ಬಂಟ್ವಾಳ: ಕಳೆದ ನ.1ರಂದು ಕನ್ನಡ ರಾಜ್ಯೋತ್ಸವ ಭಾಷಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಮಂಗಳೂರಿನ ನೆಹರೂ ಮೈದಾನದಲ್ಲಿ ಮಾಡಿರುವ ‘ಮಂಗಳೂರು ಮಹಾನಗರ ಸೀಮೆ ಎಣ್ಣೆ ಮುಕ್ತ ನಗರ’ ಘೋಷಣೆ ವಿಸ್ತಾರಗೊಂಡು ಉಳ್ಳಾಲ ಬಳಿಕ ಇದೀಗ ಬಂಟ್ವಾಳ ಪುರಸಭೆ ತಲುಪಿದೆ.

ಸ್ಥಳೀಯಾಡಳಿತವು ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ವಿಕಲಚೇತನರಿಗಾಗಿ ಮೀಸಲಿಡುವ ಶೇ.22.75 ಮತ್ತು ಶೇ.7.25 ಹಾಗೂ ಶೇ.3ರ ಅನುದಾನದಲ್ಲಿ ಪ್ರತೀ ಅರ್ಹ ಕುಟುಂಬಕ್ಕೆ ಒಂದು ಅಡುಗೆ ಅನಿಲ ಜಾಡಿ ಸಹಿತ ಸ್ಟೌವ್ ಮತ್ತು ರೆಗ್ಯುಲೇಟರ್ ಹಾಗೂ ಪೈಪ್ ನೀಡಲಾಗುತ್ತದೆ. ಈಗಾಗಲೇ ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 2ಸಾವಿರ ಮಂದಿ ಪೈಕಿ 1ಸಾವಿರ ಮಂದಿಗೆ ಅನಿಲ ಸಂಪರ್ಕ ಕಲ್ಪಿಸಲಾಗಿದ್ದು, ಉಳ್ಳಾಲ ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 500 ಮಂದಿ ಪೈಕಿ 250 ಮಂದಿಗೆ ಸಂಪರ್ಕ ಒದಗಿಸಲಾಗಿದೆ.

ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ತಾಲ್ಲೂಕು ಕಚೇರಿಯಲ್ಲಿ ಆಹಾರ ಶಾಖೆ ಎದುರು ಪಡಿತರ ಚೀಟಿ ಪಡೆಯಲು ನಾಗರಿಕರು ಗುರುವಾರ ಸಾಲುಕಟ್ಟಿ ನಿಂತಿರುವ ದೃಶ್ಯ.
4btl-Ration
ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 42ಸಾವಿರ ಮಂದಿ ಜನಸಂಖ್ಯೆ ಹೊಂದಿದ್ದು, ಈ ಪೈಕಿ 1,907 ಮಂದಿ ಬಿಪಿಎಲ್ ಮತ್ತು 299ಮಂದಿ ಎಪಿಎಲ್ ಪಡಿತರ ಹೊಂದಿದ್ದಾರೆ.
ಶೇ.22.75ರ ಯೋಜನೆಯಡಿ ಈಗಾಗಲೇ ಒಟ್ಟು ರೂ 30,0785 ಲಕ್ಷ ವೆಚ್ಚದಲ್ಲಿ 54 ಮಂದಿ ಮತ್ತು ಶೇ.3ರ ಯೋಜನೆಯಡಿ ರೂ.1.50ಲಕ್ಷ ವೆಚ್ಚದಲ್ಲಿ 24 ಮಂದಿಗೆ ಅನಿಲ ಸಂಪರ್ಕ ನೀಡಲಾಗಿದೆ.

ಈ ಯೋಜನೆಯಡಿ ಪ್ರತೀ ಅನಿಲ ಸಂಪರ್ಕಕ್ಕೆ ರೂ 4ಸಾವಿರ ವೆಚ್ಚವಾಗುತ್ತಿದ್ದು, ಸಂಬಂಧಪಟ್ಟ ಸರ್ಕಾರಿ ಅಧಿಕಾರಿ ಮತ್ತು ಸಿಬ್ಬಂದಿವರ್ಗ ಇಚ್ಛಾಶಕ್ತಿಯಿಂದ ಕಾರ್ಯನಿರ್ವಹಿಸಿದರೆ ತ್ವರಿತವಾಗಿ ಯೋಜನೆ ಅನುಷ್ಠಾನ ಪೂರ್ಣಗೊಳಿಸಬಹುದು ಎಂದು ಬಂಟ್ವಾಳ ಪುರಸಭೆಗೆ ಗುರುವಾರ ಭೇಟಿ ನೀಡಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಿಲ್ಲಾ ಉಪನಿರ್ದೇಶಕ ಶರಣಬಸಪ್ಪ ‘ ಸುದ್ದಿ9 ಗೆ ತಿಳಿಸಿದ್ದಾರೆ.
ತಾಲ್ಲೂಕಿನಲ್ಲಿ ಈಗಾಗಲೇ ಒಟ್ಟು 78,366 ಮಂದಿ ಪಡಿತರ ಚೀಟಿ ಹೊಂದಿದ್ದು, ಈ ಪೈಕಿ ಬಿಪಿಎಲ್-41,179, ಅಂತ್ಯೋದಯ-7,284, ಎಪಿಎಲ್-29,903 ಹೊಂದಿದ್ದಾರೆ. ಇನ್ನೊಂದೆಡೆ ಬಯೋಮೆಟ್ರಿಕ್ ಮತ್ತು ಮೊಬೈಲ್ ಸಂದೇಶ ಕಳುಹಿಸಿಲ್ಲ ಎಂಬ ನೆಪದಲ್ಲಿ 943 ಮಂದಿ ಪಡಿತರ ಚೀಟಿ ರದ್ದುಗೊಂಡಿದೆ ಎಂಬ ಆರೋಪವೂ ಇದೆ. ಇದನ್ನು ಮುಂದಿನ 15 ದಿನದೊಳಗೆ ಸರಿಡಪಡಿಸಲಾಗುವುದು ಎಂದು ಅವರು ತಿಳಿಸಿದರು.

ತಾಲ್ಲೂಕಿನಲ್ಲಿ ಒಟ್ಟು 31,764 ಮಂದಿ ಅನಿಲ ಸಂಪರ್ಕ ಹೊಂದಿದ್ದು, ಬಂಟ್ವಾಳದಲ್ಲಿ ಭಾರತ್, ಫರಂಗಿಪೇಟೆ ಮತ್ತು ವಿಟ್ಲದಲ್ಲಿ ಇಂಡಿಯನ್ ಹಾಗೂ ವಾಮದಪದವಿನಲ್ಲಿ ಹಿಂದೂಸ್ತಾನ್ ಕಂಪೆನಿಗೆ ಸೇರಿದ ಅನಿಲ ಸಂಪರ್ಕ ಮತ್ತು ಪೂರೈಕೆ ಏಜೆನ್ಸಿಗಳಿವೆ. ಈ ಏಜೆನ್ಸಿಗಳು ಅನಿಲ ಸಂಪರ್ಕ ಮತ್ತು ಸಾಗಾಟ ಸಂದರ್ಭದಲ್ಲಿ ಗ್ರಾಹಕರಿಗೆ ಸೂಕ್ತ ರಶೀದಿ ನೀಡದೆ ಸತಾಯಿಸುತ್ತಿರುವ ಬಗ್ಗೆಯೂ ಗ್ರಾಹಕರಿಂದ ಆರೋಪ ಕೇಳಿ ಬಂದಿದೆ.

ಒಟ್ಟಿನಲ್ಲಿ ಬಂಟ್ವಾಳ ತಾಲ್ಲೂಕು ಕಚೇರಿ ಆಹಾರ ಶಾಖೆಯಲ್ಲಿ ಪಡಿತರ ಚೀಟಿ ಪಡೆಯಲು ಸೇರಿದಂತೆ ಹೆಸರು ತಿದ್ದುಪಡಿಗೆ ಪ್ರತಿದಿನ ಬಂದು ಸಾಲುಕಟ್ಟಿ ನಿಲ್ಲುವ ಕಾಯಕ ತಪ್ಪುವುದಿಲ್ಲ ಎಂಬ ಉದ್ಘಾರ ಇಲ್ಲಿನ ನಾಗರಿಕರದ್ದು.
ಈ ಶಾಖೆಯಲ್ಲಿ ಸಿಬ್ಬಂದಿ ಕೊರತೆ ಜೊತೆಗೆ ಒಟ್ಟು ಮೂರು ಕಂಪ್ಯೂಟರ್ ಮಾತ್ರ ಇದೆ.ಇದರಲ್ಲಿ ಒಂದು ಕಂಪ್ಯೂಟರ್ ಬಾಡಿಗೆಗೆ ತರಿಸಿಕೊಂಡಿರುವುದು ಎಂಬ ಅಳಲು ಇಲ್ಲಿನ ಸಿಬ್ಬಂದಿಗಳಿಂದವ್ಯಕ್ತವಾಗಿದೆ.

ಮೋಹನ್ ಕೆ.ಶ್ರೀಯಾನ್

By suddi9

Leave a Reply

Your email address will not be published. Required fields are marked *