ಕ್ರೀಡೆಯ ಮುಖೇನ ಸಂಸ್ಕೃತಿಯ ಅರಿವು ಜಾಗೃತವಾಗಲಿ: ಶಾಸಕ ರಾಜೇಶ್ ನಾಯ್ಕ್ ಆಶಯ
ಬಂಟ್ಚಾಳ: ಕೃಷಿಯನ್ನೇ ತಮ್ಮ ಬದುಕಾಗಿಸಿ ಕಠಿಣ ಪರಿಶ್ರಮದಿಂದ ದುಡಿದು ನಮ್ಮ ಹಿರಿಯರು ಜೀವನ ಸಾಗಿಸುತ್ತಿದ್ದರು. ಆದರೆ ಈಗ ಯುವಸಮುದಾಯ ಕೃಷಿಯಿಂದ ದೂರ ಸರಿದಿದೆ. ಇಂತಹ ಕ್ರೀಡಾಕೂಟಗಳಿಂದ ನಾವು ವರ್ಷದಲ್ಲಿ ಒಂದು ದಿನವನ್ನು ಕೆಸರುಗದ್ದೆಯಲ್ಲಿ ಕಳೆದು ನಮ್ಮ ಮಣ್ಣು, ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಸಂಘಟನೆಗಳು ನಡೆಸುತ್ತಿರುವುದು ಶ್ಲಾಘನೀಯ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ನುಡಿದರು.
ಅವರು ಓಂ ಫ್ರೆಂಡ್ಸ್ ಕ್ಲಬ್(ರಿ.) ಕಳ್ಳಿಗೆ ಪಚ್ಚಿನಡ್ಕ ಇದರ ಬೆಳ್ಳಿಹಬ್ಬ ಪ್ರಯುಕ್ತ ರಾಧಾಕೃಷ್ಣ ಬಾಲಗೋಕುಲ ಪಚ್ಚಿನಡ್ಕ ಸಹಯೋಗದೊಂದಿಗೆ ಬಟ್ಟತ್ತೋಡಿ ಉಮೇಶ್ ಶೆಟ್ಟಿಯವರ ತಾರೆಮಾರ್ ಗದ್ದೆಯಲ್ಲಿ ನಡೆದ ಪ್ರಥಮ ವರ್ಷದ ಕೆಸರ‍್ದ ಕಂಡೊಡು ಕುಸಲ್ದ ಪಂಥ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದರು.
ತುಳುವರ ಹಿಂದಿನ ಜೀವನ ಪದ್ಧತಿ ಮರೆಯಾಗುತ್ತಿದೆ. ಕೃಷಿಕೆಲಸಗಳಿಗೆ ಕಾರ್ಮಿಕರು ಸಿಗುತ್ತಿಲ್ಲ. ಇದರಿಂದ ಬೇಸಾಯವಿಲ್ಲದೆ ಅನೇಕ ಗದ್ದೆಗಳು ಹಡಿಲುಭೂಮಿಯಾಗಿ ಪರಿವರ್ತನೆಗೊಂಡಿದೆ. ಈ ಬಗ್ಗೆ ಯುವಸಮುದಾಯ ಗಂಭೀರವಾಗಿ ಚಿಂತಿಸುವ ಅಗತ್ಯವಿದೆ. ಕ್ರೀಡಾಕೂಟದ ಜೊತೆಗೆ ಬೇಸಾಯವನ್ನು ಪರಿಚಯಿಸುವ ಕಾರ್ಯ ಸಂಘಟನೆಗಳು ಮಾಡಬೇಕಾಗಿದೆ ಎಂದು ಬಟ್ಟತ್ತೋಡಿ ಉಮೇಶ್ ಶೆಟ್ಟಿ ಅವರು ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉದ್ಯಮಿ ಭುವನೇಶ್ ಪಚ್ಚಿನಡ್ಕ ಗದ್ದೆಗೆ ಹಾಲೆರೆದು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಮಾಜಿ ಸಚಿವ ಬಿ.ರಮಾನಾಥ ರೈ, ಚಂದ್ರಾವತಿ ಸೇಸಪ್ಪ ಕೋಟ್ಯಾನ್, ಪ್ರಮುಖರಾದ ಚಂದ್ರಹಾಸ್ ಶೆಟ್ಟಿ ರಂಗೋಲಿ, ಶೇಖರ್ ಶೆಟ್ಟಿ ಪೊಟ್ಟುಗುಡ್ಡೆ, ವಿಶ್ವನಾಥ ದಾಸರಕೋಡಿ, ಡೇವಿಡ್ ರಾಡ್ರಿಗಸ್, ಶ್ರೀಮತಿ ಮಲ್ಲಿಕಾ ಡಿ. ರೈ ಪಚ್ಚಿನಡ್ಕ, ದಯಾನಂದ ರೈ, ಜಯಲಕ್ಷ್ಮೀ ಪಚ್ಚಿನಡ್ಕ, ದಿನೇಶ್ ಪಡೆಂಕಿಲ್‌ಮಾರ್, ಸತೀಶ್ ಅಮೀನ್ ಪಡು, ಪದ್ಮನಾಭ ಪೂಜಾರಿ ಪಡೆಂಕಿಲ್‌ಮಾರ್, ಉಮೇಶ್ ಶೆಟ್ಟಿ ಕಯ್ಯಾಳಿಮಾರ್‌ಗುತ್ತು, ವಿಜಯ್‌ಕುಮಾರ್ ಅಮ್ಟಾಡಿ,ರಾಮಚಂದ್ರ ಸುವರ್ಣ ಮತ್ತಿತರರಿದ್ದರು. ದಿನೇಶ್ ಸುವರ್ಣ ರಾಯಿ ನಿರೂಪಿಸಿದರು. ಹರೀಶ್ ಶೆಟ್ಟಿ ಪಡು ಸ್ವಾಗತಿಸಿದರು.
ಕ್ರೀಡೆಗೆ ಕಂಬಳದ ಮೆರುಗು :
ಕಳ್ಳಿಗೆ ಪಚ್ಚಿನಡ್ಕ ನಟ್ಟಿಲ್‌ಗುತ್ತು ದಿವಂಗತ ದೇವು ಪೂಜಾರಿಯವರ ಕೋಣಗಳ ಓಟ ಕ್ರೀಡೆಗೆ ಕಂಬಳದ ಮೆರುಗನ್ನು ನೀಡಿತು. ಮ್ಹಾಲಕರಾದ ಯಶೋಧರ ಪೂಜಾರಿಯವರು ಉಪಸ್ಥಿತರಿದ್ದರು.
ವಿಶೇಷ ಆಕರ್ಷಕ ಕ್ರೀಡೆಗಳುಅಡಿಕೆ ಹಾಳೆ ಎಳೆಯುವುದು, ನಿಧಿಶೋಧ, ರಿಲೇ, ೧೦೦ ಮೀ. ಓಟ, ವಾಲಿಬಾಲ್, ಕಬಡ್ಡಿ, ಹಗ್ಗಜಗ್ಗಾಟ, ಮಡಿಕೆ ಒಡೆಯುವುದು ಇನ್ನಿತರ ಆಕರ್ಷಕ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಬಿಸಿಲಿನ ಝಳಕ್ಕೆ ಸ್ಪರ್ಧಿಗಳಿಗೆ ತಂಪೆರೆಯಲು ಶವರ್ ವ್ಯವಸ್ಥೆ ಮಾಡಲಾಗಿತ್ತು. ಕೆಸರಿನ ಲೇಪನವನ್ನು ಹೊಂದಿದ್ದ ಕಾರ್ಯಕ್ರಮದ ಶೀರ್ಷಿಕೆಯ ಬ್ಯಾನರ್‌ಗೆ ನೀರನ್ನು ಸಿಂಪಡಿಸುವ ಮೂಲಕ ವಿಶೇಷವಾಗಿ ಅನಾವರಣಗೊಳಿಸಲಾಯಿತು.
ಬಿಸಿಲಿನ ತೀವ್ರತೆಯ ನಡುವೆಯೂ ಕ್ರೀಡಾಪಟುಗಳ ಉತ್ಸಾಹ ಕಡಿಮೆಯಾಗಲಿಲ್ಲ. ಅಚ್ಚುಕಟ್ಟಿನ ವ್ಯವಸ್ಥೆಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು.