ಬಂಟ್ವಾಳ : ಯಾವುದೇ ಒಂದು ಶಾಲೆಯ ಉಳಿವಿನಲ್ಲಿ ಆ ಶಾಲೆಯ ಪೋಷಕರು ಮತ್ತು ಹಿರಿಯ ವಿದ್ಯಾರ್ಥಿಗಳ ತಂಡ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ ಎಂದು ರಾಜ್ಯಮಟ್ಟದ ಶಿಕ್ಷಕರತ್ನ ಪ್ರಶಸ್ತಿ ಪುರಸ್ಕೃತೆ, ಮಜಿ ವೀರಕಂಭ ಶಾಲಾ ಶಿಕ್ಷಕಿ ಸಂಗೀತ ಶರ್ಮ ಹೇಳಿದರು.


ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ ಕಾರ್ಲ  ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ವತಿಯಿಂದ ಇಲ್ಲಿನ ಏಕೈಕ ಸರಕಾರಿ ಪ್ರಾಥಮಿಕ “ಕಾರ್ಲ ಶಾಲಾ ಉಳಿಸಿ,ಬೆಳೆಸುವ” ನಿಟ್ಟಿನಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ‌ ಅವರು ಮಾತನಾಡಿದರು.
ಶಾಲಾ ಶೈಕ್ಷಣಿಕ ವಿಚಾರಗಳಿಗೆ ಪೂರಕವಾದ ಚಟುವಟಿಕೆಗಳನ್ನು ನಡೆಸುವುದರ ಮೂಲಕ ಶಾಲೆಯ ಏಳಿಗೆಗಾಗಿ ಶ್ರಮಿಸುವಂತಾಗಬೇಕು.ಸರ್ಕಾರಿ ಶಾಲೆಗಳು ಬೆಳೆಯಬೇಕೆ ವಿನಹ ಯಾವುದೇ ಕಾರಣಕ್ಕೂ ಮುಚ್ಚಬಾರದು,ಮಕ್ಕಳನ್ನು ಆಕರ್ಷಿಸುವ ದೆಸೆಯಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸುವ ಮೂಲಕ ಮಕ್ಕಳನ್ನು  ಸೆಳೆಯುವ ಪ್ರಯತ್ನವನ್ನು ಮಾಡಬೇಕು ಎಂದರು.

ಶಾಲಾ ಹಿರಿಯ ವಿದ್ಯಾರ್ಥಿಗಳು ತಂಡವಾಗಿ ಶಾಲಾ ಅಭಿಮಾನಿಗಳನ್ನು ಜೊತೆ ಸೇರಿಸಿ ಉತ್ತಮ ಚಟುವಟಿಕೆಗಳನ್ನು ಮಾಡಿಸಲು ಎಲ್ಲರೂ ಕೈಜೋಡಿಸಬೇಕು, ಸಮಯ ಸಿಕ್ಕಾಗಲೆಲ್ಲಾ ಶಾಲಾ ಅಭಿವೃದ್ಧಿಯ ಕೆಲಸಗಳಲ್ಲಿ ತೊಡಗಿ ಕೊಳ್ಳುವಂತಾಗಬೇಕು ಎಂದು ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪ್ರವೀಣ ರವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ತಿಮ್ಮಪ್ಪ ಕೆ ಅವರು ಮಾತನಾಡಿ ,ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿದ ಬಳಿಕ ಮಗುವಿನ ಸರ್ವತೋಮುಖ  ಅಭಿವೃದ್ಧಿಯಲ್ಲಿ ಪೋಷಕರ ಪಾತ್ರವೂ ಮಹತ್ತರವಾಗಿರುತ್ತದೆ ಶಿಕ್ಷಕರ ಜೊತೆಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಳ್ಳಬೇಕು ಮತ್ತು ಶಾಲೆಗೆ ಅಗತ್ಯವಿರುವ ಬೌದ್ಧಿಕ ಅಭಿವೃದ್ದಿಗೆ ಜೊತೆಯಾಗಬೇಕು ಎಂದರು.

ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಜಾನಕಿ ಪ್ರಸ್ತುತ ಶಾಲಾ ಸ್ಥಿತಿ ಗತಿಗಳನ್ನು ವಿವರಿಸಿ ಶಾಲಾಗೆ ಬೇಕಾದ ಅವಶ್ಯಕತೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು.
ಪೆರ್ನೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆಭಾರತಿ , ಸದಸ್ಯರಾದ ವನಿತಾ , ಮುತ್ತಪ್ಪ ಸಾಲಿಯಾನ್, ಧರ್ಮಸ್ಥಳ ಗ್ರಾಮಾಭಿವೃದ್ಧಿ  ಯೋಜನೆಯ  ಸೇವಾ ಪ್ರತಿನಿಧಿಗಳಾದ ಶಶಿಕಲಾ,ತ್ರಿವೇಣಿ, ಶಾಲಾ ಹಿರಿಯ ವಿದ್ಯಾರ್ಥಿಗಳು, ಶಾಲಾಭಿಮಾನಿಗಳು, ಮಕ್ಕಳ ಪೋಷಕರು, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.
ಸಹ ಶಿಕ್ಷಕಿ ಯಶೋಧ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಶಾಲಾ ಆವರಣದಲ್ಲಿ ಗಿಡ ನಾಟಿ ಮಾಡಲಾಯಿತು. 

By Suddi9

Leave a Reply

Your email address will not be published. Required fields are marked *