ವಿವಿದೆಡೆಯಲ್ಲಿ ಈದ್ ಮಿಲಾದ್ ಆಚರಣೆ
ಬಂಟ್ವಾಳ : ಪವಿತ್ರ ಇಸ್ಲಾಮಿನ ಅಂತ್ಯ ಪ್ರವಾದಿ ಹಝ್ರತ್ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವಲ್ಲಂ ಅವರ ಜನ್ಮ ದಿನಾಚರಣೆಯ ಪ್ರಯುಕ್ತ ಸೋಮವಾರ ನಡೆದ ಈದ್ ಮಿಲಾದ್ ಆಚರಣೆ ಹಾಗೂ ಸ್ವಲಾತ್ ರ್ಯಾಲಿ ಕಾರ್ಯಕ್ರಮಗಳು ತಾಲೂಕಿನ ವಿವಿಧೆಡೆ ವಿವಿಧ ಮಸೀದಿ-ಮದ್ರಸಗಳ ಆಶ್ರಯದಲ್ಲಿ ಸಂಭ್ರಮ ಹಾಗೂ ಶಾಂತಿಯುತವಾಗಿ ನಡೆಯಿತು.

ತಾಲೂಕಿನ ಪಾಣೆಮಂಗಳೂರು, ಆಲಡ್ಕ, ಗುಡ್ಡೆಅಂಗಡಿ, ರೆಂಗೇಲು, ನಂದಾವರ, ಗೂಡಿನಬಳಿ, ಬಂಟ್ವಾಳ-ಕೆಳಗಿನಪೇಟೆ ಮೊದಲಾದೆಡೆ ಸ್ಥಳೀಯವಾಗಿ ಮಸೀದಿ ಆಡಳಿತ ಸಮಿತಿ ಪದಾಧಿಕಾರಿಗಳು ಹಾಗೂ ಮುದರ್ರಿಸ್-ಖತೀಬರುಗಳ ಮುಂದಾಳುತ್ವದಲ್ಲಿ ಮಿಲಾದ್ ಆಚರಣೆ ಹಾಗೂ ರ್ಯಾಲಿ ನೆರವೇರಿತು.

ರ್ಯಾಲಿ ಆಗಮಿಸುವ ದಾರಿಯುದ್ದಕ್ಕೂ ವಿವಿಧ ಸಂಘ-ಸಂಸ್ಥೆಗಳು ಹಾಗೂ ಖಾಸಗಿ ವ್ಯಕ್ತಿಗಳ ವತಿಯಿಂದ ಪಾನೀಯ, ಸಿಹಿ ತಿಂಡಿ, ಅನ್ನದಾನಗಳನ್ನು ವಿತರಿಸಲಾಯಿತು.

ಮದ್ರಸ ವಿದ್ಯಾರ್ಥಿಗಳ ದಫ್ ಪ್ರದರ್ಶನ, ಫ್ಲವರ್ ಶೋ, ತಾಲೀಮು ಪ್ರದರ್ಶನಗಳು ರ್ಯಾಲಿಗೆ ವಿಶೇಷ ಮೆರುಗು ನೀಡಿತ್ತು. ಕಾರ್ಯಕ್ರಮ ಯಾವುದೇ ಅಡೆ ತಡೆ ಇಲ್ಲದಂತೆ ನೆರವೇರಲು ಸ್ಥಳೀಯ ಯುವಕರ ಸ್ವಯಂ ಸೇವಕರ ತಂಡ ಹಾಗೂ ಬಂಟ್ವಾಳ ನಗರ ಠಾಣಾ ಪೊಲೀಸರು ಅಗತ್ಯ ಕ್ರಮಗಳನ್ನು ಕೈಗೊಂಡರು.


