ಬಂಟ್ವಾಳ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮುಡಿಗೇರಿಸಿಕೊಂಡ ಕಲಾವಿದ ಮನೋಜ್ ಕನಪಾಡಿ
ಕಳೆದ 20 ವರ್ಷಗಳಿಂದ ಕಲಾಕೃತಿಗಳ ತಯಾರಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಕಲಾವಿದ ಮನೋಜ್ ಕನಪಾಡಿ ಅವರು 2024ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಬಾಲ್ಯದಲ್ಲಿಯೇ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದರು ಇದಕ್ಕೆ ಪೂರಕವಾಗಿ ಮಂಗಳೂರಿನ ಮಹಾಲಸ ಕಾಲೇಜಿನಲ್ಲಿ ಡಿಪ್ಲೊಮೋ ಪದವಿ ಬಳಿಕ ಕಲಾಕೃತಿ ರಚನೆಯಲ್ಲಿ ವೃತ್ತಿ ಆರಂಭಿಸಿದರು. ಈ ಮೂಲಕ ಮಣ್ಣಿನ ಮೂರ್ತಿಗಳ ರಚನೆಯಲ್ಲಿ ತೊಡಗಿಸಿಕೊಂಡರು. ತದನಂತರದಲ್ಲಿ ಫೈಬರ್ ಕಲಾಕೃತಿಗಳನ್ನು ತಯಾರಿಸುತ್ತ ಕಾರ್ಯಪ್ರವೃತ್ತರಾದರು.
ಬ್ರಹ್ಮರಕೊಟ್ಲುವಿನಲ್ಲಿ ಕುಕ್ಕೆಶ್ರೀ ಕಲಾಕೇಂದ್ರದಲ್ಲಿ ಜನರ ಬೇಡಿಕೆ ಅನುಗುಣವಾದ ಫೈಬರ್ ಮೂರ್ತಿ ಸಿದ್ದಪಡಿಸಿ ಮಾರಾಟ ಮಾಡುವ ಮೂಲಕ ಪ್ರವೃತ್ತಿಯನ್ನು ವೃತ್ತಿಯಾಗಿಸಿಕೊಂಡರು. ಈಗಾಗಲೇ ಇವರ ಕಲಾಕೃತಿ ರಚನೆಯ ಸಾಧನೆಗಾಗಿ ಹತ್ತು ಹಲವು ಪ್ರಶಸ್ತಿಗಳು ಹಾಗೂ ಸನ್ಮಾನಗಳ ಮೂಲಕ ಇವರನ್ನು ಗೌರವಿಸಲಾಗಿದೆ.
ಆಕರ್ಷಣೀಯ ಹಾಗೂ ವಿನೂತನ ಶೈಲಿಯ ಕಲಾಕೃತಿ ತಯಾರಿಯಲ್ಲಿ ಪರಿಣತಿ ಪಡೆದಿದ್ದು, ಛತ್ರಪತಿ ಶಿವಾಜಿ, ಈಶ್ವರ, ಕತ್ತೆತ್ತಿ ನೋಡುವ ಜಿರಾಫೆ, ಯಕ್ಷಗಾನ ಶೈಲಿ ಗೊಂಬೆ, ಕಂಬಳ ಕೋಣ, ಎತ್ತು ಉಳುಮೆ ಮಾಡುವ ರೈತ, ಗೀತೋಪದೇಶ, ಪ್ರಾಣಿ, ಪಕ್ಷಿ ಸೇರಿದಂತೆ ನೂರಾರು ಸ್ತಬ್ಧ ಚಿತ್ರ ರಚಿಸಿ ಎಲ್ಲರನ್ನು ಬೆರಗು ಮೂಡಿಸಿದ್ದಾರೆ. ಈಗಾಗಲೇ ವಿವಿಧ ರಸ್ತೆಗಳ ಸರ್ಕಲ್‌ಗಳಿಗೆ ಮೂರ್ತಿ, ರೆಸಾರ್ಟ್, ಗಾರ್ಡನ್, ಹೊಟೇಲ್ ಗಳಿಗೆ ವಿಗ್ರಹಗಳು ಇವರ ಕೈಚಳಕದಲ್ಲಿ ಮೂಡಿ ಬಂದಿದೆ.