ಬಂಟ್ವಾಳ: ಪೊಳಲಿ ಸೇತುವೆಯಲ್ಲಿ ಬಸ್ ಸಂಚಾರಕ್ಕೆ ಅವಕಾಶ ನೀಡದಿದ್ದರೆ ಕಾನೂನು ಕ್ರಮಕ್ಕೆ ಸಿದ್ಧ ಎಂದ ಬಸ್ ಮಾಲೀಕರ ಸಂಘ

ಬಂಟ್ವಾಳ: ಅಡ್ಡೂರು ಸೇತುವೆಯ ಬಗ್ಗೆ ಈವರೆಗೂ ಯಾವುದೇ ಕ್ರಮವನ್ನು ಜಿಲ್ಲಾಡಳಿತ ತೆಗೆದುಕೊಂಡಿಲ್ಲ. ಸೇತುವೆ ಬಿರುಕು ಬಿಟ್ಟಿದೆ. ಆ ಕಾರಣದಿಂದ ಅಲ್ಲಿ ಘನ ವಾಹನಗಳು ಸಂಚಾರಿಸದಂತೆ ಜಿಲ್ಲಾಧಿಕಾರಿ ಕಚೇರಿಯು ಏಕಾಏಕಿ ಸೇತುವೆ ಬಂದ್ ಮಾಡಿದ್ರು, ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿ ಎಂದರು ಅದಕ್ಕೂ ಜಿಲ್ಲಾಡಳಿತ ಸ್ಪಂದಿಸುತ್ತಿಲ್ಲ, ಸೇತುವೆ ಸಾಮರ್ಥ್ಯ ಪರೀಕ್ಷಾ ಯಂತ್ರ ಬರಲಿ ಎಂದು ಹೇಳಿದ್ರು ಅದು ಬಂದು ಪರೀಕ್ಷೆ ಮಾಡಿ ಒಂದು ತಿಂಗಳು ಆಗುತ್ತಾ ಬರುತ್ತಿದೆ. ಅದರು ಇನ್ನು ವರದಿ ಬಂದಿಲ್ಲ. ಇದರಿಂದ ಜನರಿಗೆ, ಬಸ್ ಗಳಿಗೆ ಎಷ್ಟು ತೊಂದರೆ ಆಗುತ್ತಿದೆ ಎಂಬುದು ಜಿಲ್ಲಾಧಿಕಾರಿಗಳಿಗೆ ಅರ್ಥ ಆಗುತ್ತಿಲ್ಲ. ಇದೀಗ ಬಸ್ ಮಾಲೀಕರು ಒಂದು ಮಹತ್ವದ ನಿರ್ಧಾರಕ್ಕೆ ಬಂದಿದ್ದಾರೆ. ಇಲ್ಲಿದೆ ನೋಡಿ.
ಅಡ್ಡೂರು ಸೇತುವೆಯಲ್ಲಿ ಘನ ವಾಹನ ಸಂಚಾರ ನಿಷೇಧದಿಂದ ಬಿ.ಸಿ.ರೋಡು-ಪೊಳಲಿ-ಕೈಕಂಬ ರೂಟ್‌ನಲ್ಲಿ ಸಂಚರಿಸುವ ಖಾಸಗಿ ಬಸ್ಸುಗಳಿಗೆ ದೊಡ್ಡ ಹೊಡೆತ ಬಿದ್ದಿದೆ. ಈ ಕಾರಣದಿಂದ ಬಸ್ಸು ಮಾಲಕರು ಈ ತಿಂಗಳಾಂತ್ಯಕ್ಕೆ ಅನಿವಾರ್ಯವಾಗಿ ಕಾನೂನು ಪ್ರಕಾರ ತಮ್ಮ ಟ್ಯಾಕ್ಸ್ ಸರಂಡರ್ ಮಾಡಿ ಬಸ್ಸು ಸಂಚಾರ ಸ್ಥಗಿತಗೊಳಿಸಲು ಚಿಂತನೆ ನಡೆಸಿದ್ದಾರೆ. ಸೇತುವೆಯಲ್ಲಿ ಘನ ವಾಹನ ನಿಷೇಧದಿಂದ ಪ್ರಸ್ತುತ ಬಸ್ಸುಗಳು ಬಿ.ಸಿ.ರೋಡಿನಿಂದ ಪೊಳಲಿ ಹಾಗೂ ಕೈಕಂಬದಿಂದ ಅಡ್ಡೂರುವರೆಗೆ ಸಾಗುತ್ತಿದ್ದು, ಇದರಿಂದ ಬಸ್ಸುಗಳಿಗೆ ಟ್ರಿಪ್ ಇಲ್ಲದಾಗಿದೆ.
ದಿನನಿತ್ಯ ಸುಮಾರು 300 ಕಿ.ಮೀ. ಓಡುತ್ತಿದ್ದ ಬಸ್ಸುಗಳು ಪ್ರಸ್ತುತ ಬರೀ 170-180 ಕಿ.ಮೀ. ಓಡುತ್ತಿವೆ. ಉಳಿದ ಹೊತ್ತಿನಲ್ಲಿ ಬಸ್ಸುಗಳು ನಿಂತೇ ಇರುತ್ತದೆ, ಮತ್ತೊಂದು ಕಡೆ ಟ್ರಿಪ್‌ನಿಂದ ಪ್ರಯಾಣಿಕರು ಕೂಡ ಇಲ್ಲವಾಗಿದ್ದು, ಜತೆಗೆ ಚಾಲಕ-ನಿರ್ವಾಹಕರಿಗೆ ದಿನದ ಪೂರ್ತಿ ವೇತನ ನೀಡಬೇಕಿರುವುದು ದೊಡ್ಡ ಹೊರೆಯಾಗುತ್ತಿದೆ ಎಂದು ಮಾಲಕರು ಹೇಳಿದ್ದಾರೆ. ಘನ ವಾಹನ ಸಂಚಾರ ನಿಷೇಧಗೊಂಡು ಒಂದು ತಿಂಗಳು ಹತ್ತು ದಿನವಾಗಿದೆ, ಜಿಲ್ಲಾಡಳಿತ ಬಸ್ಸು ಸಂಚಾರ ಅವಕಾಶ ನೀಡುವ ಕುರಿತು ಇನ್ನೂ ಕೂಡ ಸೂಕ್ತ ನಿರ್ಧಾರ ತೆಗೆದುಕೊಂಡಿಲ್ಲ. ಸೇತುವೆಯ ತಪಾಸಣೆಯ ವರದಿಯ ಕುರಿತು ಯಾವುದೇ ಆಲೋಚನೆ ಮಾಡುತ್ತಿಲ್ಲ. ಸೇತುವೆ ಮಧ್ಯೆ ಬಸ್ಸು ಓಡದೆ ಪ್ರಯಾಣಿಕರು ಕೈಕಂಬ-ಪೊಳಲಿ ಮಧ್ಯೆ ಆಟೋಗಳ ಮೂಲಕವೇ ಸಾಗುತ್ತಿದ್ದಾರೆ.
ಬಿ.ಸಿ.ರೋಡು-ಪೊಳಲಿ-ಕೈಕಂಬ-ಮಂಗಳೂರು, ಬಿ.ಸಿ.ರೋಡು-ಪೊಳಲಿ-ಕೈಕಂಬ-ಬಜ್ಪೆ-ಕಟೀಲು-ಕಿನ್ನಿಗೋಳಿ ರೂಟ್‌ನಲ್ಲಿ ದಿನನಿತ್ಯ ಸುಮಾರು 35 ಬಸ್ಸುಗಳು ನೂರಾರು ಟ್ರಿಪ್ ನಡೆಸುತ್ತಿದ್ದು, ಪ್ರಸ್ತುತ ಈ ಬಸ್ಸುಗಳಿಗೆ ಬರೀ ಅರ್ಥದಷ್ಟು ಟ್ರಿಪ್ ಮಾತ್ರ ಇದೆ. ಬಸ್ಸುಗಳು ಘನ ವಾಹನ ಅಲ್ಲವಾದರೂ ಸೇತುವೆಗೆ ಅಡ್ಡಲಾಗಿ ಗಾರ್ಡ್ ಅಳವಡಿಸಿರುವುದರಿಂದ ಬಸ್ಸುಗಳಿಗೆ ಸೇತುವೆ ದಾಟಲು ಸಾಧ್ಯವಾಗುತ್ತಿಲ್ಲ. ಘನ ವಾಹನಗಳು ಕೂಡ ಬಸ್ಸಿನಷ್ಟೇ ಎತ್ತರವಿರುವ ಕಾರಣ ಗಾರ್ಡ್ ತೆರವುಗೊಂಡರೆ ಬಸ್ಸಿನ ಜತೆಗೆ ಘನ ವಾಹನಗಳು ಕೂಡ ಸೇತುವೆ ದಾಟುತ್ತವೆ ಎಂಬುದು ಜಿಲ್ಲಾಡಳಿತದ ವಾದವಾಗಿದೆ.

ಸೇತುವೆಯ ಎರಡೂ ಭಾಗದಲ್ಲಿ ಲೋಕೋಪಯೋಗಿ ಇಲಾಖೆ ಪೊಲೀಸ್ ಚೆಕ್‌ಪೋಸ್ಟ್ ನಿಯೋಜನೆ ಮಾಡಿ ಗೇಟ್‌ಗಳನ್ನು ಅಳವಡಿಸಲಾಗಿದೆ, ಈ ಮೂಲಕ ಘನ ವಾಹನಗಳು ಸಂಚಾರಿಸದಂತೆ ನಿರ್ಬಂಧಿಸಲಾಗಿದೆ. ರಾತ್ರಿ ವೇಳೆ ಪೊಲೀಸ್ ನಿಯೋಜನೆ ಸಾಧ್ಯವಾಗದೇ ಇದ್ದರೆ, ರಾತ್ರಿ ಬಸ್ಸುಗಳ ಓಡಾಟ ನಿಂತ ಬಳಿಕ ಮೇಲಿನ ಗಾರ್ಡ್ ಅಳವಡಿಸಲಿ ಎಂಬುದು ಬಸ್ಸು ಮಾಲಕರ ಸಲಹೆಯಾಗಿದೆ.
ಬಸ್ಸುಗಳು ಪ್ರಯಾಣಿಕರನ್ನು ತುಂಬಿ ಸೇತುವೆಯಲ್ಲಿ ಸಾಗುವುದು ಅಪಾಯವಾದರೆ ಸೇತುವೆಯ ಎರಡೂ ಭಾಗದಲ್ಲಿ ಪ್ರಯಾಣಿಕರನ್ನು ಇಳಿಸಿ ಸೇತುವೆ ದಾಟಿದ ಬಳಿಕ ಮತ್ತೆ ಹತ್ತಿಸಿಕೊಳ್ಳಲು ಅವಕಾಶ ನೀಡಲಿ. ಈ ಮೂಲಕ ಬಸ್ಸುಗಳು ತೂಕವನ್ನು ತಗ್ಗಿಸಿಕೊಂಡು ಸೇತುವೆಗೆ ಯಾವುದೇ ರೀತಿಯ ಭಾರವಾಗದಂತೆ. ಜತೆಗೆ ಬಸ್ಸುಗಳಿಗೂ ತಮ್ಮ ರೂಟ್‌ನಲ್ಲಿ ಪೂರ್ತಿ ಟ್ರಿಪ್ ಮಾಡುವುದಕ್ಕೂ ಸಾಧ್ಯವಾಗುತ್ತದೆ ಎಂದು ಬಸ್ಸು ಮಾಲಕರು ಹೇಳುತ್ತಾರೆ.
ಸಂಚಾರ ಬಂದ್ ಮಾಡುವ ಯೋಚನೆಯನ್ನು ನಾವು ದ.ಕ. ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದೇವೆ. ಸದ್ಯದ ವ್ಯವಸ್ಥೆಯಲ್ಲಿ ನಷ್ಟದಿಂದ ಬಸ್ಸುಗಳನ್ನು ಓಡಿಸುವುದು ಅಸಾಧ್ಯವಾಗಿದ್ದು, ಹೀಗಾಗಿ ಅನಿವಾರ್ಯವಾಗಿ ಈ ತಿಂಗಳ ಅಂತ್ಯಕ್ಕೆ ಕಾನೂನು ಪ್ರಕಾರ ಟ್ಯಾಕ್ಸ್ ಸರಂಡರ್ ಮಾಡಿ ಸಂಚಾರ ಬಂದ್ ಮಾಡುವ ಯೋಚನೆಗೆ ಬಂದಿದ್ದೇವೆ. ಈಗಿನ ವ್ಯವಸ್ಥೆಯಲ್ಲಿ ಪ್ರಯಾಣಿಕರು ಕೂಡ ಬಸ್ಸನ್ನು ಅವಲಂಬಿಸದೆ ಪರ್ಯಾಯ ವ್ಯವಸ್ಥೆಯತ್ತ ಮುಖ ಮಾಡಿದ್ದು, ಎಲ್ಲಾ ಬಸ್ಸುಗಳು ನಷ್ಟದಿಂದ ಓಡುತ್ತಿವೆ ಎಂದು ಕಿನ್ನಿಗೋಳಿ ವಲಯ ಬಸ್ಸು ಮಾಲಕರ ಸಂಘ ಅಧ್ಯಕ್ಷರು ದುರ್ಗಾಪ್ರಸಾದ್ ಹೆಗ್ಡೆ ಹೇಳಿದ್ದಾರೆ.