Published On: Mon, Oct 7th, 2024

ಬಂಟ್ವಾಳ: ಮೈಸೂರು ಮೂಲದ ದಂಪತಿಗಳ ಮನೆಯಲ್ಲಿ ಬೊಂಬೆಗಳ ಲೋಕವೇ ಸೃಷ್ಟಿ

ದಸರಾ ಎಂದರೆ ಮೊದಲು ನೆನಪಿಗೆ ಬರುವುದೇ ಈ ಬೊಂಬೆಗಳು. ಸಿಂಗರಿಸಿಟ್ಟ ಬಣ್ಣ ಬಣ್ಣದ ಸಾಲು ಬೊಂಬೆಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಪುರಾಣದ ಕಥೆಯನ್ನು ಹೇಳುವುದರ ಜೊತೆಗೆ ಹೊಸ ಲೋಕಕ್ಕೆ ಕರೆದುಕೊಂಡು ಹೋಗಿದ್ದಾರೆ ಈ ದಂಪತಿಗಳು. ಹೌದು, ಬಿ.ಸಿ.ರೋಡಿನಲ್ಲಿ ಮೈಸೂರು ಮೂಲದ ದಂಪತಿಗಳು ಹೊಸದಾದ”ಬೊಂಬೆಲೋಕ” ವನ್ನೇ ಸೃಷ್ಟಿಸಿದ್ದಾರೆ. ಕೆ.ಎನ್.ಆರ್. ಕನ್ಸ್ ಸ್ಟ್ರಕ್ಷನ್ ಕಂಪನಿಯಲ್ಲಿ ಪಿ.ಆರ್.ಒ. ಆಗಿ ಕೆಲಸ ಮಾಡುತ್ತಿರುವ ನಂದಕುಮಾರ್ ಹಾಗೂ ಅವರ ಪತ್ನಿ ಪುಷ್ಪಾ ನಂದಕುಮಾರ್ ರವರೇ ದಸರಾ ಬೊಂಬೆಗಳನ್ನು ಮನೆಯಲ್ಲಿ ಇಟ್ಟಿದ್ದಾರೆ.

ಕಳೆದ ಹದಿನಾರು ವರ್ಷಗಳಿಂದ ಪ್ರತೀ ವರ್ಷವೂ ಬೊಂಬೆಗಳ ಆರಾಧನೆಯನ್ನು ಮಾಡಿಕೊಂಡು ಬರುತ್ತಿದ್ದು, ಈ ಬಾರಿ 17 ನೇ ವರ್ಷಕ್ಕೆ ಹೊಸತನದಿಂದಲೇ ಗಮನ ಸೆಳೆದಿದ್ದಾರೆ. ವೃತ್ತಿಯ ವರ್ಗಾವಣೆಯಿಂದಾಗಿ ಕಳೆದ‌ ನಾಲ್ಕೈದು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆಲೆಸಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಉಪ್ಪಿನಂಗಡಿಯಲ್ಲಿದ್ದರು.

ಆದರೆ ಇದೀಗ ಬಿ.ಸಿ.ರೋಡ್ ನ ಕಿಂಗ್ಸ್ ಕೋರ್ಟ್ ಅಪಾರ್ಟ್ ಮೆಂಟ್ ನಲ್ಲಿ ನೆಲೆಸಿದ್ದು, ನಂದಕುಮಾರ್ ದಂಪತಿಯ ಮನೆಯಲ್ಲಿ ಬೊಂಬೆಗಳನ್ನು ಇಟ್ಟು ಆರಾಧಿಸುತ್ತಿದ್ದಾರೆ. ವಿದ್ಯುತ್ ಅಲಂಕಾರ ಹಾಗೂ ಉಡುಗೆ ತೊಡುಗೆಗಳಿಂದ ಅಲಂಕರಿಸಿರುವ ದೇವದೇವತೆಯರ ದೃಶ್ಯವೈಭವ, ಮೈಸೂರು ದಸರಾ ಮೆರವಣಿಗೆ ಸೇರಿದಂತೆ ಹೆಣ್ಣುಮಗುವಿನ ಜೀವಿತಾವಧಿಯ ಹಂತಗಳು ಎಲ್ಲರ ಕಣ್ಮನ ಸೆಳೆಯುತ್ತಿದೆ.

ಬೊಂಬೆಗಳನ್ನು ಇಟ್ಟಿರುವ ಪುಷ್ಪಾ ನಂದಕುಮಾರ್ ಅವರು, ತಮ್ಮ ಮನೆ ದೇವರು ಕೃಷ್ಣ, ವಿಘ್ನ ನಿವಾರಕ ಗಣಪತಿ, ವಿಷ್ಣುವಿನ ಹತ್ತು ಅವತಾರಗಳು, ಸಪ್ತಮಾತೃಕೆಯರು, ರಾಮ, ಲಕ್ಷ್ಮಣ, ಸೀತೆ, ಆಂಜನೇಯ ಬೊಂಬೆಗಳು, ರಾಮನ ಪಟ್ಟಾಭಿಷೇಕ ಕಾರ್ಯಕ್ರಮದ ಸೀನ್, ನೃತ್ಯಗಾತಿಯರ ಬೊಂಬೆಗಳು, ವೆಂಕಟರಮಣ, ಶ್ರೀದೇವಿ, ಭೂದೇವಿ, ಅಷ್ಟಲಕ್ಷ್ಮೀಯರು, ವಿಷ್ಣುವಿನ ಹತ್ತು ಅವತಾರಗಳು, ಗೌರಿ, ನವದುರ್ಗೆಯರ ಬೊಂಬೆಗಳು ಇಲ್ಲಿವೆ. ಪ್ರತಿದಿನ ನವದುರ್ಗೆಯ ಅವತಾರಗಳನ್ನು ಇಡಲಾಗುತ್ತದೆ.

ಮಹಿಷಾಸುರನ ಬೊಂಬೆಯೂ ಇದೆ, ಚಾಮುಂಡಿ ಮಹಿಷನನ್ನು ಕೊಲ್ಲುವ ದೃಶ್ಯವೂ ಕಾಣಸಿಗುತ್ತದೆ. ಪಟ್ಟದ ಬೊಂಬೆ ಎಂದು ಹೇಳಲಾಗುವ ರಕ್ತ ಚಂದನ ಮರದ ಬೊಂಬೆಗಳನ್ನು ಸಂಪ್ರದಾಯದ ಪ್ರಕಾರ ಇಡಲಾಗಿದೆ. ಅದರ ಅಕ್ಕಪಕ್ಕ ಲಕ್ಷ್ಮೀ ಸರಸ್ವತಿ ಬೊಂಬೆಗಳು ಇವೆ. ಇದರಲ್ಲಿ ಹಿಂದಿನ ಕಾಲದ ಮದುವೆ ಸಂಪ್ರದಾಯ, ತೊಟ್ಟಿಲು ಇರುವ ದೃಶ್ಯಗಳಿವೆ. ಶ್ರೀಕೃಷ್ಣ ವಿವಿಧ ಭಕ್ಷ್ಯಭೋಜನಗಳನ್ನು ಹಾಕಿಕೊಂಡು ಊಟ ಮಾಡುವ ದೃಶ್ಯಗಳು ಇಲ್ಲಿವೆ. ಅಲ್ಲದೆ, ಸಂಗೀತಗಾರರು, ವಾದ್ಯಗೋಷ್ಠಿಗಳನ್ನು ಕಾಣಬಹುದು.

ಸಾಂಪ್ರದಾಯಿಕ ಬೊಂಬೆಗಳ‌ ಜೊತೆಯಲ್ಲಿ ಹೆಣ್ಣುಮಗಳು ಜೀವಿತಾವಧಿಯಲ್ಲಿ ಸಂಭ್ರಮಿಸುವ ವಿವಿಧ ಮಜಲುಗಳನ್ನು ತೊಟ್ಟಿಲಿನಿಂದ ತೊಟ್ಟಿಲವರೆಗೆ ಎನ್ನುವ ವಿಶಿಷ್ಟ ಪರಿಕಲ್ಪನೆಯಲ್ಲಿ ಜೋಡಿಸಿಟ್ಟಿದ್ದೇವೆ. ಮೈಸೂರು ದಸರಾ ಮೆರವಣಿಗೆ ನೋಡುವುದೇ ಕಣ್ಣಿಗೆ ಹಬ್ಬ. ಮೈಸೂರಿನವರಾದ ನಾವು ದಸರಾ ಸಂದರ್ಭ ಮನೆಯಲ್ಲೇ ಬೊಂಬೆಗಳನ್ನು ಇಟ್ಟು ಮನೆಯಲ್ಲೇ ನವರಾತ್ರಿ ಆಚರಿಸುತ್ತೇವೆ. ಹೀಗಾಗಿ ಅದರ ದೃಶ್ಯವೈಭವವನ್ನು ಮೂಡಿಸಲಾಗಿದೆ.

ಆನೆ, ಒಂಟೆ, ಕುದುರೆ ಸಾಲಿನೊಂದಿಗೆ ವಾಹನಗಳು. ಆನೆ‌ ಮೇಲೆ‌ ಮಹಾರಾಜರು, ಆನೆಯ ಮೇಲೆ ಅಂಬಾರಿ‌ಸಹಿತ ಮೈಸೂರಿನ ಸಯ್ಯಾಜಿರಾವ್ ಸರ್ಕಲ್ ನಲ್ಲಿ ಸಾಗುತ್ತಿರುವ ದಸರಾ ಮೆರವಣಿಗೆಯ ದೃಶ್ಯದ ಪ್ರತಿಕೃತಿ ನಾವು ನಿರ್ಮಿಸಿದ್ದೇವೆ ಎನ್ನುತ್ತಾರೆ ಪುಷ್ಪಾ.ಹತ್ತು ದಿನ ನವರಾತ್ರಿಯಲ್ಲಿ ಏನೇನು ನಡೆಯುತ್ತದೆ ಎಂಬುದನ್ನು ಬೊಂಬೆಗಳಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇವೆ ಎಂದು ಖುಷಿ ವ್ಯಕ್ತಪಡಿಸಿದರು. ಇತ್ತ ಪತಿ ನಂದಕುಮಾರ್ ಮಾತನಾಡಿ, ಕೆಲಸದ ಕಾರಣ ಬೇರೆ ಬೇರೆ ಪ್ರದೇಶಗಳಲ್ಲಿ ನಾವು ವಾಸಿಸುತ್ತಿದ್ದೇವೆ. ಆದರೆ ನಮ್ಮ ಸಂಪ್ರದಾಯವನ್ನು ಬಿಟ್ಟಿಲ್ಲ, ಇದು ನಮಗೆ ಖುಷಿಕೊಟ್ಟಿದೆ ಎಂದು ಹೇಳಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter