ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಕ್ರೀಡೋತ್ಸವದಲ್ಲಿ RSS ಸರಸಂಘಚಾಲಕ ಡಾ. ಮೋಹನ್ ಭಾಗವತ್ ಭಾಗಿ
ಬಂಟ್ವಾಳ: ಹಿಂದೂಗಳ ಭದ್ರ ಕೋಟೆ ಎಂದೇ ಪ್ರಸಿದ್ಧ ಪಡೆದಿರುವ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಡಿ,7ರಂದು ನಡೆಯಲಿರುವ ಹೊನಲು ಬೆಳಕಿನ ಕ್ರೀಡೋತ್ಸವಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಚಾಲಕರಾದ ಮೋಹನ್ ಭಾಗವತ್ ಆಗಮಿಸಲಿದ್ದಾರೆ. ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಡಿಸೆಂಬರ್ 7ರಂದು ಸಂಜೆ ನಡೆಯಲಿರುವ ಹೊನಲು ಬೆಳಕಿನ ಕ್ರೀಡೋತ್ಸವಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಆಗಮಿಸಲಿದ್ದಾರೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕೆ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಬಿ.ಸಿ.ರೋಡಿನಲ್ಲಿ ಸೋಮವಾರ (ಡಿ.2) ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಅವರು ‘ಇಲ್ಲಿನ ಶಿಶು ಮಂದಿರದಿಂದ ಪದವಿ ಕಾಲೇಜು ತನಕ ಸುಮಾರು 3338 ಮಂದಿ ವಿದ್ಯಾರ್ಥಿಗಳು ಅಂದು ನೃತ್ಯ ಸಹಿತ ವಿವಿಧ ದೈಹಿಕ ಕಸರತ್ತು ಪ್ರದರ್ಶನ ಮಾಡಲಿದ್ದಾರೆ ಎಂದು ಹೇಳಿದರು.
ಒಟ್ಟು 2300 ಮಂದಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಸಹಿತ ಸಮವಸ್ತ್ರ ಮತ್ತು ಅಕ್ಷರ ದಾಸೋಹ ಸೇರಿದಂತೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಜೊತೆಗೆ ದೇಶಭಕ್ತಿ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ಪಾರದರ್ಶಕವಾಗಿ ರಾಷ್ಟ್ರೀಯ ಶಿಕ್ಷಣ ನೀಡಲಾಗುತ್ತಿದೆ. ಈ ಬಾರಿ 20 ವಿಶೇಷಚೇತನ ಮತ್ತು 20 ಮಂದಿಬುದ್ಧಿಮಾಂದ್ಯ ವಿದ್ಯಾರ್ಥಿಗಳು ಕೂಡಾ ಕ್ರೀಡೋತ್ಸವದಲ್ಲಿ ಪಾಲ್ಗೊಳ್ಳುವರು ಎಂದರು.
ಈ ಹಿಂದೆ ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಸಹಿತ ಹಲವು ಮುಖ್ಯಮಂತ್ರಿಗಳು ಕ್ರೀಡೋತ್ಸವಕ್ಕೆ ಆಗಮಿಸಿದ್ದು, ಈ ಬಾರಿ ವಿಶೇಷ ಭದ್ರತೆ ಹೊಂದಿರುವ ಆರ್ ಎಸ್ ಎಸ್ ವರಿಷ್ಟ ಮೋಹನ್ ಭಾಗವತ್ ಪ್ರಥಮ ಬಾರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅಂದು ಸಂಜೆ ಗಂಟೆ 6.30ರಿಂದ 8 ಗಂಟೆ ತನಕ ಮಾತ್ರ ಕ್ರೀಡೋತ್ಸವ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರಕಟ್ಟೆ, ವಕೀಲ ಪ್ರಸಾದ್ ಕುಮಾರ್ ರೈ, ಲಕ್ಷ್ಮೀ ರಘುರಾಜ್, ಅಕ್ಷತಾ ಕಾವೂರು ಇದ್ದರು.