಇವರ ಮಾರ್ಗದರ್ಶನದಲ್ಲಿ ಮಂಗಳೂರಿನ ರಾಕೇಶ್ ಸಾಲಿಯಾನ್ ಪಚ್ಚನಾಡಿ ಅವರು ನೆರವೇರಸಿಕೊಟ್ಟರು.
ತುಳುನಾಡ ಶಾಲು : ರಾಕೇಶ್ ಪಚ್ಚನಾಡಿ ತುಳುನಾಡಿನ ವಿಶೇಷವಾದ ಸಂಪ್ರದಾಯಬದ್ದವಾದ ಮದುವೆಯ ಕ್ರಮವನ್ನು ವಿದೇಶದಲ್ಲಿ ಉದ್ಯೋಗದಲ್ಲಿರುವ ವಿದ್ಯಾವಂತ ಶ್ರೀಮಂತ ಕುಟುಂಬಗಳು ಒಪ್ಪಿಕೊಂಡು ಸಂಭ್ರಮಿಸಿದ್ದಾರೆ ಎಂದರೆ ಇದು ವಿಶೇಷವಾಗಿದೆ ಎಂದು ಅಳಿಯಕಟ್ಟಿನ ಸಂಪ್ರದಾಯ ಬದ್ದವಾದ ಮದುವೆಯನ್ನು ನೆರವೇರಿಸಿದ ರಾಕೇಶ್ ಅವರು ತಿಳಿಸಿದರು.
ಎರಡು ಕುಟುಂಬಗಳು ಮನಸ್ಸು ಮಾಡಿದರೆ ಪಂಜಾಬ್ ನ ಮಂಟಪದಲ್ಲಿ ವೈಭವದಿಂದ ಮದುವೆ ಮಾಡಬಹುದಿತ್ತು.
ಆದರೆ ಮೂಲತ: ಬಂಟ್ವಾಳದವರಾದ ವಧುವಿನ ಕುಟುಂಬ ತುಳುನಾಡಿನ ಮೂಲ ಸಂಪ್ರದಾಯ ಮರೆಯದೆ ಮದುವೆ ಮಾಡಿರುವುದು ವಿಶೇಷವೆನಿಸಿದೆ. ಅದಕ್ಕೆ ಆಸ್ಪದ ಕೊಟ್ಟ ವರನ ಕುಟುಂಬಕ್ಕೂ ಇದರ ಪಾಲು ಸಲ್ಲಬೇಕಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ವಿದೇಶದಲ್ಲಿರುವ ಕುಟುಂಬಗಳುತುಳುನಾಡಿನ ಕಟ್ಟಲೆಯನ್ನು ಸ್ವೀಕರಿಸಿದ್ದಾರೆ ಎಂದಾಗ ಖುಷಿಯಿಂದ ಮದುವೆಯ ಬಳಿಕ ವರ ಹಾಗೂ ವಧುವಿಗೆ ತುಳುನಾಡ ಶಾಲು ಹಾಕಿ ಗೌರವ ನೀಡಿದ್ದೇನೆ.
ಕೇಪುಳ ರಂಗಿನ ತುಳುನಾಡಿನ ಶಾಲು ಇದರಲ್ಲಿ ಸೂರ್ಯ ಚಂದ್ರನ ಚಿತ್ರವಿದೆ. ಇದರ ವಿಶೇಷವೇನಂದರೆ ಸೂರ್ಯಚಂದ್ರ ಇರುವವರೆಗೆ ಚೆನ್ನಾಗಿ ಬಾಳುವ ಸಂಕೇತವಿದೆ ಎಂಬುದನ್ನು ಸೂಚಿಸುತ್ತದೆ ಎಂದು ಅವರು ತಿಳಿಸಿದರು.
ಪಂಜಾಬ್ ನ ಮದುವೆಗೆ ಬಂಟ್ವಾಳದಿಂದ ಸಾಮಾಗ್ರಿ: ಕಿಶೋರ್ ಭಂಡಾರಿ
ಬಡಗಬೆಳ್ಳೂರಿನ ಪ್ರಕಾಶ್ ಶೆಟ್ಟಿ ಹಾಗೂ ಕಿಶೋರ್ ಭಂಡಾರಿ ಅವರು ಸಂಬಂಧಿಕರಾಗಿದ್ದು, ಪಂಜಾಬ್ ನಲ್ಲಿ ಅಳಿಯ ಕಟ್ಟು ಪ್ರಕಾರ ಮದುವೆ ನೆರವೇರಿಸಲು ಇವರನ್ನು ಆಮಂತ್ರಣ ನೀಡಿದ್ದರು. ವೈಯಕ್ತಿಕ ಕಾರಣಗಳಿಂದ ಕಿಶೋರ್ ಭಂಡಾರಿ ಅವರು ಪಂಜಾಬ್ ಗೆ ಹೋಗಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಮಂಗಳೂರಿನ ರಾಕೇಶ್ ಅವರನ್ನು ಕಳುಹಿಸಿಕೊಟ್ಟಿದ್ದರು. ಇಲ್ಲಿನ ಅಳಿಯ ಕಟ್ಟು ಪ್ರಕಾರ ಮದುವೆ ನಡೆಸಲು ಮದುವೆಗೆ ಬೇಕಾದ ವಸ್ತುಗಳು ಧಾರೆಗಿಂಡಿ,ದೀಪ, ಹರಿವಾಣಗಳು, ವೀಳ್ಯದೆಲೆ, ಅಡಿಕೆ, ತೆಂಗಿನಕಾಯಿ, ಬೆಳ್ತಿಗೆ ಅಕ್ಕಿ,ಹಲಸಿನ ತುದಿ,ಮಾವಿನ ತುದಿ,ಸೀಯಾಳ ಹೀಗೆ ಬಾಳೆ ಎಲೆಯಿಂದ ಹಿಡಿದು ತೆಂಗಿನ ಹಿಂಗಾರದವರೆಗೆ ಎಲ್ಲವನ್ನು ತಯಾರು ಮಾಡಿ ಭಂಡಾರಿಯವರು ಬಂಟ್ವಾಳದಿಂದ ಪಂಜಾಬ್ ಗೆ ಕಳುಹಿಸಿಕೊಟ್ಟಿದ್ದಾರೆ.