ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನಲ್ಲಿ ಅಂತರ್ ಕಾಲೇಜು ಮಟ್ಟದ “ಉತ್ಕರ್ಷ” ಫೆಸ್ಟ್ ಶೈಕ್ಷಣಿಕ ಸ್ಪರ್ಧೆ

ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದೊಂದಿಗೆ ಭಾರತೀಯ ಸಂಸ್ಕೃತಿ,ಶ್ರೇಷ್ಠತೆ, ಸಂಪ್ರದಾಯಗಳ ರಕ್ಷಣೆಗೆ ಪಣತೊಡಬೇಕು, ದೇಶವನ್ನು ಶ್ರೇಷ್ಠ ಮಟ್ಟಕ್ಕೇರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಪುತ್ರೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು, ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ಪದವಿಪೂರ್ವ ವಿಭಾಗದ ವಿದ್ಯಾರ್ಥಿಗಳಿಗಾಗಿ ಶುಕ್ರವಾರದಂದು ಆಯೋಜಿಸಲಾಗಿದ್ದ ಅಂತರ್ ಕಾಲೇಜು ಮಟ್ಟದ “ಉತ್ಕರ್ಷ” ಫೆಸ್ಟ್ ಶೈಕ್ಷಣಿಕ ಸ್ಪರ್ಧಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ್ದು, ಕೇವಲ ಅಂಕ- ಶ್ರೇಯಾಂಕಗಳು ಮಾತ್ರವಲ್ಲದೆ, ಮನುಷ್ಯನಾಗಿ ಬಾಳಲು ಬೇಕಿರುವ ಸಂಸ್ಕಾರಯುತ ಶಿಕ್ಷಣ ಕೊಡುವ ಪ್ರಯತ್ನ ಕಲ್ಲಡ್ಕ ಶ್ರೀರಾಮ ವಿದ್ಯಾ ಸಂಸ್ಥೆಯಲ್ಲಿ ನಿರಂತರವಾಗಿ ನಡೆಯುತ್ತಿದೆ ಎಂದರು.
ದೀಪ ಪ್ರಜ್ವಲನದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಆ ಬಳಿಕ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಿವೃತ್ತ ಪೋಲಿಸ್ ಅಧಿಕಾರಿ ರಾಮಪ್ರಸಾದ್ ಅವರು ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗಿ ತಮ್ಮ ಜೀವನವನ್ನು ನಾಶಪಡಿಸಿಕೊಳ್ಳುವ ಪ್ರಸಕ್ತ ಕಾಲಘಟ್ಟದಲ್ಲಿ ಸಂಸ್ಕಾರಯುತ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭರವಸೆ ನೀಡುವ ಕೆಲಸವನ್ನು ಶ್ರೀರಾಮ ವಿದ್ಯಾಸಂಸ್ಥೆಯು ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಪ್ರಗತಿಪರ ಕೃಷಿಕರಾದ ಶಿವಪ್ಪ ಪೂಜಾರಿ, ವಿದ್ಯಾಕೇಂದ್ರದ ಆಡಳಿತ ಮಂಡಳಿ ಸದಸ್ಯರಾದ ಧೀರಜ್ ಬಲ್ಲೆಕೋಡಿ, ಸುಜಿತ್ ಕೊಟ್ಟಾರಿ, ಉಪಪ್ರಾಂಶುಪಾಲ ಯತಿರಾಜ್, ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾರ್ಥಿಗಳಾದ ಕು. ದಿವ್ಯಲಕ್ಷ್ಮಿ ಸ್ವಾಗತಿಸಿ, ಜಯಸೂರ್ಯ, ಕು. ಪುನೀತಾ ಕಾರ್ಯಕ್ರಮವನ್ನುವನ್ನು ನಿರೂಪಿಸಿದರು.