ಹಿರಿಯರು ಒಂದು ಗ್ರಂಥಾಲಯವಿದ್ದಂತೆ: ಡಾ.ತುಕಾರಾಮ ಪೂಜಾರಿ
ಬಂಟ್ವಾಳ: ಅವಿಭಕ್ತ ಕುಟುಂಬ ಪದ್ಧತಿಯಲ್ಲಿ ಹಿರಿಯರಿಂದ ನಾವು ಕೇಳಿದ ಮತ್ತು ಪಡೆದ ಮಾಹಿತಿ ಈಗಲೂ ಮಾರ್ಗದರ್ಶಕವೆನಿಸುತ್ತದೆ. ಇಂದಿನ ಯುವಜನಾಂಗಕ್ಕೆ ತಾಳ್ಮೆಯ ಕೊರತೆ ಇದ್ದು ಹಿರಿಯರ ಸೂಚನೆಗಳನ್ನು ನಿರ್ಲಕ್ಷ್ಯ ಮಾಡಿ ಪರಿತಪಿಸುವುದನ್ನು ನಾವು ಕಾಣುತ್ತೇವೆ. ಜ್ಞಾನಸಂಪನ್ನ ಹಿರಿಯರೊಬ್ಬರನ್ನು ನಾವು ಕಳೆದುಕೊಂಡರೆ ಒಂದು ಗ್ರಂಥಾಲಯವೇ ನಾಶವಾದ ಪರಿಣಾಮ ಉಂಟಾಗುವುದೆಂದು ಬಿ.ಸಿ.ರೋಡಿನ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸ್ಥಾಪಕ ಪ್ರೋ. ಡಾ. ತುಕಾರಾಮ ಪೂಜಾರಿ ತಿಳಿಸಿದರು.
ಬಂಟ್ವಾಳದ ಸಂಚಯಗಿರಿಯಲ್ಲಿರುವ ಅಧ್ಯಯನ ಕೇಂದ್ರದಲ್ಲಿ ಜರಗಿದಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ (ರಿ ) ಬಂಟ್ವಾಳ ಇದರ ಕೇಂದ್ರ ಸಮಿತಿಯ ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾದ ಅಧ್ಯಕ್ಷರಾದ ಕಯ್ಯೂರು ನಾರಾಯಣ ಭಟ್ ಮಾತನಾಡಿ ಪ್ರತಿಷ್ಠಾನದ ವತಿಯಿಂದ ಸಹಕಾರಿ ಸಂಘದ ಸ್ಥಾಪನೆ,ಮೂರನೇ ವಾರ್ಷಿಕೋತ್ಸವ,ತಾಲೂಕು ಸಮಿತಿಗಳ ನವೀಕರಣ, ಕೇಂದ್ರ ಸಮಿತಿಯ ಸಭೆಯಲ್ಲಿ ಭಾಗವಹಿಸಲು ಪ್ರತಿನಿಧಿಗಳನ್ನು ಗುರುತಿಸುವ ಬಗ್ಗೆ ಮಾಹಿತಿ ನೀಡಿದರು.
ಡಾ. ತುಕಾರಾಮ ಪೂಜಾರಿ ಅವರನ್ನು ಹಿರಿಯರ ಸೇವಾ ಪ್ರತಿಷ್ಠಾನದ ವತಿಯಿಂದ ಗೌರವಿಸಲಾಯಿತು. ಹಿರಿಯ ಸದಸ್ಯರಾದ ಸೀತಾರಾಮ ಕೆ ಸಾಲೆತ್ತೂರು ಪ್ರತಿಷ್ಠಾನಕ್ಕೆ ನೀಡಿದ ಕೊಡುಗೆಗಾಗಿ ಗೌರವಿಸಲಾಯಿತು.
ಇದೇ ವೇಳೆ ತುಕಾರಾಮ ಪೂಜಾರಿಯವರು ತುಳು ಅದ್ಯಯನ ಕೇಂದ್ರದ ವಸ್ತು ಸಂಗ್ರಹಾಲಯದ ಬಗ್ಗೆ ಸಮಗ್ರ ಮಾಹಿತಿಯನ್ನು ಪ್ರತಿಷ್ಠಾನದ ಸದಸ್ಯರಿಗೆ ನೀಡಿದರು.
ಬಂಟ್ವಾಳ ಘಟಕದ ಅಧ್ಯಕ್ಷರಾದ ಕಾಂತಾಡಿ ಸೀತಾರಾಮ ಶೆಟ್ಟಿ,ಪ್ರತಿಷ್ಠಾನದ ಪದಾಧಿಕಾರಿಗಳಾದ ಡಾ. ಬಿ. ಯನ್ ಮಹಾಲಿಂಗ ಭಟ್, ಜಯರಾಮ ಪೂಜಾರಿ, ಗಣೇಶ್ ಭಟ್ ಕುತ್ರೋಟ್ಟು, ಸೀತಾರಾಮ ಶೆಟ್ಟಿ ಉಜಿರೆ, ಭವಾನಿ ಶಂಕರ ಶೆಟ್ಟಿ, ಪುತ್ತೂರು, ಚಂದ್ರಶೇಖರ ಆಳ್ವ ಪಡುಮಲೆ, ಉದಯಶಂಕರ ರೈ ಪುಣಚ ಮೊದಲಾದವರು ಉಪಸ್ಥಿತರಿದ್ದರು.
ಬಾಲಕೃಷ್ಣ ನಾಯಕ ಕೋಕಳ ಪ್ರಾರ್ಥಿಸಿದರು. ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಪ್ರಸ್ತಾವನೆಗೈದರು.
ಉಪಾಧ್ಯಕ್ಷರಾದ ಲೋಕೇಶ್ ಹೆಗ್ಡೆ ಪುತ್ತೂರು ಸ್ವಾಗತಿಸಿದರು. ಎಂ. ಜಯರಾಮ ಭಂಡಾರಿ ಧರ್ಮಸ್ಥಳ ವಂದಿಸಿದರು. ಸಹ ಸಂಚಾಲಕ ಭಾಸ್ಕರ ಬಾರ್ಯ ಕಾರ್ಯಕ್ರಮ ನಿರೂಪಿಸಿದರು.